ಚಿಕ್ಕಮಗಳೂರು: ಮಳೆ ಇಲ್ಲದೆ ಬೆಳೆ ನಾಶ, ರೈತ ಸಾವಿಗೆ ಶರಣು
ಚಿಕ್ಕಮಗಳೂರು, ಆಗಸ್ಟ್ 31: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಮಳೆ ಇಲ್ಲದೇ ಬೆಳೆಗಳು ಜಮೀನುಗಳಲ್ಲೇ ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಈ ವರ್ಷ ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸಹ ತಡವಾಗಿ ಪ್ರಾರಂಭವಾಗಿದ್ದವು, ಇದೀಗ ಬೆಳೆ ಫಲ ಕೊಡುವ ಸಮಯದಲ್ಲಿ ಮಳೆ ಕೈಕೊಟ್ಟಿದೆ. ಬೆಳೆ ನಾಶವಾಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳೆ ನಾಶದ ಜೊತೆಗೆ ಸಾಲಬಾಧೆಗೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ. ಸತೀಶ್ (48) ಆತ್ಮಹತ್ಯೆಗೆ ಶರಣಾದ ರೈತ ಎಂದು ಗರುತಿಸಲಾಗಿದೆ.
ಸತೀಶ್ ಈ ಬಾರಿ ಸಹಕಾರ ಸಂಘದಲ್ಲಿ 1 ಲಕ್ಷದ 30 ಸಾವಿರ, ತಾಯಿ ಹೆಸರಲ್ಲಿ ಮತ್ತೊಂದು 1 ಲಕ್ಷ ಸಾಲ ಮಾಡಿ ಈರುಳ್ಳಿ ಬೆಳೆದಿದ್ದರು. ಬಿತ್ತಿದ ಬಳೆ ಫಲ ನೀಡುವ ಸಮಯಲ್ಲಿ ಮಳೆಯ ಕೊರತೆಯಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಈರುಳ್ಳಿ ಬೆಳೆ ಜಮೀನಿನಲ್ಲೇ ಒಣಗಿಹೋಗಿ ನೆಲಸಮವಾಗಿದೆ. ಬೆಳೆ ನಾಶದಿಂದ ಸತೀಶ್ ತೀವ್ರ ಮನನೊಂದಿದ್ದರು.
ಬೆಳೆ ನಾಶ ಹಾಗೂ ಲಕ್ಷಗಟ್ಟಲೆ ಬೆಳೆ ಸಾಲ ಮಾಡಿದ್ದ ಸತೀಶ್ ಮನನೊಂದು ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರ್ಯಾಕ್ಟರ್ ಇಂಜಿನ್ ಕಳ್ಳತನ: ಆರೋಪಿಗಳ ಬಂಧನ
ಚಿಕ್ಕಮಗಳೂರು: ತರೀಕೆರೆ ಸುತ್ತಮುತ್ತ ಹಾಗೂ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈತರ ಟ್ರ್ಯಾಕ್ಟರ್ ಇಂಜಿನ್ ಹಾಗೂ ಟ್ರೈಲರ್‌ಗಳನ್ನು ಕಳ್ಳತನ ಮಾಡುತ್ತಿದ್ದ ಎರಡು ಜನ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ತರೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರು ತರೀಕೆರೆಯ ಜಗದೀಶ್ ಮತ್ತು ಶರತ್ ಕುಮಾರ್ ಹೆಚ್.ಎಂ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಗಳಿಂದ 23,50,000 ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಸ್‌ಐ ನಾಗೇಂದ್ರ ನಾಯ್ಕ್ ನೇತೃತ್ವದ ತಂಡ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು, ಸುತ್ತಮುತ್ತಲಿತ ಗ್ರಾಮದ ರೈತರ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಮಾಂಸದ ಖಾದ್ಯ ಮಾರಾಟ ಮಾಡುತ್ತಿದ್ದ ಎವರೆಸ್ಟ್ ಹೋಟೆಲ್ ಮೇಲೆ ಪೊಲೀಸರ ದಾಳಿ
ಚಿಕ್ಕಮಗಳೂರು: ನಗರದ ಪ್ರಮುಖ ಹೋಟೆಲ್‌ಗಳಾದ ಎವರೆಸ್ಟ್ ಹೋಟೆಲ್ ಮತ್ತು ಬೆಂಗಳೂರು ಹೋಟೆಲ್‌ಗಳಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಇಟ್ಟು, ದನದ ಮಾಂಸದ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಿ ವ್ಯಾಪಾರ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮಗರ ಠಾಣೆಯ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ನೋಡಿದಾಗ ದನದ ಮಾಂಸ ಇಟ್ಟಿರುವುದು ಕಂಡುಬಂದಿದ್ದು, ಎವರೆಸ್ಟ್ ಹೋಟೆಲಿನ ಮಾಲೀಕರಾದ ಲತೀಫ್ ಮತ್ತು ಬೆಂಗಳೂರು ಹೋಟೆಲಿನ ಕ್ಯಾಶಿಯರ್ ಆದ ಶಿವರಾಜ್ ಎಂಬುವರ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಂಧಿಸಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )












Click it and Unblock the Notifications