ಶಕ್ತಿ ದೇವತೆ ಮೊರೆ ಹೋದ ಡಿ.ಕೆ ಶಿವಕುಮಾರ್: ಶೃಂಗೇರಿಯಲ್ಲಿ ಇಂದು ಚಂಡಿಕಾ ಯಾಗ
ಶೃಂಗೇರಿ, ಏಪ್ರಿಲ್ 23: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ತಮ್ಮದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದಾರೆ.
ಶನಿವಾರ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್, ನಿನ್ನೆ ಸಂಜೆ ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಪತ್ನಿಯೊಂದಿಗೆ ಚಂಡಿಕಾ ಯಾಗದ ಸಂಕಲ್ಪ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಆಪ್ತ ಕ್ಯಾತ ಜ್ಯೋತಿಷಿ ದ್ವಾರಕನಾಥ್ ನೇತೃತ್ವದಲ್ಲಿ ಇಂದು( ಏಪ್ರಿಲ್ 23)ರಂದು ಶಾರದಾಂಬೆಯ ಸನ್ನಿಧಿಯಲ್ಲಿ ಚಂಡಿಕಾಯಾಗ ನಡೆಯಲಿದೆ.

ಭಾನುವಾರ ಬೆಳಗ್ಗೆ ಆರಂಭವಾಗಲಿರುವ ಚಂಡಿಕಾಯಾಗ ಮಧ್ಯಾಹ್ನ 12 ಗಂಟೆವರೆಗೂ ನಡೆಯಲಿದ್ದು, ಪೂರ್ಣಾಹುತಿಯೊಂದಿಗೆ ಚಂಡಿಕಾ ಯಾಗ ಪೂರ್ಣಗೊಳ್ಳಲಿದೆ. ಈಗಾಗಲೇ ಡಿ.ಕೆ ಶಿವಕುಮಾರ್ ಹಾಗೂ ಕುಟುಂಬಸ್ಥರು ಯಾಗ ಶಾಲೆಗೆ ಬಂದಿದ್ದು, ಚಂಡಿಕಾ ಯಾಗದಲ್ಲಿ ಭಾಗಿಯಾಗಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಋತ್ವಿಜರು ಹಾಗೂ ಪುರೋಹಿತರನ್ನು ಒಳಗೊಂಡ ತಂಡ ಶೃಂಗೇರಿ ಕ್ಷೇತ್ರದಲ್ಲಿ ಚಂಡಿಕಾಯಾಗ ನಡೆಸಲಿದ್ದಾರೆ. ಇಂದು ಮಧ್ಯಾಹ್ನದವರೆಗೂ ಶೃಂಗೇರಿಯಲ್ಲೇ ಇರಲಿರುವ ಡಿ.ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಚುನಾವಣಾ ಪ್ರಚಾರ ಆರಂಭಕ್ಕೂ ಮುನ್ನ ಹೋಮ ಹವನಗಳನ್ನು ಹಾಗೂ ವಿಶೇಷ ಶಾರದಾಂಬೆಗೆ ಪೂಜೆಗಳನ್ನು ನೆರವೇರಿಸಲಿದ್ದಾರೆ.

ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದ್ದು, " ಎಲ್ಲಾ ತೊಂದರೆಗಳನ್ನು ನಿವಾರಣೆ ಮಾಡುವಂತೆ ದೇವರ ಬಳಿ ಬಂದಿದ್ದೇನೆ. ನನ್ನ ಈ ಚುನಾವಣಾ ಪ್ರಚಾರ ಈ ಕ್ಷೇತ್ರದಿಂದಲೇ ಆರಂಭವಾಗುತ್ತದೆ, ಈ ಕ್ಷೇತ್ರದಲ್ಲಿ ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು. ರಾಜೀವ್ ಗಾಂಧಿ ಕೂಡ ಇಲ್ಲಿ ದೊಡ್ಡ ಹೋಮ ಹಾಗೂ ಯಾಗ ನಡೆಸಿದ ಇತಿಹಾಸ ಇದೆ. ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ. ಪ್ರತಿ ಮನೆಯಲ್ಲೂ ಡಿಕೆ ಶಿವಕುಮಾರ್ ಇದ್ದಾನೆ ಅವರೇ ಅಭ್ಯರ್ಥಿಗಳು. ಅವರೇ ಚುನಾವಣೆ ಮಾಡಿಕೊಳ್ಳುತ್ತಾರೆ. ಸದ್ಯ ನಾನು ನಾಮಪತ್ರವನ್ನ ಸಲ್ಲಿಸಿದ್ದೇನೆ ಅಷ್ಟೇ, ಉಳಿದಿದ್ದೆಲ್ಲವೂ ಅವರೇ ಮಾಡುತ್ತಾರೆ" ಎಂದು ತಮ್ಮ ಗೆಲುವಿ ವಿಶ್ವಾಸ ವ್ಯಕ್ತಪಡಿದ್ದಾರೆ.












Click it and Unblock the Notifications