ಚಿಕ್ಕಮಗಳೂರು: ಮಳೆ- ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜು
ಚಿಕ್ಕಮಗಳೂರು, ಜೂನ್ 28: "ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಎರಡು ವರ್ಷ ಸುರಿದ ಮಳೆಗೆ ಜಿಲ್ಲೆಯ ಮಲೆನಾಡು ಅಕ್ಷರಶಃ ತತ್ತರಿಸಿ ಹೋಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ,'' ಎಂದು ಜಿಲ್ಲಾಧಿಕಾರಿ ರಮೇಶ್. ಕೆ. ಎನ್. ಹೇಳಿದ್ದಾರೆ.
"463 ಸ್ವಯಂ ಸೇವಕರು, 290 ಹೋಂ ಗಾರ್ಡ್ಸ್, 70 ಸ್ವಿಮ್ಮರ್ ಸ್ಪೆಷಲಿಸ್ಟ್, 16 ಎನ್‌ಜಿಓ ತಂಡ, ಹೋಬಳಿ ಮಟ್ಟದಲ್ಲಿ ರಿಲೀಫ್ ಟೀಮ್, 62 ಸೇಫ್ ಕೇಂದ್ರಗಳು. ಇಟಾಚಿ, ಜೆಸಿಬಿ, ಟ್ರ್ಯಾಕ್ಟರ್, ಟ್ರಿಲ್ಲರ್, ಟಿಪ್ಪರ್‌ಗಳನ್ನು ಸಿದ್ಧತೆ ಮಾಡಿಕೊಂಡಿದೆ.''
ಕಳೆದ ಎರಡು ವರ್ಷಗಳಿಂದ ಮಳೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿಗರನ್ನು ಕಂಗಾಲಾಗಿಸಿದೆ. ಆಕಾಶದಲ್ಲಿ ಮೋಡ ಕಡುಗಟ್ಟಿದರೆ ಮಲೆನಾಡಿಗರ ಮನದಲ್ಲಿ ಭಯ ಹುಟ್ಟುತ್ತದೆ. ಯಾಕಂದರೆ, ಕಳೆದೆರಡು ವರ್ಷಗಳ ಮಳೆ ಅಬ್ಬರ ಅರ್ಧ ಮಲೆನಾಡನ್ನು ತೊಯ್ದಿತ್ತು. ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿತ್ತು.

ವರುಣನ ಅಬ್ಬರಕ್ಕೆ ಗುಡ್ಡಗಳೇ ಕಳಚಿ ಬಿದ್ದಿದ್ದವು, ಮನೆಗಳು ಕೊಚ್ಚಿ ಹೋಗಿದ್ದವು. ಜೀವಗಳು ನೀರಲ್ಲಿ ತೇಲಿಹೋಗಿದ್ದು, ನದಿಗಳು ಊರು, ಗದ್ದೆ, ತೋಟ ನೋಡದೆ ಮನಸ್ಸೋ ಇಚ್ಛೆ ಹರಿದು ಪ್ರವಾಹದ ರೂಪ ತಾಳಿದ್ದವು. ಈ ವರ್ಷದ ಆರಂಭದ ಮಳೆಯೂ ಅದೇ ಮುನ್ಸೂಚನೆ ನೀಡಿರುವುದು ಜಿಲ್ಲಾಡಳಿತ ಹಾಗೂ ಮಲೆನಾಡಿಗರಿಗೆ ಮತ್ತದೇ ಆತಂಕ ತೊಂದೊಡ್ಡಿದೆ. ಹಾಗಾಗಿ, ಈ ಬಾರಿ ಜಿಲ್ಲಾಡಳಿತ ವರುಣ ದೇವನಿಗೂ ಸೆಡ್ಡು ಹೊಡೆಯೋದಕ್ಕೆ ಹೈ ಅಲರ್ಟ್ ಘೋಷಿಸಿದೆ.
ಭೂಕುಸಿತ ಉಂಟಾಗುವ 108 ಗ್ರಾಮಗಳನ್ನು ಗುರುತಿಸಿದ್ದಾರೆ. 40 ಪ್ರವಾಹ ಏರಿಯಾಗಳನ್ನೂ ಗುರುತಿಸಿದ್ದಾರೆ. ಸೇತುವೆಗಳು ಕಳಚಿ ಬೀಳುವುದು, ನೀರು ಕೊಚ್ಚಿ ಹೋಗೋದು, ಲೋ ಲೈನ್ ಏರಿಯಾ ಸೇರಿದಂತೆ ಇಡೀ ಮಳೆಗಾಲವನ್ನು ಎದುರಿಸಿಲು ಕಾಫಿನಾಡು ಜಿಲ್ಲಾಡಳಿತ ಯುದ್ಧ ಸನ್ನದ್ಧ ರೀತಿಯಲ್ಲಿ ಸಿದ್ಧಗೊಂಡಿದೆ.

