ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ
ಚಿಕ್ಕಮಗಳೂರು, ಫೆಬ್ರವರಿ 10: ಇದೇ ಫೆಬ್ರವರಿ 28, 29, ಮಾರ್ಚ 01 ರಂದು ಮೂರು ದಿನಗಳ ಕಾಲ ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಇಂದು ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭಾರತೀಯ ಕಾಂಗ್ರೆಸ್, ಜಾತ್ಯಾತೀತ ಜನತಾ ದಳ, ಭಾರತ ಕಮ್ಯುನಿಸ್ಟ್ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಪ್ರಗತಿ ಪರ ರೈತ, ದಲಿತ, ಕನ್ನಡಪರ ಸಂಘಟನೆಗಳು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಇದು ಚಿಕ್ಕಮಗಳೂರು ಉತ್ಸವ ಅಲ್ಲ, ಬಿಜೆಪಿ ಉತ್ಸವ ಎಂದು ಆರೋಪ ಮಾಡಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಭಾರೀ ಅತಿವೃಷ್ಟಿಯಿಂದ ಜನ ಮನೆ, ಜಮೀನು ಕಳೆದುಕೊಂಡು ದಿನನಿತ್ಯ ಪರಿತಪಿಸುತ್ತಿದ್ದಾರೆ, ಜೊತೆಗೆ ಬಯಲು ಸೀಮೆ ಭಾಗದಲ್ಲಿ ಬರದಿಂದ ಕುಡಿಯಲು ನೀರಿಲ್ಲದೇ ತತ್ತರಿಸಿ ಹೋಗಿದ್ದಾರೆ ಇಂತಹ ಹೊತ್ತಿನಲ್ಲಿ ಜಿಲ್ಲಾ ಉತ್ಸವ ಮಾಡುವ ಅಗತ್ಯ ಇದೆಯಾ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿಗೆ ಪ್ರಶ್ನಿಸಿದರು.

ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾ ಉತ್ಸವ ಹಮ್ಮಿಕೊಂಡಿದ್ದು ನಗರದೆಲ್ಲೆಡೆ ಯುಜಿಡಿ, ಅಮೃತ್ ಯೋಜನೆಗೆ ಗುಂಡಿ ತೆಗೆಯಲಾಗಿದ್ದು ಇಡೀ ನಗರ ಧೂಳಿನಿಂದು ಕೂಡಿದ್ದು ಇಂತಹ ಸಮಯದಲ್ಲಿ ಜಿಲ್ಲಾ ಉತ್ಸವ ಮಾಡುತ್ತಿರುವುದು ಶೋಚನೀಯ ಎಂದರು.
ಇನ್ನು ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನಗರದ ಅಭಿವೃದ್ದಿಗೆ ಶ್ರಮಿಸಿದ ನಗರಕ್ಕೆ ದೊಡ್ಡ ಕೊಡುಗೆ ನೀಡಿರುವ ಒಕ್ಕಲಿಗ, ವೀರಶೈವ ಸಮಾಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತುಗಳನ್ನು ಹೊರಗಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ತನ್ನ ಪಕ್ಷದ ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ಮಾಡಿಕೊಂಡು ಉತ್ಸವ ನಡೆಸಲು ಹೊರಟಿರುವುದು ಹಣ ದುರುಪಯೋಗದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಉತ್ಸವದ ಹಲವು ಸಮಿತಿಗಳಲ್ಲಿ ತಮ್ಮ ಪಕ್ಷದ ಮುಖಂಡರುಗಳನ್ನೇ ನೇಮಕ ಮಾಡಲಾಗಿದ್ದು ಈ ಮೂಲಕ ಸರ್ಕಾರದ ಹಣದಿಂದ ತಮ್ಮ ಪಕ್ಷದ ಮುಖಂಡರನ್ನು ಜನರಿಗೆ ಪರಿಚಯಿಸಲು ಸಚಿವರು ಹುನ್ನಾರ ನಡೆಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications