Chikkamagaluru Constituency : ಸಿ.ಟಿ.ರವಿ ನಾಗಾಲೋಟಕ್ಕೆ ಬೀಳುತ್ತಾ ಬ್ರೇಕ್?
ಪಶ್ಚಿಮ ಘಟ್ಟದ ಮಲೆನಾಡಿನಿಂದ ಹಿಡಿದು ಅರೆ ಮಲೆನಾಡು ಪ್ರದೇಶವನ್ನು ಹೊಂದಿರುವ ವಿಶೇಷ ಕ್ಷೇತ್ರ ಚಿಕ್ಕಮಗಳೂರು. ಕಾಂಗ್ರೆಸ್-ಜನತಾ ಪರಿವಾರದ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು ದತ್ತಪೀಠ ವಿವಾದದಿಂದ ಕೇಸರಿ ಮಯವಾಗಿದೆ.
ರಾಜ್ಯದ ಅತ್ಯಂತ ದೊಡ್ಡ ಶಿಖರ ಮುಳ್ಳಯ್ಯನಗಿರಿ. ಹಿಂದೂ ಮುಸ್ಲಿಮರ ಭಾವೈಕ್ಯತೆ ಕೇಂದ್ರ ಇನಾಂ ದತ್ತಾತ್ರೇಯ ಬಾಬಾಬುಡನ್‌ಗಿರಿ ಕ್ಷೇತ್ರ ಇರೋದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲೇ. ಪಶ್ಚಿಮ ಘಟ್ಟದ ಮಲೆನಾಡಿನಿಂದ ಹಿಡಿದು ಅರೆ ಮಲೆನಾಡು ಪ್ರದೇಶವನ್ನು ಹೊಂದಿರುವ ವಿಶೇಷ ಕ್ಷೇತ್ರ ಚಿಕ್ಕಮಗಳೂರು. ಕಾಂಗ್ರೆಸ್-ಜನತಾ ಪರಿವಾರದ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು ದತ್ತಪೀಠ ವಿವಾದದಿಂದ ಕೇಸರಿ ಮಯವಾಗಿದೆ. ದೇಶದಲ್ಲೇ ಮೊಟ್ಟ ಮೊದಲು ಕಾಫಿ ಬೆಳೆಗೆ ಜನ್ಮ ನೀಡಿದ್ದು ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಎನ್ನುವ ಹೆಗ್ಗಳಿಕೆ ಇದೆ.
ನೈಸರ್ಗಿಕವಾಗಿ ಅತ್ಯಂತ ಸಂಪತ್ತು ಭರಿತವಾದ ಈ ಪ್ರದೇಶ, ಪ್ರವಾಸಿಗರ ನೆಚ್ಚಿನ ತಾಣ. ವೀಕೆಂಡ್ ಸೇರಿದಂತೆ ರಜಾ ದಿನಗಳಲ್ಲಿ ದೇಶ, ವಿದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರು ಇಲ್ಲಿನ ತಾಣಗಳಿಗೆ ಭೇಟಿ ನೀಡುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ, ಕಲ್ಲತ್ತಗಿರಿ, ಶೋಲಾ ಅರಣ್ಯಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಬೇಕಿದ್ದ ದತ್ತಾತ್ರೇಯ ಪೀಠ ರಾಜಕೀಯ ಲಾಭ ನಷ್ಟಗಳಿಗೆ ಎರಡು ದಶಕಗಳಿಂದ ಮುನ್ನುಡಿ ಬರೆದಿದೆ.

ಸಿ.ಟಿ.ರವಿ ನಾಗಾಲೋಟಕ್ಕೆ ಬೀಳುತ್ತಾ ಬ್ರೇಕ್?
ಸ್ವಾತಂತ್ರ್ಯ ಬಂದ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಚಿಕ್ಕಮಗಳೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಹಾಗಾಗಿಯೇ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ರಾಜಕೀಯ ಪುನರ್ಜನ್ಮಕ್ಕೆ ವೇದಿಕೆ ಮಾಡಿಕೊಂಡರು. ಒಂದು ಕಾಲದಲ್ಲಿ ಕಾಂಗ್ರೆಸ್ ಕೋಟೆಯನ್ನು ಭೇದಿಸಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿ ನಿರ್ಮಾಣವಾಗಿತ್ತು.
ಎಬಿವಿಪಿ ಕಾರ್ಯಕರ್ತನಾಗಿ ಕಾಲೇಜು ದಿನಗಳಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಯುವ ನಾಯಕ ಸಿ.ಟಿ.ರವಿ, ಹಿಂದುತ್ವದ ಒಂದೊಂದು ಹೋರಾಟವನ್ನೇ ರಾಜಕೀಯ ಮೆಟ್ಟಿಲಾಗಿ ಮಾಡಿಕೊಂಡು ಕಾಂಗ್ರೆಸ್ ಭದ್ರಕೋಟೆಯನ್ನ ಛಿದ್ರ ಮಾಡಿದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಿದ ಸಿಟಿ ರವಿ ಮತ್ತೆ ಹಿಂದುರಿಗಿ ನೋಡಿಯೇ ಇಲ್ಲ.