"ತಜ್ಞರು ಜಿಲ್ಲೆಯ 58 ಪ್ರದೇಶದಲ್ಲಿ ಭಾರೀ ಮಳೆಯಾದರೆ ಗುಡ್ಡ ಕುಸಿಯುವ ಎಚ್ಚರಿಕೆ ಕೂಡ ನೀಡಿದ್ದು, ಪ್ರವಾಹವಾಗುವ ಜಾಗಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಹಾಗಾಗಿ, ಜಿಲ್ಲಾಡಳಿತ ಸರ್ವ ಸನ್ನದ್ಧ ರೀತಿಯಲ್ಲಿ ಸಿದ್ಧಗೊಂಡಿದೆ. ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ಎಲ್ಲಾ ರೀತಿಯ ಮುಂಜಾಗೃತ ಕ್ರಮ ಕೈಗೊಂಡಿದೆ. ವಿಪತ್ತು ನಿರ್ವಹಣಾ ತಂಡದೊಂದಿಗೆ ಎನ್‌ಡಿಆರ್‌ಎಫ್ ತಂಡದಿಂದ ತರಬೇತಿ ಪಡೆದ ಸ್ವಯಂ ಸೇವಕರು ಜಿಲ್ಲೆಯಲ್ಲಿ ಮಳೆ ವಿಪತ್ತು ಎದುರಿಸಲು ರೆಡಿಯಾಗಿದ್ದಾರೆ,'' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
"ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಇರುವ ಇಟಾಚಿ, ಜೆಸಿಬಿ, ಟ್ರ್ಯಾಕ್ಟರ್, ಟ್ರಿಲ್ಲರ್, ಟಿಪ್ಪರ್ ಬಗ್ಗೆಯೂ ಮಾಹಿತಿ ಕಲೆ ಹಾಕಿರುವುದರ ಜೊತೆ ಜನಸಾಮಾನ್ಯರಿಗೂ ಕೂಡ ವಿಪತ್ತು ನಿರ್ವಹಣಾ ವೇಳೆಯಲ್ಲಿ ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ,'' ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಒಟ್ಟಾರೆ, ಕಾಫಿನಾಡಲ್ಲಿ ಕಳೆದೆರಡು ವರ್ಷದಿಂದ ವರುಣ ಅಬ್ಬರಿಸಿ- ಬೊಬ್ಬರಿಯುತ್ತಿದ್ದಾನೆ. ಪ್ರವಾಹ, ಗುಡ್ಡ ಕುಸಿತದ ಪ್ರಕರಣಗಳು ಕಳೆದೆರಡು ವರ್ಷದಲ್ಲೂ ಹೆಚ್ಚಿವೆ. ಹಾಗಾಗಿ, ಜಿಲ್ಲಾಡಳಿತ ಕೂಡ ಮಳೆ ಎದುರಿಸಲು ಸನ್ನದ್ಧವಾಗಿದೆ.












Click it and Unblock the Notifications