ಕಡೂರು ತಾಲೂಕಿನ 28 ಹಳ್ಳಿಗಳಲ್ಲಿ ಎಣ್ಣೆ ಅಂಗಡಿ ವಿರುದ್ಧ ಆಕ್ರೋಶ
ಚಿಕ್ಕಮಗಳೂರು, ಸೆಪ್ಟೆಂಬರ್ 21: ನಮ್ಮೂರಲ್ಲಿ ಒಂದು ಎಣ್ಣೆ ಅಂಗಡಿ ಇದ್ದರೆ ಸಾಕಾಪ್ಪ ಅನ್ನುವ ಕಾಲ ಇದು. ಅಂತಹದರಲ್ಲಿ ಇಲ್ಲೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯ 28 ಹಳ್ಳಿಯ ಜನರು ನಮ್ಮೂರಿಗೆ ಮದ್ಯದ ಅಂಗಡಿ ಬೇಡ ಅಂತಾ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಕುಟುಂಬ ಸಮೇತ ಬಂದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮೂರಿಗೆ ಮದ್ಯದ ಅಂಗಡಿ ಬೇಡ ಎಂದು ಗ್ರಾಮಸ್ಥರ ಆಕ್ರೋಶ, ವಿವಿಧ ಸ್ಲೋಗನ್‌ಗಳ ಬೋರ್ಡ್ ಹಿಡಿದು ಧರಣಿ ನಿರತ ಮಹಿಳೆಯರು, ನಮ್ಮೂರನ್ನು ಉಳಿಸಿ ಎಂಬ ಯುವಕರು. ಇಂತಹ ದೃಶ್ಯ ಕಂಡು ಬಂದಿದ್ದು ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಹಳ್ಳಿಯ ಗ್ರಾಮಸ್ಥರು ನೂತನವಾಗಿ ತೆರೆದಿರುವ ಬಾರ್ ಅನ್ನು ಈ ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಊರಿನ ಗ್ರಾಮಸ್ಥರು, ಮಹಿಳೆಯರು, ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಷ್ಟು ವರ್ಷಗಳ ಕಾಲ ನಮ್ಮ ಊರಿನಲ್ಲಿ ಬಾರ್ ಇರಲಿಲ್ಲ, ನಮ್ಮ ಗಂಡಂದಿರು ವಾರದಲ್ಲಿ ಯಾವಾಗಲಾದರೊಮ್ಮೆ ಕುಡಿಯುತ್ತಿದ್ದರು. ಈಗ ಹಾಗಲ್ಲ ದಿನನಿತ್ಯವೂ ಕುಡಿಯಲು ಆರಂಭಿಸುತ್ತಾರೆ. ಇದರಿಂದಾಗಿ ನಮ್ಮ ಕುಟುಂಬವೇ ಸರ್ವನಾಶವಾಗುತ್ತದೆ. ಈ ಮಧ್ಯಪಾನ ಎಂಬುದು ಮಹಾ ದುಶ್ಚಟ. ಇದನ್ನು ಕಲಿತವರು ಅದರ ದಾಸರಾಗುತ್ತಾರೆ. ಆದ್ದರಿಂದ ನಮ್ಮ ಊರಿನಲ್ಲಿ ನೂತನವಾಗಿ ಆರಂಭವಾಗಿರುವ ಬಾರ್‌ನ್ನು ಈ ಕೂಡಲೇ ಮುಚ್ಚಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಊರಿನ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳು ಶಾಲೆಗೆ ಹೋಗುವ ಹಾದಿಯಲ್ಲಿ ಈ ಬಾರ್ ಇದ್ದು, ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳೂ ಸಹ ಅದರ ಕುರಿತಾಗಿ ಮುಂದುವರೆಯುತ್ತಾರೆ. ಇದಲ್ಲದೇ ಈ ಬಾರ್‌ನಿಂದ ಸುತ್ತಮುತ್ತಲಿನ 28 ಹಳ್ಳಿಯ ಮಹಿಳೆಯರು ಸಂಕಷ್ಟಕ್ಕೀಡಾಗುವ ಎಲ್ಲಾ ಲಕ್ಷಣಗಳು ಇದೆ. ಆದ್ದರಿಂದ ಈ ಕೂಡಲೇ ಬಾರ್ ಮುಚ್ಚುವಂತೆ ಗ್ರಾಮಸ್ಥರು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

ನಮ್ಮೂರ ಹೆಣ್ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಬ್ಯಾನರ್ ಕಟ್ಟಿದ ಗ್ರಾಮಸ್ಥರು
ಇನ್ನು ಇದೇ ರೀತಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಕೊಪ್ಪದ ಗ್ರಾಮಸ್ಥರು ಹೀಗೊಂದು ವಿಭಿನ್ನ ಹೋರಾಟ ಆರಂಭಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಊರಿನ ಮುಂದೆ ಬ್ಯಾನರ್ ಕಟ್ಟಿದ್ದಾರೆ.
ಗ್ರಾಮಸ್ಥರು ಹೀಗೆ ಪಟ್ಟು ಹಿಡಿದಿದ್ದೇಕೆ?
ಸಾಗರ ತಾಲ್ಲೂಕಿನ ಬೆಳ್ಳಿಕೊಪ್ಪ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಆರಂಭಿಸಲಾಗಿದೆ. ಗಣೇಶ ಚತುರ್ಥಿಯಂದು ಮಳಿಗೆ ಉದ್ಘಾಟನೆಯಾಗಿದ್ದು, ವ್ಯಾಪಾರವು ಶುರುವಾಗಿದೆ. ಇದಕ್ಕೆ ಬೆಳ್ಳಿಕೊಪ್ಪ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮೂರಿನಿಂದ ಮದ್ಯದಂಗಡಿ ತೆರವು ಮಾಡಬೇಕು ಎಂದು ಪಟ್ಟು ಹಿಡಿದು, ವಿಭಿನ್ನವಾಗಿ ಪ್ರತಿಭಟನೆ ಆರಂಭಿಸಿದ್ದರು.
ಹೆಣ್ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಬೆಳ್ಳಿಕೊಪ್ಪ ಗ್ರಾಮದಲ್ಲಿ ಸರ್ಕಾರ ಶಾಲೆ ಇದೆ. ಗ್ರಾಮದ ಬಹುತೇಕ ಮಕ್ಕಳು ಇದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. "ಮದ್ಯದಂಗಡಿಯು ಶಾಲೆಯಿಂದ 500 ಮೀಟರ್'ಗಿಂತಲೂ ದೂರವಿದೆ. ಆದರೆ ಶಾಲೆಗೆ ತೆರಳಬೇಕಾದರೆ ಮಕ್ಕಳು ಮದ್ಯದಂಗಡಿ ಮುಂದೆಯೇ ಹೋಗಬೇಕು. ಇದು ಮಕ್ಕಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ ನಮ್ಮೂರ ಹೆಣ್ಣು ಮಕ್ಕಳನ್ನು ನಾವು ಶಾಲೆಗೆ ಕಳುಹಿಸುವುದಿಲ್ಲ,'' ಎಂದು ಗ್ರಾಮಸ್ಥ ಸಿರಿವಾಳ ದಿನೇಶ್ ಆಕ್ರೋಶ ವ್ಯಕ್ತಪಡಿಸಿದ್ದರು.