ಚಾರ್ಮಾಡಿ ಘಾಟ್ ರಸ್ತೆ ತಿರುವಿನಲ್ಲಿ ಪಾತಾಳಕ್ಕೆ ಉರುಳಿದ ವಾಹನ
ಚಿಕ್ಕಮಗಳೂರು, ಜೂನ್ 20: ಭಾರಿ ಮಳೆಯಿಂದಾಗಿ ರಸ್ತೆ ಕಾಣದೆ ವಾಹನವೊಂದು ಮೇಲಿಂದ ಉರುಳಿರುವ ಘಟನೆ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಚಾರ್ಮಾಡಿ ಹೆದ್ದಾರಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ರಸ್ತೆ 5ನೇ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ. ಭಾರಿ ಮಳೆಯಿಂದಾಗಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಕೆಳಗೆ ಟಂಟಂ ವಾಹನ ಉರುಳಿ ಬಿದ್ದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಅಲ್ಯೂಮಿನಿಯಂ ತಂತಿಯನ್ನು ಲೋಡ್ ಮಾಡಿಕೊಂಡು ತೆರಳುವ ವೇಳೆ ರಸ್ತೆಯ ಬದಿಗೆ ಜರುಗಿದ ವಾಹನ ನಿಯಂತ್ರಣ ತಪ್ಪಿ ಏಕಾಏಕಿ ಪಾತಾಳಕ್ಕೆ ಬಿದ್ದಿದೆ.

ಸ್ಥಳಕ್ಕೆ ಸ್ಥಳೀಯರು ಧಾವಿಸಿ ವಾಹನ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಗಾಲ ಆರಂಭವಾಯಿತೆಂದರೆ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ.
ಆದಷ್ಟು ಬೇಗ ಸರ್ಕಾರ ತಿರುವಿನಲ್ಲಿ ರಸ್ತೆಗಳ ಅಗಲೀಕರಣ ಸೇರಿದಂತೆ ಅಪಘಾತ ವಲಯಗಳಲ್ಲಿ ಚಾಲಕರಿಗೆ ಗೋಚರವಾಗುವಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ವಾಹನ ಸವಾರರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.












Click it and Unblock the Notifications