ನಿರ್ಮಾಣ ಹಂತದ ಮನೆಗೆ ನುಗ್ಗಿದ ಕರಡಿ ಸೆರೆ
ಚಿಕ್ಕಮಗಳೂರು, ಜನವರಿ 12: ಚಿಕ್ಕಮಗಳೂರು ತಾಲೂಕಿನ ಸಿಂಗಟಗೆರೆ ಸಮೀಪದ ತೋಟದ ಮನೆಯೊಂದರಲ್ಲಿ ಭಾನುವಾರ ಸಂಜೆ ಕರಡಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಾಯದಿಂದ ಸೆರೆ ಹಿಡಿಯಲಾಗಿದೆ.
ವಲಯ ಅರಣ್ಯಾಕಾರಿ ತನುಜಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಸಿಂಗಟಗೆರೆ ಗ್ರಾಮದ ಸಮೀಪದಲ್ಲಿರುವ ಬೀರಮ್ಮ ನಿಂಗಪ್ಪ ಎಂಬುವರ ತೋಟದ ಮನೆಯಲ್ಲಿ ನೂತನವಾಗಿ ಕಟ್ಟಿಸುತ್ತಿದ್ದ ಮನೆಯಲ್ಲಿ ಭಾನುವಾರ ಕರಡಿಯೊಂದು ಬಂದು ಸೇರಿಕೊಂಡಿತ್ತು.
ಮಾಲೀಕ ಸಿಂಗಟಗೆರೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಪೊಲೀಸ್ ಅಕಾರಿಗಳು ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿದರು. ಕೂಡಲೇ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಬಲೆಗಳನ್ನು ತೆಗೆದುಕೊಂಡು ಹೋದ ಅಧಿಕಾರಿಗಳು ತೀವ್ರವಾಗಿ ಬಳಲಿದ್ದ ಕರಡಿಯನ್ನು ಸೆರೆ ಹಿಡಿದಿರು.

ಡಿಎಫ್‍ಓ ಜಗನಾಥ್ ಮಾರ್ಗದರ್ಶನದಲ್ಲಿ ಕರಡಿಯನ್ನು ಸೆರೆ ಹಿಡಿದು ಬೋನಿಗೆ ಸೇರಿಸಲಾಯಿತು. ಬಳಿಕ ಬಂಡಿಪುರಕ್ಕೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂದಾಜು 20 ವರ್ಷದ ಹೆಣ್ಣು ಕರಡಿ ತೀವ್ರವಾಗಿ ಬಳಲಿದ್ದು, ದೇಹದಲ್ಲಿ ಅಲ್ಲಲ್ಲಿ ಗಾಯಗಳಾಗಿವೆ.
ಕೆ.ಬಿದರೆ ಪಶುವೈದ್ಯರಾದ ಡಾ.ಪೃಥ್ವಿರಾಜ್ ಮತ್ತು ಪಿಳ್ಳೇನಹಳ್ಳಿಯ ಡಾ.ಅರುಣ್ ಕರಡಿಗೆ ಚಿಕಿತ್ಸೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕರಡಿ ದಾಳಿ ನಡೆಸಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ಸಹ ನೀಡಿದ್ದರು.











Click it and Unblock the Notifications