ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಟಿಂಗ್ ಶಾಪ್ ಕೆಲಸಗಾರರು
ಚಿಕ್ಕಮಗಳೂರು, ಸೆಪ್ಟೆಂಬರ್, 13: ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 7 ಕೋಟಿ ರೂಪಾಯಿ ವಂಚಿಸಿರುವ ಆರೋಪ ಹಿನ್ನೆಲೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ವಂಚನೆಗೆ ಸಹಾಯ ಮಾಡುತ್ತಿದ್ದರೆನ್ನಲಾದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಧನರಾಜ್ ಮತ್ತು ರಮೇಶ್ ಎನ್ನುವವರು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಉದ್ಯಮಿಗೆ ವಂಚಿಸಲು ನಕಲಿ ಬಿಜೆಪಿ, ಆರ್‌ಎಸ್‌ಎಸ್ ನಾಯಕರನ್ನು ಚೈತ್ರಾ ಕುಂದಾಪುರ ಮತ್ತು ತಂಡ ಸೃಷ್ಟಿಸುತ್ತಿದ್ದರು ಎನ್ನಲಾಗಿದ್ದು, ಇದೀಗ ಅದೇ ಟೀಂನ ಕಡೂರಿನ ಧನರಾಜ್ ಮತ್ತು ರಮೇಶ್ ಪ್ರಕರಣದ ಕುರಿತು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಿಮಗೂ ಅನುಕೂಲ ಆಗುತ್ತದೆ ಎಂದಿದ್ದಕ್ಕೆ ನಾವು ಒಪ್ಪಿಕೊಂಡಿದ್ದೀವಿ ಎಂದು ವೀಡಿಯೋ ಮಾಡುವ ಮೂಲಕ ಚೈತ್ರಾ ಕುಂದಾಪುರ ವಿರುದ್ಧ ಆರೋಪ ಮಾಡಿದ್ದಾರೆ.

ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ಎಂದು ನಮಗೆ ಗೊತ್ತಿರಲಿಲ್ಲ. ನಾನು ಹೇಳಿದ ರೀತಿಯಲ್ಲಿ ನೀವು ನಟಿಸಿ ಎಂದು ಹೇಳಿದ್ದರು. ನಾವು ಹಾಗೇ ಮಾಡಿದ್ವಿ ಅಷ್ಟೇ. ದೊಡ್ಡ ವ್ಯವಹಾರದ ಬಗ್ಗೆ ಮಾಹಿತಿ ಇಲ್ಲ. ಎಲ್ಲಾ ಕ್ರಿಯೆಟ್ ಮಾಡಿದ್ದು ಗಗನ್. ಟಿಕೆಟ್ ನೀಡಿದರೆ ಅವರು ಗೆಲ್ಲುತ್ತಾರೆ, ಆಗ ನಿಮಗೆ ಸಹಾಯ ಆಗುತ್ತದೆ ಎಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಹಾಗೂ ಧನರಾಜ್ ಎಂಬವರನ್ನು ಆರ್‌ಎಸ್‌ಎಸ್ ಪ್ರಚಾರಕರು ಮತ್ತು ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಉದ್ಯಮಿಗೆ ಚೈತ್ರಾ ಪರಿಚಯಿಸಿದ್ದರು ಎಂದು ತಿಳಿದುಬಂದಿದೆ.
ಬೈಂದೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದ ಬಾಬು ಪೂಜಾರಿ ಮುಂದೆ ಹೇಗೆ ನಟಿಸಬೇಕು ಎಂದು ಮೊದಲೇ ಸೂಚನೆ ನೀಡಿದ್ದರು. ಅಲ್ಲದೆ ಚೈತ್ರಾ, ನಕಲಿ ಬಿಜೆಪಿ-ಆರ್‌ಎಸ್‌ಎಸ್ ನಾಯಕರಿಗೆ ಕಡೂರಿನ ಮನೆಯೊಂದರಲ್ಲಿ ತರಬೇತಿ ನೀಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈ ಕೆಲಸಕ್ಕೆ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ವ್ಯಕ್ತಿಗೆ ಚೈತ್ರಾ ಮತ್ತು ಗಗನ್ ಹಣ ನೀಡಿದ್ದರು. ಸಲೂನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಗಗನ್ ಮತ್ತು ಧನರಾಜ್ ಎಂಬವರಿಗೂ ನಟನೆ ಮಾಡಲು ಹಣ ಕೊಟ್ಟಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications