ಚಿಕ್ಕಮಗಳೂರು ಜಿಲ್ಲೆಯಲ್ಲಿ 150 ಜನರಲ್ಲಿ ಎಚ್‍ಐವಿ ಪತ್ತೆ: ತಾಲೂಕುವಾರು ಪ್ರಕರಣಗಳ ವಿವರ ಇಲ್ಲಿದೆ
ಚಿಕ್ಕಮಗಳೂರು, ಮಾರ್ಚ್, 10: ಜಿಲ್ಲೆಯಲ್ಲಿ 450 ಮಂದಿ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ 150 ಮಂದಿಯಲ್ಲಿ ಎಚ್‍ಐವಿ ಪತ್ತೆಯಾಗಿದೆ ಎಂದು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2025ಕ್ಕೆ ಕ್ಷಯರೋಗ ಮುಕ್ತ ಭಾರತ ಸಂಕಲ್ಪ ಮಾಡಿದೆ. ವರ್ಷಕ್ಕೆ ಎರಡು ಬಾರಿ ಕಫ ಪರೀಕ್ಷೆ ನಡೆಸಲಾಗುತ್ತಿದೆ. ರೋಗ ಪತ್ತೆಯಾದ ವ್ಯಕ್ತಿಗಳು 6 ರಿಂದ 9 ತಿಂಗಳವರೆಗೆ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಿದರು.

ಪೌಷ್ಠಿಕ ಆಹಾರಕ್ಕಾಗಿ ಸಹಾಯಧನ
ಪೌಷ್ಠಿಕ ಆಹಾರ ಸೇವನೆಗಾಗಿ ತಿಂಗಳಿಗೆ 500 ರೂ. ಕ್ಷಯರೋಗಿಗಳ ಅಕೌಂಟ್‌ಗೆ ಹಾಕಲಾಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದವರಿಗೂ ಪ್ರೋತ್ಸಾಹ ಧನವಾಗಿ 500 ರೂಪಾಯಿ ನೀಡಲಾಗುತ್ತದೆ. ಚಿಕ್ಕಮಗಳೂರು ತಾಲೂಕಿನಲ್ಲಿ 297, ಕಡೂರು 338, ಕೊಪ್ಪ 47, ಮೂಡಿಗೆರೆ 115, ತರೀಕೆರೆ 213, ನರಸಿಂಹರಾಜಪುರ ತಾಲೂಕಿನಲ್ಲಿ 55, ಶೃಂಗೇರಿಯಲ್ಲಿ 24 ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ. ಹಾಗೆಯೇ ಚಿಕಿತ್ಸೆಯಿಂದ ಬಹುತೇಕ ಜನರು ಗುಣಮುಖರಾಗಿದ್ದು, ಇನ್ನು 450 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಎಚ್‍ಐವಿ ಪ್ರಕರಣ ವಿವರ ಇಲ್ಲಿದೆ
ಜಿಲ್ಲೆಯಲ್ಲಿ 2011-12ನೇ ಸಾಲಿನಲ್ಲಿ 592 ಮಂದಿ ಎಚ್‍ಐವಿ ಸೋಂಕಿತರು ಪತ್ತೆಯಾಗಿದ್ದು, 2022-023ನೇ ಸಾಲಿನಲ್ಲಿ ಅದು 150ಕ್ಕೆ ಇಳಿಕೆಯಾಗಿದೆ. ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದೆ ರಕ್ತ ಪಡೆಯುವುದು, ಚಚ್ಚುಮದ್ದು ಪಡೆಯಲು ಸಿರಂಜ್ ಬದಲಾವಣೆ ಮಾಡದಿದ್ದರೆ ರೋಗ ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ತಿಳಿಸಿದರು.

ಆರೋಗ್ಯಾಧಿಕಾರಿ ಹೇಳಿದ್ದೇನು?
ನಂತರ ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎನ್.ಉಮೇಶ್ ಮಾತನಾಡಿ, 2023ಕ್ಕೆ ಮಲೇರಿಯಾ 4, ಡೆಂಗ್ಯೂ 197, 16 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 3,43,967 ಜನರ ರಕ್ತ ಪರೀಕ್ಷೆ ನಡೆಸಿದ್ದು, 4 ಜನರಲ್ಲಿ ಮಲೇರಿಯಾ ಪತ್ತೆಯಾಗಿದ್ದ, ಇತ್ತೀಚೆಗೆ 40 ಸಾವಿರ ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ಆದರೆ ಇವರಲ್ಲಿ ಯಾರಲ್ಲೂ ಮಲೇರಿಯಾ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಜನವರಿ ತಿಂಗಳಿನಿಂದ ಮಾರ್ಚ್‌ವರೆಗೆ ಚಿಕ್ಕಮಗಳೂರು ತಾಲೂಕಿನಲ್ಲಿ 2, ಕಡೂರು ತಾಲೂಕಿನಲ್ಲಿ 3 ಜನರಲ್ಲಿ ಡೆಂಗ್ಯೂ, 9 ಜನರಲ್ಲಿ ಚಿಕೂನ್‍ಗುನ್ಯಾ ಪತ್ತೆಯಾಗಿದೆ ಎಂದರು. ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹೊಂದಿದ್ದು, 25 ಹಾಸಿಗೆಯ ಐಸಿಯು ಇದೆ. ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆರೋಗ್ಯ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರ ಮನೆಬಾಗಲಿಗೆ ತೆರಳಿ ಪರೀಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications