ಮತದಾರರಿಗೆ, ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಕಾನೂನು ಕ್ರಮ- ಶಾಸಕ ಹೆಚ್.ಡಿ.ತಮ್ಮಯ್ಯ ಎಚ್ಚರಿಕೆ
ಚಿಕ್ಕಮಗಳೂರು, ಜೂನ್ 2: ಕ್ಷೇತ್ರದ ಮತದಾರರು, ಪಕ್ಷದ ಕಾರ್ಯಕರ್ತರು ಅಥವಾ ಹಿತೈಶಿಗಳಿಗೆ ಯಾವುದೇ ವ್ಯಕ್ತಿಗಳಾಗಲೀ ಅಥವಾ ವಿರೋಧ ಪಕ್ಷದವರಾಗಲೀ ತೊಂದರೆ ನೀಡುವ ಕಾರ್ಯಕ್ಕೆ ಮುಂದಾಗುವುದನ್ನು ನಿಲ್ಲಿಸದಿದ್ದಲ್ಲಿ ಸಂವಿಧಾನದಡಿ ದೊರಕಿರುವ ಕಾನೂನಿನ ಮೂಲಕ ಹಕ್ಕು ಚಲಾಯಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿ ನೂತನ ಶಾಸಕರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ನಗರಸಭಾ ಸದಸ್ಯರಾಗಿ ಯಾವ ಅಧಿಕಾರ ನಿರ್ವಹಿಸಿದ್ದೇನೆ. ಅದೇ ಮಾದರಿಯಲ್ಲಿ ಶಾಸಕ ಸ್ಥಾನದಲ್ಲಿ ಅಧಿಕಾರ ನಿರ್ವಹಿಸಲಾಗುವುದು. ಇದನ್ನು ಮೌನವೆಂದು ಕೆಲವರು ಭಾವಿಸಿ ಪಕ್ಷದ ಕಾರ್ಯಕರ್ತರು, ಮತದಾರರಿಗೆ ತೊಂದರೆ ನೀಡಿದರೆ ಕಾನೂನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ ಹಲವಾರು ವರ್ಷಗಳಿಂದ ರಾಜಕಾರಣದಲ್ಲಿ ತೊಡಗಿರುವ ತಾವು ಪ್ರೀತಿ ರಾಜಕಾರಣ ಮಾಡಿದ್ದೇವೆ ಹೊರತು ದ್ವೇಷದ ರಾಜಕಾರಣ ಎಂದಿಗೂ ಮಾಡಿಲ್ಲ. ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು ಭರವಸೆಯನ್ನಿಟ್ಟು ಟಿಕೆಟ್ ನೀಡಿದ್ದರು. ಕ್ಷೇತ್ರದ ಜನತೆ ಅದೇ ವಿಶ್ವಾಸವನ್ನಿಟ್ಟು ಮತ ನೀಡಿ ಜಯಶೀಲರನ್ನಾಗಿ ಮಾಡಿ ಅಧಿಕಾರ ನೀಡಿದ್ದಾರೆ. ಇವರಿಗೆ ಎಂದಿಗೂ ಚಿರಋಣಿಯಾಗಿ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಇದೀಗ ಶಾಸಕ ಸ್ಥಾನವನ್ನು ಏರಿರುವ ತಾವು ಯಾವುದೇ ಅಹಂನಿಂದ ಮಾತನಾಡುವುದಿಲ್ಲ. ನಾನೊಬ್ಬ ಜನಸೇವೆ ಮಾಡುವ ಜನಸೇವಕ. ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಮೂಲಕ ಸರ್ವರಿಗೆ ಸಮಾನರಂತೆ ಜನಸ್ನೇಹಿ ಆಡಳಿತ ನೀಡಿ ಶಾಂತಿ ಸೌಹರ್ದತೆಯಿಂದ ಸಮಾಜದಲ್ಲಿ ನಡೆದುಕೊಂಡು ಹೋಗಲಾಗುವುದು ಎಂದರು.
ಕಳೆದ ಬಾರಿ ಸಿದ್ದರಾಮ್ಯನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸುಮಾರು 168 ಭರವಸೆಗಳಲ್ಲಿ 158 ಭರವಸೆಗಳನ್ನು ಪೂರೈಸಿ ಜನಮನ್ನಣೆ ಗಳಿಸಿದ್ದರು. ಅದೇ ರೀತಿಯಲ್ಲಿ ಈ ಬಾರಿಯು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದಂತಹ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಜನತೆಗೆ ಸ್ಪಂದಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ನೂತನ ಶಾಸಕರ ಕಚೇರಿ ಯಾವುದೇ ಕಾರಣಕ್ಕೂ ಪಕ್ಷದ ಕಚೇರಿಯಲ್ಲ. ಸರ್ಕಾರ ಸಂವಿಧಾನಾತ್ಮಕವಾಗಿ ಎಲ್ಲಾ ಮತದಾರರಿಗೆ ಸ್ಪಂದಿಸುವ ಹಾಗೂ ಪರಸ್ಪರ ಸಮಸ್ಯೆಗಳನ್ನು ಹಂಚಿಕೊಳ್ಳುವಂತಹ ಕಚೇರಿಯಾಗಿದೆ. ಕ್ಷೇತ್ರದ ಜನತೆ ತಮ್ಮ ವೈಯಕ್ತಿಕ ಅಥವಾ ಸುತ್ತಮುತ್ತಲಿನ ಅನ್ಯಾಯಗೊಳಗಾದಲ್ಲಿ ಯಾವುದೇ ಮುಜುಗರ ಪಡದೇ ನೇರವಾಗಿ ಕಚೇರಿಯನ್ನು ಸಂಪರ್ಕಿಸಿದರೆ ನ್ಯಾಯ ಸಮ್ಮತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಶಾಸಕರ ನೂತನ ಕಚೇರಿಯು ಸರ್ಕಾರಿ ಕಚೇರಿಗಳ ಸಮಯದಂತೆ ತೆರೆಯಲಿದ್ದು, ವಾರದಲ್ಲಿ ಮೂರು ದಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ನಂತರ ಪ್ರತಿ ಬುಧವಾರ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರಿಗೆ ಸಮಯ ನೀಡಲಾಗುವುದು ಎಂದು ಹೇಳಿದರು.












Click it and Unblock the Notifications