ಚಿಕ್ಕಮಗಳೂರು; ಕಾಡ್ಗಿಚ್ಚು ನಂದಿಸಲು ಮಾಸ್ಟರ್ ಪ್ಲಾನ್
ಚಿಕ್ಕಮಗಳೂರು, ಫೆಬ್ರವರಿ 11; ಬೇಸಿಗೆಗೂ ಮುನ್ನವೇ ಸುಡು ಬಿಸಿಲ ಧಗೆಗೆ ಅರಣ್ಯವನ್ನು ಉಳಿಸುವುದೇ ಅರಣ್ಯ ಇಲಾಖೆ ದೊಡ್ಡ ಸವಾಲಾಗಿದೆ. ಹಾಗಾಗಿ, ಕಾಫಿನಾಡಿನ ಅರಣ್ಯ ಇಲಾಖೆ ಅಧಿಕಾರಿಗಳು ನೂರಾರು ಕಿಲೋಮೀಟರ್ ಫೈರ್ ಲೈನ್ ನಿರ್ಮಿಸುವ ಜೊತೆ ಹೊಸ ಮಾಸ್ಟರ್ ಪ್ಲಾನ್ ಮಾಡಿದ್ದು ಈ ಭಾರಿ ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದಾರೆ.
ಸುಡು ಬಿಸಿಲ ಧಗೆಗೆ ಶೋಲಾ ಕಾಡುಗಳು ಕೂಡ ವರ್ಷದಿಂದ ವರ್ಷಕ್ಕೆ ಕ್ರಮೇಣ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಬಿಸಿಲಿನ ತಾಪದ ತೀವ್ರತೆಯಿಂದ ಶೋಲಾ ಕಾಡುಗಳು ಸೇರಿದಂತೆ ಅಲ್ಲಲ್ಲೇ ಅರಣ್ಯ ಬೆಂಕಿಗಾಹುತಿಯಾಗುತ್ತಿದೆ.
2004ರಲ್ಲಿ ಮುತ್ತೋಡಿಯಲ್ಲಿನ ಕಾಡ್ಗಿಚ್ಚಿನ ದುರಂತದಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಬೆಂಕಿಯಿಂದ ಕಾಡನ್ನು ರಕ್ಷಿಸಲು ಪ್ರತಿ ವರ್ಷ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ನೂರಾರು ಕಿಲೋಮೀಟರ್ ಫೈರ್ ಲೈನ್ ನಿರ್ಮಿಸಿದೆ.

ಅರಣ್ಯ ಇಲಾಖೆ ಮುತ್ತೋಡಿ, ಹೆಬ್ಬೆ, ಲಕ್ಕವಳ್ಳಿ, ತಣಿಗೇಬೈಲು ಸೇರಿದಂತೆ ಕಾಫಿನಾಡು ಚಿಕ್ಕಮಗಳೂರಿನ ನಾಲ್ಕು ವಲಯಗಳಲ್ಲೂ ಆಂಟಿಫೋಚಿಂಗ್ ಹಾಗೂ 13 ಫೈರ್ ಡಿಟೆಕ್ಷನ್ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸರ್ಕಾರ ಜಿಲ್ಲೆಯ 4 ವಲಯಗಳಿಗೂ 9 ಲಕ್ಷದಂತೆ 36 ಲಕ್ಷ ಹಣ ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆ ಬೆಂಕಿ ನಂದಿಸಲು ಬೇಕಾದ ಅಗತ್ಯ ವಸ್ತುಗಳನ್ನೂ ಕೂಡ ಸಂಗ್ರಹ ಮಾಡಿದೆ. ಸಿಬ್ಬಂದಿಗಳು ಕೂಡ ಗಸ್ತು ತಿರುಗುತ್ತಿದ್ದಾರೆ. ಬೆಂಕಿ ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಂತೆ ಕಟ್ಟುನಿಟ್ಟಿನ ಆದೇಶವಿದೆ.

