ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ: ಅವನತಿಯ ಹಂತದಲ್ಲಿ ಹಿರೇಬೈಲು ಸರ್ಕಾರಿ ಶಾಲೆ: 90 ವಿದ್ಯಾರ್ಥಿಗಳ ಗತಿಯೇನು?
ಚಿಕ್ಕಮಗಳೂರು, ಮೇ 26: 90ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲು ಎಂಬ ಕುಗ್ರಾಮದ ಸರ್ಕಾರಿ ಶಾಲೆಯ ಸಮಸ್ಯೆ ಒಂದೆರಡಲ್ಲ. ಮಳೆಗಾಲ ಆರಂಭದ ಜೊತೆಗೆ ಶಾಲೆ ಕೂಡ ಪುನಾರಾರಂಭವಾಗಲಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ಸರ್ಕಾರಿ ಶಾಲೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಸಮಸ್ಯೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಶಾಲೆಯಲ್ಲಿ ಮಳೆ ನೀರು ಗೋಡೆಗೆ ಬೀಳದಂತೆ ಗೋಡೆಗೆ ಪೋಷಕರು ಟಾರ್ಪಲ್ ಕಟ್ಟಿದ್ದಾರೆ. ಶಾಲೆ ಕಿಟಕಿಯಲ್ಲಿ ಹಾವುಗಳು ಓಡಾಡಬಹುದಂತಹಾ ಕಿಂಡಿಗಳಿದ್ದು, ಶಾಲೆಯ ಗೋಡೆಗೂ-ಕಾಂಪೌಂಡ್‌ಗೂ ಸಂಬಂಧವೇ ಇಲ್ಲದಂತಹ ಸ್ಥಿತಿ ಇದೆ.

ಈ ಶಾಲೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಎಲ್ಲರೂ ಕೂಡ ಕೂಲಿ ಕಾರ್ಮಿಕರ ಮಕ್ಕಳು. ಈ ಶಾಲೆಗೆ 90 ವರ್ಷದ ಇತಿಹಾಸವಿದೆ. ಆದರೆ, ಶಾಲೆಯ ಪರಿಸ್ಥಿತಿ ಹೇಳತೀರದಂತಾಗಿದೆ. ಈವರೆಗೂ ಪ್ರತಿ ಮಳೆಗಾಲವನ್ನೂ ಎದುರಿಸಿ ಉಳಿದಿರುವ ಶಾಲೆಯ ಸದ್ಯದ ಸ್ಥಿತಿ ಈ ಮಳೆಗಾಲಕ್ಕೆ ಗ್ಯಾರಂಟಿ ಇಲ್ಲ ಎಂಬಂತಾಗಿದೆ.
ಈ ಶಾಲೆ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಟಾರ್ಪಲ್ ಕಟ್ಟಿದ್ದು, ಈ ಕಟ್ಟಡದಿಂದ ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ಎಂದುಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದು ಸರ್ಕಾರಿ ಶಾಲೆ ಎನ್ನುವುದಕ್ಕಿಂತ ಬಡವರ ಶಾಲೆಯಾಗಿದೆ. ಇಲ್ಲಿ ಓದುತ್ತಿರೋ 90 ಜನ ಮಕ್ಕಳು ಕೂಡ ಬಡಮಕ್ಕಳು. ಅಪ್ಪ-ಅಮ್ಮ ಇಡೀ ದಿನ ಕೂಲಿಗೆ ಹೋದರೆ ಮಕ್ಕಳು ಇಡೀ ದಿನ ಶಾಲೆಯಲ್ಲೇ ಇರಬೇಕು. ಇದು ಕಾರ್ಮಿಕ ಮಕ್ಕಳ ಶಾಲೆಯಾಗಿದೆ.
