ಚಿಕ್ಕಮಗಳೂರು ಚುನಾವಣಾ ಫಲಿತಾಂಶ; ಸಿಟಿ ರವಿಗೆ ಸೋಲು
ಚಿಕ್ಕಮಗಳೂರು, ಮೇ 13; ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಹೆಚ್. ಡಿ. ತಿಮ್ಮಯ್ಯ 64552 ಮತಗಳನ್ನು ಪಡೆದು ಗೆದ್ದಿದ್ದಾರೆ. ಸಿ. ಟಿ. ರವಿ 55678 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಹಿಂದಿನ ಅಪ್ ಡೇಟ್; ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಸಿ. ಟಿ. ರವಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಮೂಡಿಸಿರುವ ಕ್ಷೇತ್ರ ಚಿಕ್ಕಮಗಳೂರು. ಹಾಲಿ ಶಾಸಕರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ. ಕಾಂಗ್ರೆಸ್‌ನಿಂದ ಎದುರಾಳಿ ಆಗಿರುವುದು ಸಿ. ಟಿ. ರವಿ ಆಪ್ತರಾಗಿದ್ದ ಎಚ್. ಡಿ. ತಮ್ಮಯ್ಯ. ಜೆಡಿಎಸ್‌ನಿಂದ ತಿಮ್ಮಶೆಟ್ಟಿ ಕಣದಲ್ಲಿದ್ದಾರೆ. ಆದರೆ ಪೈಪೋಟಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಸಿ. ಟಿ. ರವಿ ಸತತ ನಾಲ್ಕು ಬಾರಿ ಗೆಲ್ಲುವ ಮೂಲಕ ದಾಖಲೆ ಮಾಡಿದ್ದಾರೆ. ಅವರ ಗೆಲುವಿನ ಓಟಕ್ಕೆ ಈ ಬಾರಿ ತಡೆ ಹಾಕುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಸಿ. ಟಿ. ರವಿ ಸೋಲಿಸಿದರೆ ರಾಜ್ಯದ ಪ್ರಮುಖ ನಾಯಕನನ್ನು ಸೋಲಿಸಿದ ಕೀರ್ತಿ ಕಾಂಗ್ರೆಸ್ ಪಾಲಾಗಲಿದೆ.

ಸಿ. ಟಿ. ರವಿ ಆಪ್ತರಾಗಿದ್ದ ಎಚ್. ಡಿ. ತಮ್ಮಯ್ಯ ಅವರ ವಿರುದ್ಧ ತಿರುಗಿ ಬಿದ್ದು ಕಾಂಗ್ರೆಸ್ ಸೇರಿದರು. ಪಕ್ಷ ಅವರಿಗೆ ಟಿಕೆಟ್ ನೀಡುವ ಮೂಲಕ ಕ್ಷೇತ್ರದಲ್ಲಿ ಗೆಲ್ಲಲು ತಂತ್ರ ರೂಪಿಸಿದೆ. 2004ರಲ್ಲಿ ಮೊದಲ ಬಾರಿಗೆ ಗೆದ್ದಿದ್ದ ಸಿ. ಟಿ. ರವಿ ಬಳಿಕ 2008, 2013, 2018ರಲ್ಲಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಪಕ್ಷದ ಭದ್ರಕೋಟೆ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್. ಡಿ. ತಮ್ಮಯ್ಯ ಚಿಕ್ಕಮಗಳೂರು ನಗರಸಭೆಯ ಮಾಜಿ ಅಧ್ಯಕ್ಷರು. ಸಿ. ಟಿ. ರವಿಗೆ ಈ ಬಾರಿಯ ಟಿಕೆಟ್ ಎಂದು ಖಚಿತವಾಗುತ್ತಿದ್ದಂತೆಯೇ ಅವರು ಕಾಂಗ್ರೆಸ್ ಸೇರಿದರು. ಕ್ಷೇತ್ರದ ದೊಡ್ಡ ಸಮುದಾಯಗಳಲ್ಲಿ ಒಂದಾದ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರು.
ಕ್ಷೇತ್ರದಲ್ಲಿ ಸುಮಾರು 2.20 ಲಕ್ಷ ಮತದಾರರು ಇದ್ದಾರೆ. ಸಿ. ಟಿ. ರವಿ ಅವರ ಹಿಂದುತ್ವ ಅಜೆಂಡಾ, ಹಿಜಾಬ್ ಹಲಾಲ್ ಹೇಳಿಕೆಗಳು, ಸಿದ್ದರಾಮಯ್ಯ ವಿರುದ್ಧದ ಕಟು ಟೀಕೆ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಲಿದೆಯೇ? ಕಾದು ನೋಡಬೇಕಿದೆ.
ಜೆಡಿಎಸ್‌ನಿಂದ ತಿಮ್ಮಶೆಟ್ಟಿ ಕಣದಲ್ಲಿದ್ದಾರೆ. ಆದರೆ ಎಂಎಲ್‌ಸಿ ಭೋಜೇಗೌಡರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಬೆಂಬಲಿಗರಿಗೆ ಸೂಚನೆ ನೀಡುತ್ತಿರುವ ವಿಡಿಯೋ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವೈರಲ್ ಆಗಿತ್ತು. ಸಿ. ಟಿ. ರವಿ ಸೋಲಿಸಲು ಕಾಂಗ್ರೆಸ್, ಜೆಡಿಎಸ್ ಒಂದಾಗಿವೆಯೇ?.












Click it and Unblock the Notifications