ಅರಣ್ಯವಾಸಿಗಳಿಗೂ ಕೂಡ ಕಾಡಿನ ರಕ್ಷಣೆ ಬಗ್ಗೆ ತರಬೇತಿ ನೀಡಿ, ಜಾಗೃತಿ ಮೂಡಿಸಿದ್ದಾರೆ. ಭಿತ್ತಿಪತ್ರ, ಕರಪತ್ರ, ಬೀದಿ ನಾಟಕಗಳ ಮೂಲಕವೂ ಅರಣ್ಯ ರಕ್ಷಣೆಯ ಬಗ್ಗೆ ಕಾಡಿನ ಮಕ್ಕಳಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
ಫೈರ್ ಲೈನ್ ಯೋಜನೆ ಕಾಡುಪ್ರಾಣಿಗಳ ರಕ್ಷಣೆಗೂ ಸಹಕಾರಿಯಾಗಿದೆ. ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಫೈರ್ ಕ್ಯಾಂಪ್ ನಿರ್ಮಿಸಿ 24 ಗಂಟೆಗಳ ಕಾಲವೂ ಸಿಬ್ಬಂದಿಗಳನ್ನು ಅರಣ್ಯ ರಕ್ಷಣೆಗೆ ನೇಮಿಸಿದ್ದು, ಈ ಭಾರೀ ಇಲಾಖೆ ಕಿಡಿಗೇಡಿಗಳಿಂದ ಬೀಳುವ ಬೆಂಕಿಯನ್ನು ಸೆರೆಹಿಡಿಯುಲು ಡ್ರೋಣ್ ಕ್ಯಾಮೆರವನ್ನು ಬಳಸುತ್ತಿದೆ.
ಸೂಕ್ಷ್ಮ, ಅತೀ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಡ್ರೋಣ್ ಕ್ಯಾಮರಾ ಬಳಸಿ ಯಾರೇ ಅರಣ್ಯಕ್ಕೆ ಬೆಂಕಿ ಇಟ್ಟರೂ ಆ ದೃಶ್ಯವನ್ನು ಸೆರೆ ಹಿಡಿದು ಆರೋಪಿಗಳ ಹೆಡೆಮುರಿ ಕಟ್ಟಲು ಇಲಾಖೆ ಸನ್ನದ್ಧವಾಗಿದೆ.
ಪಶ್ಚಿಮಘಟ್ಟದ ಹಸಿರ ಸಿರಿಯನ್ನು ಸವಿಯಲು ಆಗಮಿಸುವ ಪ್ರವಾಸಿಗರಿಗೆ ಈ ವರ್ಷದ ಕಾಫಿನಾಡು ನಿರಾಸೆಯನ್ನಂತೂ ಮೂಡಿಸಿಲ್ಲ. ಯಾಕೆಂದರೆ 2021ರ ವರ್ಷಪೂರ್ತಿ ಮಳೆ ಕಾಫಿನಾಡನ್ನು ಬೇಸಿಗೆಯಲ್ಲೂ ಹಸಿರಾಗಿಸಿದೆ.
ಈ ಮಧ್ಯೆಯೂ ಕೂಡ ಕೆಲ ಭಾಗದಲ್ಲಿ ಗಿರಿಶಿಖರ ಒಣಗಿ ನಿಂತಿದೆ. ಹಾಗಾಗಿ, ಒಣಗಿ ನಿಂತಿರೋ ಅರಣ್ಯ ರಕ್ಷಣೆಗೆ ಇಲಾಖೆ ಸನ್ನದ್ಧವಾಗಿದೆ. ಈ ಬಾರಿ ಬೆಂಕಿ ರೇಖೆಗಳನ್ನು ಮಾಡುವುದರ ಜೊತೆ ಕಿಡಿಗೇಡಿಗಳಿಂದ ಕಾಡನ್ನು ರಕ್ಷಿಸಲು ಡ್ರೋಣ್ ಕಣ್ಗಾವಲು ಇರಲಿದೆ.
ಆದರೆ ಈ ಯೋಜನೆ ಯಾವ ರೀತಿ ಫಲ ಕೊಡುತ್ತದೆ ಅನ್ನೋದನ್ನು ಕಾದು ನೋಡಬೇಕು. ಬೆಂಕಿ ಕೊಡುವುದನ್ನು ಬಿಟ್ಟು ಅರಣ್ಯ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಅರಣ್ಯ ರಕ್ಷಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications