ಮುಳ್ಳಯ್ಯನಗಿರಿಯಲ್ಲಿ ರೋಪ್‌ವೇ ನಿರ್ಮಾಣಕ್ಕೆ ಪರಿಸರವಾದಿಗಳ ವಿರೋಧ
ಚಿಕ್ಕಮಗಳೂರು, ಮಾರ್ಚ್ 9: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸೌಂದರ್ಯವನ್ನು ಎಷ್ಟು ಹಾಡಿ ಹೊಗಳಿದರು ಕಡಿಮೆಯೇ. ಬರೆತುವುದಕ್ಕೆ ಪುಟಗಳು ಸಾಲದು, ಹೇಳಲು ಪದಗಳು ಸಾಲದಂತಹ ಸುಂದರ ಸೊಬಗು. ಆದರೆ, ಇಂತಹ ಪ್ರಕೃತಿಯ ಮಡಿಲಲ್ಲಿ ಸರ್ಕಾರ ರೋಪ್‌ವೇ ನಿರ್ಮಾಣ ಮಾಡಲು ಹೊರಟಿರುವುದು ಪರಿಸರವಾದಿಗಳು ಹಾಗೂ ಪ್ರಕೃತಿಯ ಮಹತ್ವ ಅರಿತಿರುವ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮುಳ್ಳಯ್ಯನಗಿರಿ ಪ್ರಕೃತಿಯೇ ನೀಡಿರುವ ಸೌಂದರ್ಯ. ಆ ಸೌಂದರ್ಯಕ್ಕೆ ನಾವೇ ಹಾಲು-ತುಪ್ಪ ಬಿಟ್ಟರೆ ಮತ್ತೆಂದೂ ಆ ಸುಂದರ ಸೊಬಗನ್ನು ಸೃಷ್ಟಿಸಲಾಗದು. ಅದನ್ನು ಉಳಿಸಿ- ಬೆಳೆಸಬೇಕೇ ವಿನಃ ಕೊಳ್ಳಿ ಇಡುವುದಲ್ಲ. ಆದರೀಗ, ಆ ನೈಜ ಸೊಬಗಿಗೆ ಸರ್ಕಾರದ ಯೋಜನೆಯೇ ಮಗ್ಗುಲ ಮುಳ್ಳಾಗಿದೆ. ಸರ್ಕಾರ ಮಾಡುವುದನ್ನು ಬಿಟ್ಟು ಮಾಡಬಾರದ್ದಕ್ಕೆಲ್ಲಾ ಕೈ ಹಾಕುತ್ತಿದೆ. ನೈಜ ಸೊಬಗನ್ನು ಹಾಳು ಮಾಡುವುದಕ್ಕೆ ಶಂಕುಸ್ಥಾಪನೆ ಮಾಡುತ್ತಿದೆ. ಮುಳ್ಳಯ್ಯನಗಿರಿ ಭವಿಷ್ಯದಲ್ಲಿ ಮುಳ್ಳಯ್ಯನಗಿರಿಯಾಗೇ ಉಳಿಯುವುದರಲ್ಲಿ ಅನುಮಾನವಿದೆ.

ಗಿರಿಯ ಸೌಂದರ್ಯ ಭವಿಷ್ಯದ ಪೀಳಿಗೆಗೆ ಉಳಿಯಲ್ಲ
ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಲ್ಲಿ ಇಲ್ಲಿನ ಬೆಟ್ಟ- ಗುಡ್ಡಗಳನ್ನು ಅಗೆದರೆ ಈ ಸೌಂದರ್ಯ ಭವಿಷ್ಯದ ಪೀಳಿಗೆಗೆ ಉಳಿಯಲ್ಲ. ಇರುವುದನ್ನು ಕಳೆದುಕೊಳ್ಳುವುದು ಸುಲಭ. ಗಳಿಸುವುದು ಕಷ್ಟಸಾಧ್ಯ. ಅದರಲ್ಲೂ ಪ್ರಕೃತಿಯನ್ನು ಕಳೆದುಕೊಂಡರೆ ಮತ್ತದರ ಗಳಿಕೆ ಅಸಾಧ್ಯವೇ ಸರಿ. ಹಾಗಾಗಿ, ಪರಿಸರವಾದಿಗಳು ಹಾಗೂ ಕೆಲ ಸ್ಥಳೀಯರು ಮುಳ್ಳಯ್ಯನಗಿರಿಯಲ್ಲಿ ರೋಪ್‌ವೇ ಬೇಡವೇ ಬೇಡ ಅಂತಿದ್ದಾರೆ.
ವಿಶ್ವದ 25 ಪಾರಂಪರಿಕ ಸುಂದರ ತಾಣಗಳಲ್ಲಿ ಪಶ್ಚಿಮ ಘಟ್ಟಗಳೂ ಕೂಡ ಒಂದು. ದೇಶದ ಆರು ರಾಜ್ಯಗಳಲ್ಲಿ ಹಾದುಹೋಗಿರುವ ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕದ್ದು ಬಹುಪಾಲು. ಅದರಲ್ಲಿ ಕಾಫಿನಾಡು ಚಿಕ್ಕಮಗಳೂರು ಕೂಡ. ಆದರೆ, ಜಗತ್ತಿನ ಅದ್ಭುತಗಳಲ್ಲಿ ಒಂದಾಗಿರುವ ಇಂತಹ ಸೌಂದರ್ಯ ತಾಣದ ಬುಡದಲ್ಲಿ ಜೆಸಿಬಿ, ಇಟಾಚಿಗಳು ತನ್ನ ಅಬ್ಬರ ತೋರಿದರೆ ಪ್ರಕೃತಿ ಮಂಕಾಗುತ್ತದೆ.

