ದಾಖಲೆಗಳ ಪ್ರಕಾರ ದತ್ತಪೀಠದ ಎರಡನೇ ಹಂತದ ಹೋರಾಟ ನಡೆಸುತ್ತೇವೆ - ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್ 7: ದತ್ತಪೀಠವೇ ಬೇರೆ, ಬಾಬಾಬುಡನ್ ದರ್ಗಾ ಬೇರೆ ಎಂಬ ವಾಸ್ತವಿಕ ನೆಲೆಯಲ್ಲಿ ದಾಖಲೆಗಳ ಪ್ರಕಾರ ದತ್ತಪೀಠದ ಎರಡನೇ ಹಂತದ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಸಿ.ಟಿ.ರವಿ, ವಾಸ್ತವಿಕ ನೆಲೆಯಲ್ಲಿ ದಾಖಲೆಗಳ ಪ್ರಕಾರ ಎರಡನೇ ಹಂತದ ಹೋರಾಟ ಕೈಗೊಳ್ಳಲಾಗುವುದು. ಇನಾಂ ದತ್ತಾತ್ರೇಯ ಪೀಠ ಸರ್ವೆ ನಂಬರ್ 195ರಲ್ಲಿ ಇದ್ದರೆ, ಬಾಬಾಬುಡನ್ ದರ್ಗಾ ಜಾಗರ ಹೋಬಳಿ ನಾಗೇನಹಳ್ಳಿ ಸರ್ವೆ ನಂಬರ್ 57ರಲ್ಲಿ ಇದೆ. ಮುಜರಾಯಿ ದಾಖಲೆಗಳ ಪ್ರಕಾರ ದತ್ತ ದೇವರಿಗೆ ಪ್ರತ್ಯೇಕ ತಸ್ತಿಕ್ ನಿಗದಿಯಾಗಿದ್ದರೆ, ದರ್ಗಾದ ಹೆಸರಿನಲ್ಲಿ ತಸ್ತಿಕ್ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಭಾಗದಲ್ಲಿನ 1861 ಎಕರೆ ಜಮೀನನ್ನು ಕಬಳಿಸುವ ಉದ್ದೇಶದಿಂದ ಎರಡನ್ನು ಮಿಶ್ರಣ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸೌಹಾರ್ದ ಇತ್ಯರ್ಥಕ್ಕೆ ಪ್ರಯತ್ನಪಟ್ಟು ಮನವಿ ಸಲ್ಲಿಸಿದ್ದೇವು. ಅದನ್ನು ಪುರಸ್ಕರಿಸದೆ ಎಲ್ಲ ಗೊತ್ತಿದ್ದು ಅನ್ಯಾಯ ಮಾಡಿದರು. ನಮ್ಮ ಹೋರಾಟದ ಮೊದಲ ಹಂತದ ಜಯವಾಗಿ ತಾತ್ಕಾಲಿಕ ಅರ್ಚಕರ ನೇಮಕವಾಗಿದೆ. ನೀತಿ ನಿಯಮಗಳ ಅನುಸಾರ ಮುಂದಿನ ದಿನಗಳಲ್ಲಿ ಶಾಶ್ವತ ಅರ್ಚಕರ ನೇಮಕಯಾಗಲಿದೆ. ಮುಂದೆ ನ್ಯಾಯಾಲಯ ಮತ್ತು ಸರ್ಕಾರದ ಮೂಲಕ ನ್ಯಾಯ ಪಡೆಯಲಿದ್ದೇವೆ ಎಂದರು.

ಇನ್ನು 47 ವರ್ಷಗಳಿಂದ ದತ್ತಪೀಠದ ಉಮೇದುವಾರಿಕೆ ಹಾಗೂ ಹಿಂದೂ ಅರ್ಚಕರಿಗಾಗಿ ಹಿಂದೂ ಸಂಘಟನೆಗಳು ಹೋರಾಡುತ್ತಿದ್ದವು. ಸದ್ಯ ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರದ ಸಂದೀಪ್ ಅವರನ್ನು ದತ್ತಪೀಠಕ್ಕೆ ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಈ ಬಾರಿ ಹಿಂದೂ ಅರ್ಚಕರು ದತ್ತ ಪೀಠದಲ್ಲಿ ಪೂಜೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ನೇಮಿಸಿರುವ ತಾತ್ಕಾಲಿಕ ಅರ್ಚಕರು ಮೂರು ದಿನಗಳು ದತ್ತಾತ್ರೇಯ ಸ್ವಾಮಿಗೆ ಪೂಜೆಗಳನ್ನು ನೆರವೇರಿಸಲಿದ್ದಾರೆ.

ದತ್ತಜಯಂತಿ : ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ ಸಿ.ಟಿ ರವಿ
ದತ್ತಜಯಂತಿ ಹಿನ್ನೆಲೆ ಶಾಸಕ ಸಿ.ಟಿ.ರವಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ. ನಗರದ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಭಿಕ್ಷಾಟನೆ ಮೂಲಕ ಮಾಲಾಧಾರಿಗಳಿಂದ ಪಡಿಸಂಗ್ರಹ ನಡೆದಿದೆ. ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಸಾರ್ವಜನಿಕರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ ಅಡಿಕೆ -ಬೆಲ್ಲ ನೀಡಿ ಸ್ವಾಗತಿಸಿದರು. ಬುಧವಾರ ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ಗುರುವಾರ ಇರುಮುಡಿ ರೂಪದಲ್ಲಿ ಅದನ್ನ ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ.












Click it and Unblock the Notifications