ರಾಷ್ಟ್ರಧ್ವಜ ಕೆಂಪು-ಬಿಳಿ-ಹಸಿರು ಎಂದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರ ದೂರು
ಚಿಕ್ಕಮಗಳೂರು, ಆ.11 : ಕೇಸರಿ, ಬಿಳಿ, ಹಸಿರು ಬಣ್ಣದ ಭಾರತದ ರಾಷ್ಟ್ರಧ್ವಜವನ್ನ ಕೆಂಪು, ಬಿಳಿ, ಹಸಿರು ಎಂದು ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರಹಳ್ಳಿ ಗ್ರಾಮದ ಯುವಕರು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ಚಿಕ್ಕಮಾಗರಹಳ್ಳಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸ್ವಗ್ರಾಮ. ಈ ಗ್ರಾಮದ ಬಿಜೆಪಿ ಮುಖಂಡರಾದ ಗಿರೀಶ್, ಮನು ಹಾಗೂ ಬಜರಂಗದಳ ಕಾರ್ಯಕರ್ತ ಶಿವಕುಮಾರ್ ಎಂಬುವರು ಆಲ್ದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಭಾರತದ ರಾಷ್ಟ್ರಧ್ವಜದ ಬಣ್ಣ ಕೇಸರಿ, ಬಿಳಿ, ಹಸಿರು ಎಂದು ಹೇಳುವ ಬದಲು ಮಾಜಿ ಸಿಎಂ ಸಿದ್ದರಾಮಯ್ಯನವರು ಕೆಂಪು, ಬಿಳಿ, ಹಸಿರು ಎಂದು ಹೇಳಿದ್ದರು. ಕೇಸರಿ ಬದಲು ಕೆಂಪು ಎಂದು ಹೇಳಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಈ ರಾಷ್ಟ್ರಧ್ವಜದ ವಿರೋಧಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶ ಹೊರಹಾಕಿರುವ ಯುವಕರು ದೂರು ನೀಡಿ, ದೇಶದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಪ್ರಸ್ತುತ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. ಬುಧವಾರ ಬಾದಾಮಿಯಲ್ಲಿ 75 ಕಿಮೀ ಪಾದಯಾತ್ರೆಗೆ ಚಾಲನೆ ನೀಡಿದ್ದರು. ಇದೇ ವೇಳೆ ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದಾಗ ಕ್ರೂಸರ್ ವಾಹನ ಪಲ್ಟಿಯಾಗಿ ಮೃತಪಟ್ಟಿದ್ದ ಚಾಲಕ ಪ್ರಕಾಶ್ ಬಡಿಗೇರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ 2 ಲಕ್ಷ ಪರಿಹಾರ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಐಸಿಯುನಲ್ಲಿ ಇರುವ ಇಬ್ಬರು ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂಪಾಯಿ, ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವ ಇಬ್ಬರಿಗೆ ತಲಾ 50 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಬಳಿಕ ಬೀಳಗಿ ತಾಲೂಕಿನ ಚಿಕ್ಕ ಆಲಗುಂಡಿ ಗ್ರಾಮಕ್ಕೆ ಭೇಟಿ ಕೊಟ್ಟ ಅವರು ಮೃತ ಪ್ರಕಾಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಎರಡು ಲಕ್ಷ ರೂಪಾಯಿ ಹಣ ನೀಡಿದರು. ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಮುಧೋಳ ತಾಲೂಕಿನ ಬಿಕೆ ಆಲಗುಂಡಿ ಗ್ರಾಮದ ಎಂಟು ಜನರಿಗೆ ತಲಾ 25 ಸಾವಿರ ರೂಪಾಯಿ ಧನಸಹಾಯ ಮಾಡಿದರು.












Click it and Unblock the Notifications