ಮೂಡಿಗೆರೆ ಬಳಿ ಹೆದ್ದಾರಿ ಮಧ್ಯದಲ್ಲಿ ಕೆಟ್ಟು ನಿಂತ ಲಾರಿ, ವಾಹನ ಸವಾರರ ಪರದಾಟ
ಮೂಡಿಗೆರೆ, ಡಿಸೆಂಬರ್, 28: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ರೈತ ಭವನದ ಬಳಿ ಗುರುವಾರ (ಡಿಸೆಂಬರ್ 28) ಮಧ್ಯಾಹ್ನ ಲಾರಿಯೊಂದು ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ, ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡಿದ ಘಟನೆ ಸಂಭವಿಸಿತು.
ಚಿಕ್ಕಮಗಳೂರಿನಿಂದ ಟಿಎಪಿಎಇಎಂಎಸ್‌ಗೆ ಅಕ್ಕಿ ಸಾಗಿಸುತ್ತಿದ್ದ ಲಾರಿ, ರೈತ ಭವನದ ತಿರುವಿನಲ್ಲಿ ಕೆಟ್ಟು ನಿಂತಿತ್ತು. ಇದರಿಂದ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳು ಸಾಗಲು ದಾರಿಯಿಲ್ಲದೆ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಎರಡು ಕಿ.ಮೀ. ವರೆಗೆ ಸಾಲುಗಟ್ಟಿ ನಿಂತಿದ್ದವು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಲ್ಲಿ ರಸ್ತೆಯ ಒಂದು ಬದಿಯಲ್ಲಿ ವಾಹನಗಳು ಸಾಗಲು ಅವಕಾಶ ಮಾಡಿಕೊಟ್ಟರು. ಹೀಗೆ ಸಂಜೆಯಾದರೂ ಕೂಡ ವಾಹನಗಳು ಸರದಿ ಸಾಲಿನಲ್ಲಿ ಅಂಟಿಕೊಂಡು ನಿಂತಿದ್ದವು.

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ
ಇತ್ತೀಚೆಗಷ್ಟೇ ಹಿರಿಯೂರು ನಗರದ ವಿವಿ ಸಾಗರ ತಿರುವಿನ ಬಳಿಯಿರುವ ರಂಗಪ್ಪ ಡಾಬಾ ಹತ್ತಿರ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಘಟನೆ ಸೋಮವಾರ (ಡಿಸೆಂಬರ್ 25) ಮದ್ಯಾಹ್ನ ನಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೊನ್ನಾಳಿ ಮೂಲದ ರಮೇಶಚಾರಿ ಎನ್ನುವವರು ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.












Click it and Unblock the Notifications