90 ವರ್ಷದ ಇತಿಹಾಸವಿರೋ ಈ ಶಾಲೆಯ ಸದ್ಯದ ಪರಿಸ್ಥಿತಿ ನೋಡಿದರೆ ಈ ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಂತಿದೆ. ಆದರೆ ಈ 90 ಮಕ್ಕಳು ಇದೇ ಶಾಲೆಯಲ್ಲಿ ಓದಬೇಕು. ಮಳೆಗಾಲದಲ್ಲಿ ಗಾಳಿ-ಮಳೆಯಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರಿ? ಮಕ್ಕಳಿಗೆ ಏನಾದರೂ ತೊಂದರೆಯಾದರೆ ಗತಿ ಏನು ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಶಾಲೆಗೆ ಹಲವು ವರ್ಷಗಳಿಂದ ಅನುದಾನ ಸಿಕ್ಕಿಲ್ಲ. ಸರ್ಕಾರದ ಬೇಜವಾಬ್ದಾರಿ ಹಾಗೂ ವರುಣನ ರುದ್ರನರ್ತನದ ಮಧ್ಯೆ 90 ವರ್ಷದ ಇತಿಹಾಸದ ಸರ್ಕಾರಿ ಶಾಲೆ ತನ್ನ ಕೊನೆ ದಿನಗಳಲ್ಲಿ ಎಣಿಸುತ್ತಿದೆ. ಶಾಲೆಯ ಕಚೇರಿ ಹಾಗೂ ಮತಗಟ್ಟೆ ಕೇಂದ್ರ ಬಿಟ್ಟರೆ ಉಳಿದೆಲ್ಲಾ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿದೆ. ಕಟ್ಟಡ, ಕೊಠಡಿ, ಶೌಚಾಲಯ ಎಲ್ಲವೂ ಅಯೋಮಯವಾಗಿದೆ.
ಕಳೆದ ಮಳೆಗಾಲದಲ್ಲಿ ಶಾಲೆಯ ಗೋಡೆಗಳಿಗೆ ಪೋಷಕರು ಕಟ್ಟಿದ ಪ್ಲಾಸ್ಟಿಕ್ ಶೀಟ್ ಶಾಲೆಯ ಗೋಡೆಗಳಿಗೆ ಬೆನ್ನೆಲುಬಾಗಿ ನಿಂತಿದೆ. ಆದರೆ, ಈ ವರ್ಷ ಗೋಡೆಗಳು ಮತ್ತಷ್ಟು ಅಪಾಯಕಾರಿಯಾಗಿ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿರುವ ಶಾಲೆಯ ಬಗ್ಗೆ ಗಮನ ಹರಿಸದ ಸ್ಥಳೀಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಡಿಡಿಪಿಐ ಹಾಗೂ ಬಿಓಗಳಿಗೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ದುರಸ್ಥಿ ಮಾಡಲು ಸೂಚನೆ ನೀಡುತ್ತೇನೆ ಎಂದಿದ್ದಾರೆ.
ಇನ್ನು ಈ ಶಾಲೆಯಲ್ಲಿ ಸಮಸ್ಯೆ ಅಲ್ಲ. ಸಮಸ್ಯೆಯೇ ಶಾಲೆಯಲ್ಲಿದೆ. ಯಾಕಂದರೆ ಕಟ್ಟಡದ ಸ್ಥಿತಿ ಹೀಗಾದರೆ, ಇಲ್ಲಿ ಶಿಕ್ಷಕರೂ ಇಲ್ಲ. ಮಂಜೂರಾಗಿರೋ ಐವರು ಶಿಕ್ಷಕರಲ್ಲಿ ಐವರ ಸ್ಥಾನವೂ ಖಾಲಿ ಇದೆ. ಈ ಶಾಲೆಗೆ ನಿಯೋಜನೆಗೊಂಡಿರುವ ಶಿಕ್ಷಕ ಹಿರೇಬೈಲು ಹಾಗೂ ಇಡಕಣೀ ಎರಡೂ ಗ್ರಾಮದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತ, ಎರಡೂ ಶಾಲೆಯನ್ನು ನಿರ್ವಹಣೆ ಮಾಡುವ ಸಾಹಸ ಮಾಡುತ್ತಿದ್ದಾರೆ.
ಬಿಇಓಗೆ ಸ್ಥಳಿಯರು ಹಲವು ಬಾರಿ ಮನವಿ ಮಾಡಿದರೂ ನೋ ಯೂಸ್ ಎನ್ನುವಂತಾಗಿದೆ. ಇನ್ನು ಶಾಲೆಗೆ ಎರಡು ಎಕೆರೆ ಜಾಗ ಇದ್ದರೂ ಅದನ್ನ ಒತ್ತುವರಿ ಮಾಡಲಾಗಿದೆ. ಸರ್ಕಾರ ಆ ಒತ್ತುವರಿ ಭೂಮಿಯನ್ನು ಶಾಲೆಗೆ ಬಿಡಿಸಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.












Click it and Unblock the Notifications