ಚಿಕ್ಕಮಗಳೂರು: ದತ್ತಪೀಠದಲ್ಲಿ ಮುಡಿ ಕೊಟ್ಟ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ
ಚಿಕ್ಕಮಗಳೂರು, ಡಿಸೆಂಬರ್, 29: ಚಿಕ್ಕಮಗಳೂರಿನ ದತ್ತಪೀಠ ಇತ್ತೀಚಿನ ದಿನಗಳಲ್ಲಿ ಒಂದೊಂದೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. 30 ವರ್ಷಗಳ ಹೋರಾಟದ ಫಲವಾಗಿ ಇತ್ತೀಚೆಗಷ್ಟೇ ಹಿಂದೂ ಅರ್ಚಕರ ನೇಮಕವಾಗಿದ್ದು, ಹೋರಾಟಕ್ಕೆ ಸಿಕ್ಕ ಫಲವಾಗಿತ್ತು. ಇದೀಗ ದತ್ತಪೀಠ ಆವರಣ ಮತ್ತೊಂದು ಸುವರ್ಣ ಘಳಿಗೆಗೆ ಸಾಕ್ಷಿಯಾಗಿದೆ.
ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಉಮೇದುವಾರಿಕೆಗಾಗಿ ದಶಕಗಳಿಂದಲೂ ಹಿಂದೂ-ಮುಸ್ಲಿಮರು ಹೋರಾಡುತ್ತಿದ್ದಾರೆ. ಆದರೆ ಹಿಂದೂಗಳು ಮುಸ್ಲಿಮರ ದರ್ಗಾ ಇರುವುದು ನಾಗೇನಹಳ್ಳಿಯಲ್ಲಿ, ಅಲ್ಲಿಗೆ ಹೋಗಿ ಇದು ಹಿಂದೂಗಳ ಪೀಠ ಎಂದೇ ಹೇಳುತ್ತಿದ್ದಾರೆ. ಈ ಮಧ್ಯೆ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಕಳೆದ ಮೂರು ವರ್ಷಗಳಿಂದ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಬೇಕು ಎಂದು ಆಗ್ರಹಿಸಿದ್ದರು.
ಮುಡಿ ಕೊಟ್ಟ ಗಂಗಾಧರ್ ಕುಲಕರ್ಣಿ
ಜಿಲ್ಲಾಡಳಿತ ದತ್ತ ಮೂರ್ತಿಯನ್ನು ಶೋಭಾಯಾತ್ರೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಬೇಕೆಂದು ಹರಕೆ ಹೊತ್ತು ಮೂರು ವರ್ಷದಿಂದ ಕಟ್ಟಿಂಗ್-ಶೇವಿಂಗ್ ಮಾಡಿಸಿರಲಿಲ್ಲ. ತಮ್ಮ ಹೋರಾಟ ಹಾಗೂ ಹರಕೆಗೆ ಫಲ ಸಿಕ್ಕ ಹಿನ್ನೆಲೆ ಇದೀಗ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ದತ್ತಪೀಠದ ಹೋಮದ ಆವರಣದಲ್ಲಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠ ಆಗುವವರೆಗೂ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದರು.

ದತ್ತಪೀಠದಲ್ಲಿ ಮುಡಿ ಕಾರ್ಯಕ್ರಮ
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಮುಡಿ ಕಾರ್ಯಕ್ರಮ ನಡೆದಿದ್ದು, ಪ್ರಮೋದ್ ಮುತಾಲಿಕ್ ಕೂಡ ಮುಸ್ಲಿಮರ ವಿರುದ್ಧ ಕಿಡಿಕಾರಿದ್ದಾರೆ. ಗಂಗಾಧರ್ ಹಿಂದೂಗಳಿಗೆ ಹಿತವಾಗಬೇಕು. ದತ್ತಪೀಠ ಹಿಂದೂಗಳ ಪೀಠವಾಗಬೇಕೆಂದು ಈ ಸಂಕಲ್ಪ ಮಾಡಿದ್ದಾರೆ. ಶಾಸ್ತ್ರೋಕ್ರವಾಗಿ ಮುಡಿ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲೂ ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಲಿದೆ ಎಂದರು. ಧಾರ್ಮಿಕ ದತ್ತಿ ಇಲಾಖೆ ಕಾನೂನಿನ ಪ್ರಕಾರ, ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಸುತ್ತಮುತ್ತ ಮುಸ್ಲಿಂ-ಕ್ರಿಶ್ಚಿಯನ್‌ಗಳಿಗೆ ಪ್ರವೇಶವೇ ಇಲ್ಲ, ಟೆಂಡರ್ ಕೊಡುವಂತಿಲ್ಲ. ಮಾರಾಟಕ್ಕೆ ಅವಕಾಶ ನೀಡುವಂತಿಲ್ಲ. ಮಕ್ಕಳಾಗದವರು, ಯಾವುದೇ ರೀತಿಯ ರೋಗ-ರುಜನೆ ಇದ್ದವರು, ಹಣದ ತೊಂದರೆ ಇದ್ದವರು ದತ್ತಪೀಠಕ್ಕೆ ಬಂದು ಮುಡಿ ಕೊಟ್ಟರೆ ನಿಮ್ಮ ಸಮಸ್ಯೆ ಪವಾಡದ ರೀತಿ ಪರಿಹಾರವಾಗುತ್ತದೆ ಎಂದರು.

ಒಟ್ಟಾರೆ, 30 ವರ್ಷಗಳ ಹೋರಾಟದ ಫಲವಾಗಿ ದತ್ತಪೀಠಕ್ಕೆ ಅಲ್ಪ ನ್ಯಾಯ ಸಿಕ್ಕಿದೆ. ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಅನ್ನುವುದು ಹಿಂದೂ ಸಂಘಟನೆಗಳ ವಾದವಾಗಿದೆ. ಆದರೆ ದತ್ತಪೀಠದಲ್ಲಿ ಇದೀಗ ಮತ್ತೆ ಹೊಸ ಸಂಪ್ರದಾಯ ಆರಂಭವಾಗಿದ್ದು, ಸಾಂಕೇತಿಕವಾಗಿ ಒಬ್ಬರು ಮುಡಿ ನೀಡಿದ್ದಾರೆ.












Click it and Unblock the Notifications