ಸತತ ನಾಲ್ಕು ಬಾರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಕಳೆದ 2018ರ ಚುನಾವಣೆಯಲ್ಲೂ ಸಿ.ಟಿ.ರವಿ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್ಸಿನ ಬಿ.ಎಲ್.ಶಂಕರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಆದರೆ ಬಿಜೆಪಿ ರಣತಂತ್ರ ತಲೆಕೆಳಗು ಮಾಡುವಲ್ಲಿ ಸಕ್ಸಸ್ ಆಗಲಿಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಗೆಲುವಿನ ಸರದಾರ ಎಂದೆ ಹೆಸರುವಾಸಿಯಾಗಿದ್ದ ಸಗೀರ್ ಅಹ್ಮದ್ ಬಿಟ್ಟರೆ ಬೇರೆ ಯಾವ ನಾಯಕರು ಬಿಜೆಪಿಗೆ ಸೆಡ್ಡು ಹೊಡೆಯಲು ಸಾಧ್ಯವೇ ಆಗಿಲ್ಲ.
ಹಾಗಂತ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಪ್ರಯತ್ನವನ್ನು ಕೈಬಿಟ್ಟಿಲ್ಲ. ಹೇಗಾದರೂ ಮಾಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿ ಮಣಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯ ಹುಡುಕಾಟಕ್ಕೆ ಇಳಿದಿದೆ. ಸದ್ಯ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದೇ ಗುರುತಿಸಿಕೊಳ್ಳುತ್ತಿರುವ ಗಾಯತ್ರಿ ಶಾಂತೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಆದರೆ ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದ ಬಿ.ಎಚ್.ಹರೀಶ್ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಇನ್ನು ಸದ್ಯ ಸಿ.ಟಿ.ರವಿ ಆಪ್ತ ಹೆಚ್.ಡಿ. ತಮ್ಮಯ್ಯ ಕಾಂಗ್ರೆಸ್ ಸೇರಿದ್ದು ಟಿಕೆಟ್ ಅಕಾಂಕ್ಷಿಯಾಗಿದ್ದಾರೆ. ಇತ್ತ ಜೆಡಿಎಸ್ ಸಹ ಅಭ್ಯರ್ಥಿ ಘೋಷಣೆ ಮಾಡಿ ಬಿಜೆಪಿಗೆ ಟಕ್ಕರ್ ನೀಡಲು ಸಜ್ಜಾಗಿದೆ. ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ, ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಉಚಿತ ಆರೋಗ್ಯ ಶಿಬಿರ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮ ಮಾಡುತ್ತಾ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಸಿ.ಟಿ.ರವಿ ಸ್ಪರ್ಧೆ ನಿಶ್ಚಿತ. ಜೆಡಿಎಸ್‌ನಿಂದ ತಿಮ್ಮಶೆಟ್ಟಿ ಹೆಸರು ಘೋಷಣೆಯಾಗಿದೆ. ಕಾಂಗ್ರೆಸ್ ಟಿಕೆಟ್‌ಗಾಗಿ ಬಿ.ಎಚ್.ಹರೀಶ್ ಹಾಗೂ ಎಚ್.ಡಿ.ತಮ್ಮಯ್ಯ, ಗಾಯತ್ರಿ ಶಾಂತೇಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಟ್ಟಿನಲ್ಲಿ ಸಿ.ಟಿ.ರವಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕೊನೆ ಕ್ಷಣದವರೆಗೂ ಕಾಂಗ್ರೆಸ್-ಜೆಡಿಎಸ್ ಕಸರತ್ತು ನಡೆಸುವುದು ಮಾತ್ರ ಖಚಿತವಾಗಿದೆ.
ಮಲೆನಾಡು ಮತ್ತು ಅರೆಮಲೆನಾಡು ಸಮ್ಮಿಳತವಾಗಿರುವ ಚಿಕ್ಕಮಗಳೂರು ಕ್ಷೇತ್ರದಲ್ಲಿ 2 ಲಕ್ಷ 16 ಸಾವಿರದ 389 ಮತದಾರರಿದ್ದಾರೆ. ಎಸ್ಸಿ, ಎಸ್ಟಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನದಲ್ಲಿ ಲಿಂಗಾಯತರು ಮತ್ತು ಮುಸ್ಲಿಂ ಮತದಾರರಿದ್ದಾರೆ.
ಮತದಾರರ ವಿವರ
ಒಟ್ಟು ಮತದಾರರು - 2,16,389
ಪುರುಷ ಮತದಾರರು -1,10,101
ಮಹಿಳಾ ಮತದಾರರು -1,06,288
ಜಾತಿವಾರು ಮತ ಲೆಕ್ಕಾಚಾರ
ಎಸ್ಸಿ, ಎಸ್ಟಿ - 40,000
ಲಿಂಗಾಯಿತರು - 36,000
ಒಕ್ಕಲಿಗರು - 16,000
ಮುಸ್ಲಿಮರು - 30,000
ಕುರುಬರು - 27,000
ಇತರೆ ಸಮುದಾಯ - 36,000












Click it and Unblock the Notifications