ಮೂರ್ನಾಲ್ಕು ನದಿಗಳ ಉಗಮ ಸ್ಥಾನ
ಸಾಲದ್ದಕ್ಕೆ ಮುಳ್ಳಯ್ಯನಗಿರಿಯಲ್ಲಿ ಮೂರ್ನಾಲ್ಕು ನದಿಗಳ ಉಗಮ ಸ್ಥಾನವಿದೆ. ವರ್ಷಪೂರ್ತಿ ನೀರನ್ನು ಹಿಡಿದಿಟ್ಟುಕೊಂಡು ಹರಿಸುವ ಶೋಲಾ ಕಾಡುಗಳು ಇವೆ. ಲಕ್ಷಾಂತರ ಪ್ರಾಣಿ- ಪಕ್ಷಿಗಳ ಆವಾಸ ಸ್ಥಾನ ಕೂಡ. ಅಪರೂಪದ ಸಸ್ಯ ಪ್ರಭೇದವೂ ಇದೆ. ಇಂತಹ ಜಾಗದಲ್ಲಿ ಮೋಜು- ಮಸ್ತಿಗೆಂದು ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ರೋಪ್‌ವೇ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾವಿರಾರು ಕೋಟಿ ಸುರಿದರು ಇಲ್ಲಿನ ಒಂದು ಬೆಟ್ಟ ನಿರ್ಮಿಸಲು ಸಾಧ್ಯವಿಲ್ಲದಿರುವುದಂತು ಸತ್ಯ. ಸರ್ಕಾರ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಿ ಅಂತಿದ್ದಾರೆ ಸ್ಥಳೀಯರು.

ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಿ, ಆದರೆ ರೋಪ್‌ವೇ ಬೇಡ
ಇನ್ನು ಈ ಪ್ರತಿಕ್ರಿಯೆ ನೀಡಿರುವ ಪರಿಸರವಾದಿ ವೀರೇಶ್, "ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ರೋಪ್‌ವೇ ನಿರ್ಮಾಣ ಸರಿಯಲ್ಲ. ಪಶ್ಚಿಮ ಘಟ್ಟ ಸಾಲಿನ ಸೂಕ್ಷ್ಮ ಪ್ರದೇಶ ಇದು, ರೋಪ್‌ವೇ ನಿರ್ಮಾಣವಾದರೆ ಶೋಲಾ ಕಾಡು, ನದಿ ತೊರೆಗಳು, ಪ್ರಾಣಿ ಸಂಕುಲಕ್ಕೂ ಸಂಕಷ್ಟ ಎದುರಾಗುತ್ತದೆ. ಹಾಗಾಗಿ ರೋಪ್‌ವೇ ಬೇಡವೇ ಬೇಡ. ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಿ, ಆದರೆ ರೋಪ್‌ವೇ ಬೇಡ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ," ಎಂದರು.
Recommended Video

ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿರುವ ಹಲವು ಕುಟುಂಬಗಳು
ಒಟ್ಟಾರೆ, ಪ್ರವಾಸೋದ್ಯಮ ಕಾಫಿನಾಡಿನ ಜೀವಾಳ ನಿಜ. ಪ್ರವಾಸೋದ್ಯಮವನ್ನು ನೆಚ್ಚಿಕೊಂಡು ಹಲವು ದಶಕಗಳಿಂದ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈಗ ರೋಪ್‌ವೇಯನ್ನೇ ನೆಚ್ಚಿಕೊಂಡು ಯಾರೂ ಕೂತಿಲ್ಲ. ಬಹುಶಃ ಮುಳ್ಳಯ್ಯನಗಿರಿಗೆ ರೋಪ್‌ವೇ ಬೇಕು ಎಂದು ಯಾರೂ ಕೇಳಿಲ್ಲ. ಆದರೂ, ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ರೋಪ್‌ವೇ ನಿರ್ಮಾಣಕ್ಕೆ ಕೈ ಹಾಕಿರುವುದು ಸರಿಯಲ್ಲ ಎಂದು ಪರಿಸರವಾದಿಗಳು- ಸ್ಥಳೀಯರ ವಾದಿ. ಮುಳ್ಳಯ್ಯನಗಿರಿಯಲ್ಲಿ ರೋಪ್‌ವೇಗೆ ತೀವ್ರ ವಿರೋಧವಿದ್ದು, ಸರ್ಕಾರ ಏನು ಮಾಡುತ್ತದೋ ಕಾದು ನೋಡಬೇಕು.












Click it and Unblock the Notifications