ಚಿಕ್ಕಮಗಳೂರು; ಈ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಶವಗಳು ಕಾಯಬೇಕು!
ಚಿಕ್ಕಮಗಳೂರು, ಜನವರಿ 02: ವೈದ್ಯರ ಕೊರತೆ ಕಾರಣ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.
ಅಜ್ಜಂಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಸಾರ್ವಜನಿಕರು ಕಳೆದೊಂದು ವರ್ಷದಿಂದ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಸೆಳೆದಿದ್ದರೂ ಇದುವರೆಗೂ ವೈದ್ಯರ ನೇಮಕ ಆಗಿಲ್ಲ.

ವೈದ್ಯರ ಕೊರತೆಯಿಂದಾಗಿ ತಾಲೂಕಿನ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸೋಮವಾರ ಮೂರು ಮೃತದೇಹಗಳು ಮರಣೋತ್ತರ ಪರೀಕ್ಷೆಗೆ ಬಂದಿದ್ದು, ವೈದ್ಯರಿಲ್ಲದೇ ಮೃತ ದೇಹಗಳನ್ನು ವಾಹನಗಳಲ್ಲೇ ಇರಿಸಿಕೊಂಡ ಸಂಬಂಧಿಕರು ಕಾದು ಕುಳಿತಿದ್ದರು.
ಭಾನುವಾರ ರಾತ್ರಿ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತಿಬ್ಬರು ರೈಲಿಗೆ ಸಿಲುಕಿ ಮೃತಪಟ್ಟಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ತಂದಿದ್ದು, ವೈದ್ಯರ ಕೊರತೆಯಿಂದ ಮರಣೋತ್ತರ ಪರೀಕ್ಷೆ ಮಾಡಿಸಲು ಸಾಧ್ಯವಾಗದೆ ಮೃತದೇಹಗಳನ್ನು ಅಂಬ್ಯುಲೆನ್ಸ್‌ನಲ್ಲಿಯೇ ಇಟ್ಟು ಕಾಯುವಂತಾಯಿತು.
ವೈದ್ಯರಿಲ್ಲದ ಕಾರಣ ಸಕಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ವೈದ್ಯರ ಕೊರತೆ ಇದ್ದರೂ ಸರ್ಕಾರ ವೈದ್ಯರನ್ನು ನೇಮಿಸದೇ ನಿರ್ಲಕ್ಷ್ಯವಹಿಸಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಬಸ್ ಡ್ರೈವರ್, 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಪಾಗಲ್ ಪ್ರೇಮಿಯ ಸಹವಾಸದಿಂದ ವಿದ್ಯಾರ್ಥಿನಿ ಮತ್ತು ಶಾಲಾ ಬಸ್ ಚಾಲಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಂಕನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಶಾಲಾ ಬಸ್ ಚಾಲಕ ಸಂತೋಷ್ (34) ಮತ್ತು 8ನೇ ತರಗತಿ ವಿದ್ಯಾರ್ಥಿನಿ ಜಾನವಿ (13) ಆತ್ಮಹತ್ಯೆ ಮಾಡಿಕೊಂಡವರು. ಮೃತ ಜಾನವಿ ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಇದೇ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂತೋಷ್ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಮಗಳು ಜಾನವಿಗೆ ಸಂತೋಷ್ ಕಿರುಕುಳ ನೀಡುತ್ತಿದ್ದ ಬಗ್ಗೆ ಪೋಷಕರು ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಆದರೂ ಸಂತೋಷ್ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಂಡಿರಲಿಲ್ಲ.
ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಹೇಳಿದ್ದ ಜಾನವಿಯನ್ನು ಸಂತೋಷ್ ತನ್ನ ಜೊತೆ ಕರೆದುಕೊಂಡು ಹೋಗಿದ್ದ. ಆದರೆ, ಮಧ್ಯರಾತ್ರಿ ರೈಲಿನಡಿ ಬಿದ್ದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಅಜ್ಜಂಪುರ ಹಾಗೂ ಬೀರೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಿದರು.
ವಿದ್ಯಾಭ್ಯಾಸ ತೊಡಗಿದ್ದ ಬಾಲಕಿ ತಲೆಕೆಡಿಸಿದ್ದ ಸಂತೋಪ್‌ಗೆ ಈಗಾಗಲೇ ಎರಡು ಮದುವೆಯಾಗಿದೆ ಎಂದು ತಿಳಿದುಬಂದಿದೆ. ಈಗ ಬಾಲಕಿಯನ್ನೂ ಸಹ ಬಲಿ ಪಡೆದ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications