ಕಾಡಿನಿಂದ ಕದಲುತ್ತಿಲ್ಲ ಅಂಬೇಡ್ಕರ್ ಪ್ರತಿಮೆ; ಉಪ ಚುನಾವಣೆ ಎಫೆಕ್ಟ್?
ಚಿಕ್ಕಮಗಳೂರು, ಡಿಸೆಂಬರ್ 5: ಗೋಮಾಳ ಜಾಗಕ್ಕೆ ಆಗ್ರಹಿಸಿ ರಾತ್ರೋರಾತ್ರಿ ಚಿಕ್ಕಮಗಳೂರಿನ ಅರಿಶಿನಗುಪ್ಪೆ ಗ್ರಾಮಸ್ಥರು ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು, ನಾಲ್ಕು ದಿನಗಳಿಂದ ಆ ಪ್ರತಿಮೆ ಕಾಡಿನಲ್ಲಿಯೇ ಉಳಿದಿದೆ.
ಜಿಲ್ಲಾಧಿಕಾರಿ ಪ್ರತಿಮೆಯನ್ನು ತೆರವುಗೊಳಿಸಲು ಆದೇಶಿಸಿದ್ದರೂ ಚುನಾವಣೆಗೆ ಹೆದರಿ ಅಧಿಕಾರಿಗಳು ತೆರವು ಮಾಡದೇ ಹಾಗೇ ಬಿಟ್ಟಿದ್ದಾರೆ, ತೆರವುಗೊಳಿಸಿದರೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಚಿಕ್ಕಮಗಳೂರಿನ ಅರಿಶಿನಗುಪ್ಪೆ ಗ್ರಾಮದಲ್ಲಿ ಗೋಮಾಳದ ಜಾಗಕ್ಕಾಗಿ ರಾತ್ರೋರಾತ್ರಿ ಗುಡಿಸಲು ನಿರ್ಮಿಸಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಗ್ರಾಮದ ಸರ್ವೆ ನಂ 52ರಲ್ಲಿ ಗುಡಿಸಲು ನಿರ್ಮಿಸಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದ್ದು, ಅದನ್ನು ತೆರವುಗೊಳಿಸಲು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಂಬೇಡ್ಕರ್ ಪ್ರತಿಮೆ ನೋಡಿ ವಾಪಸ್ಸಾಗಿದ್ದರು. ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ತಮಗೂ ಗೋಮಾಳ ನೀಡಬೇಕು ಎಂದು ಗ್ರಾಮಸ್ಥರು ಅಂಬೇಡ್ಕರ್ ಪ್ರತಿಮೆಯೊಂದಿಗೆ ಪ್ರತಿಭಟನೆಗೆ ಇಳಿದಿದ್ದರು. ನಿನ್ನೆಯೂ ತೆರವುಗೊಳಿಸಲು ಪೊಲೀಸ್, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕೊನೆ ಗಳಿಗೆಯಲ್ಲಿ ವಾಪಸ್ ಆಗಿದ್ದಾರೆ.

ಅಂಬೇಡ್ಕರ್ ಅವರ ಹೆಸರನ್ನು, ಅವರ ಪ್ರತಿಮೆಯನ್ನು ಹೀಗೆ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಪ್ರತಿಭಟನಾಕಾರರು, "ಸಚಿವರಿಗೆ ತಿಳಿಸಿಯೇ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಿ ಪ್ರತಿಭಟನೆ ಮಾಡ್ತಾ ಇದ್ದೇವೆ" ಎಂದು ಉತ್ತರಿಸಿದ್ದರು. ಅಕ್ರಮ ಅರಣ್ಯ ಪ್ರವೇಶಕ್ಕೆ ಗ್ರಾಮಸ್ಥರಿಗೆ ಸಚಿವರೇ ಕುಮ್ಮಕ್ಕು ನೀಡಿದ್ದಾರಾ ಎಂಬ ಅನುಮಾನವನ್ನೂ ಈ ಮಾತು ಹುಟ್ಟುಹಾಕಿ, ಪ್ರತಿಭಟನಾಕಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಈ ಕುರಿತು ವಾಗ್ವಾದ ನಡೆದಿತ್ತು.












Click it and Unblock the Notifications