ಮೂಡಿಗೆರೆಯಲ್ಲಿ ಸೆರೆಯಾಗಿದ್ದು ಭೈರ ಆನೆಯೇ?; ಸ್ಥಳೀಯರಿಂದ ಅನುಮಾನ ವ್ಯಕ್ತ
ಚಿಕ್ಕಮಗಳೂರು, ಡಿಸೆಂಬರ್, 20: ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಹಾಗೂ ಜನರ ನಿದ್ದೆಗೆಡಿಸಿದ್ದ ಕಾಡಾನೆ ಭೈರನನ್ನು ಸೆರೆ ಹಿಡಿದಿದ್ದೇವೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಸೆರೆಹಿಡಿದ ಆನೆಯೇ ಭೈರ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೆ ಇದೀಗ ಅಲ್ಲಿನ ಸ್ಥಳೀಯರು, ಸೆರೆಹಿಡಿದಿದ್ದು ನಿಜವಾಗಲೂ ಭೈರ ಆನೆಯೇ ಎಂದು ಕೇಳುತ್ತಿದ್ದಾರೆ.
ಮೂಡಿಗೆರೆ ಅರಣ್ಯ ಅಧಿಕಾರಿಗಳು ನಿಜಕ್ಕೂ ಭೈರನನ್ನೇ ಸೆರೆ ಹಿಡಿದ್ದಾರೆಯೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದು ಭೈರನಿಗೋ, ಬೇರೆಯವನಿಗೋ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಚರಣೆ ಬಗ್ಗೆಯೇ ಅನುಮಾನಗಳು ವ್ಯಕ್ತವಾಗುತ್ತಿವೆ. ಸೆರೆಯಾಗಿದ್ದು ನಿಜವಾಗಲೂ ನರಹಂತಕ ಭೈರಾನಾ? ಈ ಬಗ್ಗೆ ಸ್ಪಷ್ಟತೆ ನೀಡುವಂತೆ ಸ್ಥಳೀಯರ ಆಗ್ರಹವಾಗಿದೆ. ಶಿಶಿಲಾ ಭಾಗದಲ್ಲಿ ಒಂಟಿ ಸಲಗ ಕಂಡ ನಂತರ ಈ ಅನುಮಾನ ವ್ಯಕ್ತವಾಗಿದೆ. ಇದೀಗ ಭೈರನಂತೆ ಉದ್ದ ಕೊರೆ ಇರುವ ಒಂಟಿ ಸಲಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರ ಮೂರು ಕಾಡಾನೆ ಸೆರೆಗೆ ಮಾತ್ರ ಅನುಮತಿ ನೀಡಿತ್ತು. ಮೂರು ಕಾಡಾನೆಗಳು ಸೆರೆಯಾದ ಮೇಲೂ ನಿಲ್ಲದ ಕಾರ್ಯಾಚರಣೆ ಅನುಮಾನಕ್ಕೆ ದಾರಿಮಾಡಿಕೊಟ್ಟಂತಿದೆ.

ಜನರ ನಿದ್ದೆಗೆಡಿಸಿದ್ದ ಭೈರ ಆನೆ
ಕಳೆದ ನಾಲ್ಕೈದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಹಾಗೂ ಜನರ ನಿದ್ದೆಗೆಡಿಸಿದ್ದ ಕಾಡಾನೆ ಭೈರನನ್ನು ಸೆರೆ ಹಿಡಿದಿದ್ದಾರೆ. ಮೂಡಿಗೆರೆ ಕಾಡಾನೆ ಭೈರನನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ನಾಲ್ಕೈದು ತಿಂಗಳಿನಿಂದ ತಾಲೂಕಿನಾದ್ಯಂತ ದಾಳಿ ಮಾಡಿ, ಇಬ್ಬರು ವ್ಯಕ್ತಿಗಳ ಜೀವ ತೆಗೆದಿದ್ದ ಭೈರನಿಂದ ಜನ ಬೇಸತ್ತು ಹೋಗಿದ್ದರು. ಆಗಿನಿಂದ ಅಲ್ಲಿನ ಜನರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದರು. ಆನೆ ಹಾವಳಿಯಿಂದ ತಿಂಗಳಿಗೊಂದು ಹೆಣ ಬೀಳುತ್ತಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಆದ್ದರಿಂದ ರೊಚ್ಚಿಗೆದ್ದ ಜನ ಶಾಸಕರ ಮೇಲೂ ಹಲ್ಲೆಗೆ ಮುಂದಾಗಿದ್ದರು. ಮಲೆನಾಡಿನಲ್ಲಿ ತೀವ್ರವಾಗಿ ದಾಳಿ ನಡೆಸುತ್ತಿದ್ದ ಮೂರು ಕಾಡಾನೆಗಳನ್ನು ಹಿಡಿಯಲು ಸರ್ಕಾರ ಕೂಡ ಅನುಮತಿ ನೀಡಿತ್ತು. ಅದರಂತೆಯೇ ಕಳೆದ ಎಂಟು ದಿನಗಳಿಂದ ಆರು ಸಾಕಾನೆಗಳೊಂದಿಗೆ ಮೂರು ಕಾಡಾನೆಗಗಳನ್ನು ಹಿಡಿಯಲು ಅಧಿಕಾರಿಗಳು-ಸ್ಥಳೀಯರು ಹಗಲಿರುಳು ಶ್ರಮ ಪಟ್ಟಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.
ಸಾಕಾನೆಗಳನ್ನ ಬಳಿಸಿ ಕಾಡಾನೆಗಳ ಸೆರೆ
ಹೀಗೆ ಸಾಕಾನೆಗಳನ್ನು ಬಳಿಸಿಕೊಂಡು ಎರಡು ಕಾಡಾನೆಗಳನ್ನು ಸೆರೆ ಹಿಡಿದಿದ್ದರು ಎನ್ನಲಾಗಿತ್ತು. ಪುಂಡಾಟ ನಡೆಸಿ ಕಾಡಾನೆ ನಾಪತ್ತೆಯಾಗಿತ್ತು. ಅರಣ್ಯ ಅಧಿಕಾರಿಗಳ ಡ್ರೋನ್ ಕ್ಯಾಮರಕ್ಕೂ ಕಣ್ತಪ್ಪಿಸಿ ಎಸ್ಕೇಪ್ ಆಗಿ ಬೈರ ಓಡಾಡುತ್ತಿದ್ದ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದರು. ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ಭೈರ ಇರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದರು ಎಂದು ಹೇಳಲಾಗಿತ್ತು. ಹೀಗೆ ಸತತವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಭೈರನನ್ನು ಬಲೆಗೆ ಬೀಳಿಸಿದ್ದಾರೆ. ಜನರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ ಎನ್ನುವ ಆನೆಯನ್ನು ಸೆರೆ ಹಿಡಿದಿದ್ದಾರೆ. ಕಾಡಾನೆ ಸೆರೆಯಾದ ಕಾರಣ ಜನರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಮಾಹಿತಿಯೂ ಲಭ್ಯವಾಗಿತ್ತು.












Click it and Unblock the Notifications