ಮಳೆಗಾಲ ಆರಂಭದ ಜೊತೆ ಸಾಂಕ್ರಾಮಿಕ ರೋಗಗಳ ಆತಂಕ: ಮುಂಜಾಗ್ರತಾ ಕ್ರಮಕ್ಕೆ ಡಿಸಿ ಆದೇಶ
ಚಿಕ್ಕಮಗಳೂರು, ಮೇ 26: ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಮಳೆ ನೀರು ಶೇಖರಣೆಯಿಂದ ಉಂಟಾಗಬಹುದಾದ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಿ ತೀವ್ರತರವಾದ ಪರಿಣಾಮವುಳ್ಳ ಡೆಂಗ್ಯೂ, ಚಿಕನ್‌ಗುನ್ಯ, ಮಲೇರಿಯಾದಂತಹ ತೀವ್ರ ತರವಾದ ಖಾಯಿಲೆಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು 2023 ನೇ ಸಾಲಿನ ರಾಷ್ಟ್ರೀಯ ಡೆಂಗ್ಯೂ ದಿನ ಆಚರಣೆಯ ಅಂಗವಾಗಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ಮಾತನಾಡಿದ ಅವರು, ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳಿಂದ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಮೀನುಗಾರಿಕೆ, ಕೈಗಾರಿಕೆ, ನೀರಾವರಿ ಕಂದಾಯ, ಲೋಕೋಪಯೋಗಿ ಇಲಾಖೆ ಹೀಗೆ ಹಲವು ಇಲಾಖೆಗಳು ತಮ್ಮ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಸೇರಿ ಅರಿವು ಮೂಡಿಸುವುದರ ಜೊತೆಗೆ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.
ಈ ವೇಳೆ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಉಮೇಶ್ ಸಭೆಗೆ ಮಾಹಿತಿ ನೀಡಿ, 2023ರ ಮೇ 23 ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 01 ಮಲೇರಿಯಾ ಪ್ರಕರಣ, 3 ಡೆಂಗ್ಯೂ, ಕೊಪ್ಪ ತಾಲೂಕಿನಲ್ಲಿ 3, ಜಿಲ್ಲೆಯಲ್ಲಿ ಒಟ್ಟು 06 ಡೆಂಗ್ಯೂ ಪ್ರಕರಣಗಳು, ತರೀಕೆರೆಯಲ್ಲಿ 01 ಚಿಕನ್‌ಗುನ್ಯ ಪ್ರಕರಣ, ತರೀಕೆರೆ ತಾಲೂಕಿನಲ್ಲಿ 02, ಮೂಡಿಗೆರೆ ತಾಲೂಕಿನಲ್ಲಿ 01 ಒಟ್ಟು 03 ಮೆದುಳು ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಚಿಕೆತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಹರೀಶ್ ಬಾಬು ಮಾತನಾಡಿ ಡೆಂಗ್ಯೂ ಜ್ವರವು ಒಂದು ವೈರಾಣುವಿನಿಂದ ಹರಡುವ ರೋಗವಾಗಿದ್ದು, ಸೋಂಕು ಹೊಂದಿದ ಈಡೀಸ್ ಇಸಿಷ್ಟೀ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಹಗಲು ವೇಳೆಯಲ್ಲಿ ಕಚ್ಚುತ್ತದೆ. ಸೋಂಕಿತ ಮನುಷ್ಯನನ್ನು ಕಚ್ಚಿದ 7 ರಿಂದ 8 ದಿನಗಳಲ್ಲಿ ಮತ್ತೊಬ್ಬರಿಗೆ ಸೊಳ್ಳೆ ಕಚ್ಚಿದಾಗ ರೋಗ ಹರಡುತ್ತದೆ ಎಂದು ತಿಳಿಸಿದರು.

ಸೊಳ್ಳೆಗಳ ನಿಯಂತ್ರಣಕ್ಕೆ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರಲ್, ಮತ್ತಿತರ ನೀರು ಶೇಖರಿಸುವ ವಸ್ತುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ತುಂಬಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚುಳದಿಂದ ಮುಚ್ಚಬೇಕು, ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್, ಎಳನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ ಸೂಕ್ತ ವಿಲೇವಾರಿ ಮಾಡಬೇಕು ಎಂದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜಿ. ಪ್ರಭು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮೋಹನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications