ಚಿಕ್ಕಮಗಳೂರು; ದತ್ತ ಜಯಂತಿಗೆ ಚಾಲನೆ, ಮಾಲೆ ಧರಿಸಿದ ಸಿ. ಟಿ. ರವಿ
ಚಿಕ್ಕಮಗಳೂರು, ಡಿಸೆಂಬರ್ 17; ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿಗೆ ಭಾನುವಾರ ಚಾಲನೆ ಸಿಕ್ಕಿದೆ. ಬಿಜೆಪಿ ನಾಯಕ ಸಿ. ಟಿ. ರವಿ ಸೇರಿದಂತೆ ದತ್ತಭಕ್ತರು ಮಾಲೆ ಧಾರಣೆ ಮಾಡುವ ಮೂಲಕ 10 ದಿನಗಳ ದತ್ತಜಯಂತಿ 2023ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ದೊರೆತಿದೆ.
ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಜಿ ಶಾಸಕ ಸಿ. ಟಿ. ರವಿ ಜೊತೆ 300ಕ್ಕೂ ಅಧಿಕ ದತ್ತ ಭಕ್ತರು ಮಾಲಾಧಾರಣೆ ಮಾಡಿದರು. ಕಳೆದ ವರ್ಷಕ್ಕಿಂತ ಈ ಬಾರಿ ಭಾರೀ ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಮಾಲೆ ಧರಿಸಿದ್ದಾರೆ.

ಭಾನುವಾರದಿಂದ 10 ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ನಡೆಯಲಿದೆ. ಈ ವೇಳೆ ಶಾಂತಿ, ಸುವ್ಯಸ್ಥೆ ಕಾಪಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಅಗತ್ಯ ಕ್ರಮಗಳನ್ನು ಕೈಗೊಂಡಿವೆ.
ಡಿಸೆಂಬರ್ 24ರ ಭಾನುವಾರ ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ಮಹಿಳೆಯರು ಬೃಹತ್ ಸಂಕೀರ್ತನ ಯಾತ್ರೆ ನಡೆಸಿ ದತ್ತಪೀಠದಲ್ಲಿ ಹೋಮ-ಹವನ ನಡೆಸುವ ಮೂಲಕ ಅನುಸೂಯ ಜಯಂತಿ ಆಚರಿಸಲಿದ್ದಾರೆ. ಡಿಸೆಂಬರ್ 25ರ ಸೋಮವಾರದಂದು ಚಿಕ್ಕಮಗಳೂರು ನಗರದಲ್ಲಿ ದತ್ತಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಈ ಬಾರಿಯ ಶೋಭಾಯಾತ್ರೆಯಲ್ಲಿ 20 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಡಿಸೆಂಬರ್ 26ರಂದು ರಾಜ್ಯದ ಮೂಲೆ ಮೂಲೆಗಳಿಂದ ಬರುವ 25,000ಕ್ಕೂ ಅಧಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.
ದತ್ತಜಯಂತಿಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರವಾಸಿಗರು ಒಂದು ವಾರಗಳ ಕಾಲ ಚಿಕ್ಕಮಗಳೂರು ಪ್ರವಾಸ ಮುಂದೂಡಿ ಎಂದು ಸಹ ಮನವಿ ಮಾಡಲಾಗಿದೆ.
ದತ್ತಾತ್ರೇಯರ ಆಸ್ತಿ ಕಬಳಿಕೆ; ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ. ಟಿ. ರವಿ, "ದತ್ತಾತ್ರೇಯರ ಹೆಸರಲ್ಲಿ 1,861 ಎಕರೆ ಆಸ್ತಿ ಇತ್ತು. ಟೆನೆಂಟ್ ಆಕ್ಟ್ ಬರುವ ಮುಂಚೆಯೇ ಆಸ್ತಿ ಬಗ್ಗೆ ಕಂದಾಯ ದಾಖಲೆಗಳು ಹೇಳುತ್ತದೆ. ಅದರ ಚರ ಆಸ್ತಿ, ಚಿನ್ನ, ಬೆಳ್ಳಿ, ಹರಕೆ, ಕಾಣಿಕೆ ವಸ್ತುಗಳ ಅಕ್ರಮ ಪರಭಾರೆ ಬಗ್ಗೆ ದಿ. ಮೇಜರ್ ಪೂವಯ್ಯ ನೇತೃತ್ವದಲ್ಲಿ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ" ಎಂದರು.
"ದತ್ತಾತ್ರೇಯರ 1861 ಎಕರೆ ಜಮೀನನ್ನು ಪ್ರಭಾವಿಗಳು ಕಬಳಿಸಿದ್ದಾರೆ. ನಕಲಿ ದಾಖಲೆಗಳ ಮೂಲಕ ದತ್ತಾತ್ರೇಯರ ಆಸ್ತಿ ಕಬಳಿಕೆ ಮಾಡಿದ್ದಾರೆ. ದತ್ತಾತ್ರೇಯರ ಆಸ್ತಿ ಕಬಳಿಸಿರೋದು ಬಹುತೇಕ ಕಾಂಗ್ರೆಸ್ಸಿಗರು. ಅದರಲ್ಲಿ ಸಾಕಷ್ಟು ಪ್ರಭಾವಿಗಳು ಸೇರಿದ್ದಾರೆ. ದತ್ತಪೀಠ-ದರ್ಗಾ ಬೇರೆ-ಬೇರೆ ಅಂತ ಅವರಿಗೂ ಗೊತ್ತು. ದತ್ತಾತ್ರೇಯರ ಆಸ್ತಿ ಕಬಳಿಸಲು ಸುಳ್ಳು ಹೇಳುತ್ತಿದ್ದಾರೆ" ಎಂದು ಆರೋಪಿಸಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶಾಸಕ ಪ್ರಸಾದ್ ಅಬ್ಬಯ್ಯ ತಮ್ಮ ಮನೆಗೆ ಟಿಪ್ಪು ಹೆಸರಿಟ್ಟುಕೊಳ್ಳಲಿ. ಕಾಂಗ್ರೆಸ್‌ನವರಿಗೆ ಪ್ರೀತಿ ಇದ್ದರೆ ಕಾಂಗ್ರೆಸ್ ಕಚೇರಿಗಳಿಗೆ ಟಿಪ್ಪು ಹೆಸರಿಟ್ಟುಕೊಳ್ಳಲಿ. ಮೈಸೂರು ವಿಮಾನ ನಿಲ್ದಾಣಕ್ಕೆ ಬೇಡ" ಎಂದರು.
"ಮೈಸೂರು ಸಂಸ್ಥಾನಕ್ಕೆ ಅಪಾರ ಕೊಡುಗೆ ಕೊಟ್ಟಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ವಿಮಾನ ನಿಲ್ದಾಣಕ್ಕೆ ಇಡಬೇಕು. ಟಿಪ್ಪು ಹಿಂದೂಗಳ ಮಾರಣಹೋಮ ನಡೆಸಿ, ಕ್ರೈಸ್ತರ ನೆತ್ತರ ಕೋಡಿ ಹರಿಸಿದ್ದವನು. ದೇವಾಲಯ ಧ್ವಂಸಗೊಳಿಸಿ ದೌರ್ಜನ್ಯ ಎಸಗಿದ್ದಾನೆ. ಅವರ ಹೆಸರು ಯಾವುದೇ ಕಾರಣಕ್ಕೂ ಇಡಬಾರದು" ಎಂದು ಆಗ್ರಹಿಸಿದರು.












Click it and Unblock the Notifications