ಚಿಕ್ಕಮಗಳೂರು ಚೆಕ್‌ಪೋಸ್ಟ್‌ಗಳಲ್ಲಿ13.5 ಕೆ.ಜಿ.ಚಿನ್ನ ವಶ: ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ
ಚಿಕ್ಕಮಗಳೂರು,ಏಪ್ರಿಲ್ 5: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಜಿಲ್ಲಾದ್ಯಂತ ಇದುವರೆಗೆ 9 ಪ್ರಕರಣಗಳನ್ನು ದಾಖಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 22 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಗಳು 24 ಗಂಟೆಗಳ ಕಾಲ ತಪಾಸಣೆ ನಡೆಸುತ್ತಿದ್ದಾರೆ ಎಂದು ಚಿಕ್ಕಮಗಳೂರು ಎಸ್‌ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಹೋಮ್‍ಸ್ಟೇಗಳನ್ನು ತಪಾಸಣೆ ಮಾಡಲಾಗಿದೆ. ಜಿಲ್ಲಾದ್ಯಂತ 9,100 ಪರವಾನಿಗೆ ಬಂದೂಕುಗಳಿದ್ದು, 3,500 ಬಂದೂಕುಗಳನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೆಪಾಸಿಟ್ ಮಾಡಿದ್ದಾರೆ. ಉಳಿದವರೂ ಶೀಘ್ರ ಬಂದೂಕುಗಳನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೆಪಾಸಿಟ್ ಮಾಡಬೇಕು ಎಂದು ತಿಳಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದ್ದು, ಇದುವರೆಗೂ 486 ಜನರ ಮೇಲೆ ಸೆಕ್ಯೂರಿಟಿ ಕೇಸ್ ದಾಖಲೆ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ದಾಳಿಯ ಸಂದರ್ಭದಲ್ಲಿ ವಸ್ತುಗಳನ್ನು ವಶಪಡಿಸಿಕೊಂಡ ನಂತರ ನ್ಯಾಯಾಲಯದ ಗಮನಕ್ಕೆ ತಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಬೇಕಾಗಿರುವುದರಿಂದ ಪ್ರಕರಣ ದಾಖಲಿಸಲು ವಿಳಂಬವಾಗುತ್ತಿದೆ ಎಂದರು.
ಇನ್ನು ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 22 ಚೆಕ್‌ಪೋಸ್ಟ್‌ಗಳಲ್ಲಿ ಎರಡು ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಅಧಿಕಾರಿಗಳು ಚೆಕ್‍ಪೋಸ್ಟಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 13ಕೆ.ಜಿ ಗಾಂಜಾ, 624 ಲೀ. ಮಧ್ಯವನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 9 ಕೋಟಿ 85ಲಕ್ಷ ರೂ. ಮೌಲ್ಯದ ವಸ್ತುಗಳು ಸೇರಿದಂತೆ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಅಕ್ರಮಗಳನ್ನು ತಡೆಗಟ್ಟಲು ಸಿ-ವಿಜಿಲ್ ಮೊಬೈಲ್ ಆ್ಯಪ್
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯ ಉಲ್ಲಂಘನೆ ಹಾಗೂ ಅಕ್ರಮಗಳನ್ನು ತಡೆಗಟ್ಟಲು ಸಿ-ವಿಜಿಲ್ ಮೊಬೈಲ್ ಆ್ಯಪ್ ಸೇವೆಯನ್ನು ಚುನಾವಣಾ ಆಯೋಗ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ್ಯಪ್ ಕ್ಯೂಆರ್ ಕೋಡ್ ಬಳಸಿ ಮೊಬೈಲ್‌ಗಳಲ್ಲಿ ಡೌನ್‍ಲೋಡ್ ಮಾಡಿಕೊಂಡು ಆ್ಯಪ್ ಮೂಲಕ ದೂರುಗಳನ್ನು ದಾಖಲಿಸಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲು ಆ್ಯಪ್‍ನಲ್ಲಿ ಅವಕಾಶವಿದೆ. ಇಂಟರ್‍ನೆಟ್ ಮತ್ತು ಜಿಪಿಎಸ್ ಸೌಲಭ್ಯ ಹೊಂದಿರುವ ಮೊಬೈಲ್‌ಗಳಲ್ಲಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರುಗಳು, ಅಕ್ರಮಗಳ ವಿಡಿಯೋ, ಪೋಟೊಗಳನ್ನು ಆ್ಯಪ್ ಮೂಲಕ ಅಪ್‍ಲೋಡ್ ಮಾಡಬೇಕು ಎಂದು ತಿಳಿಸಿದರು.
ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿದ ಮಾಹಿತಿ ಜಿಲ್ಲಾ ಚುನಾವಣಾ ಕಂಟ್ರೋಲ್ ರೂಮ್, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಪಂ ಸಿಇಒ, ಚುನಾವಣಾ ಆಯೋಗ ಹಾಗೂ ಆಯಾ ತಾಲೂಕುಗಳ ಕಂಟ್ರೋಲ್ ರೂಮ್ ತಲುಪಲಿದೆ. ತಕ್ಷಣ ಇಲ್ಲಿಂದ ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಆರ್‍ಒ ಅವರಿಗೆ ಮಾಹಿತಿ ರವಾನೆಯಾಗಲಿದೆ.
ಆರ್‍ಒಗಳು ಪರಿಶೀಲನೆ ನಡೆಸಿ ದೂರು ದಾಖಲಿಸಲಿದ್ದಾರೆ. ಮೇಲ್ಮಟ್ಟದ ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರು ಪ್ರಕರಣದ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದ ಅವರು, ಹಳೆಯ ವಿಡಿಯೋ ಮತ್ತು ಫೋಟೋ ಮತ್ತು ಆಡಿಯೋ ತುಣುಕುಗಳನ್ನು ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಲು ಸಾಧ್ಯವಿಲ್ಲ ಎಂದರು.
ದೂರುಗಳು ಬಂದ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ದೂರುದಾರರು ತಮ್ಮ ಮಾಹಿತಿಯನ್ನು ಗೌಪ್ಯವಾಗಿಡಬೇಕೆಂದು ಅನಿಸಿದಲ್ಲಿ ಆ್ಯಪ್‍ನಲ್ಲೇ ಅದಕ್ಕೆ ಅವಕಾಶವಿದೆ. ಆ್ಯಪ್‍ಗೆ ಜಿಪಿಎಸ್ ಅಳವಡಿಸಿರುವುದರಿಂದ ಎಲ್ಲಿಂದ ದೂರು ಬಂದಿದೆ ಎಂದು ಸುಲಭವಾಗಿ ಗ್ರಹಿಸಬಹುದಾಗಿದ್ದು, ದೂರು ಬಂದ ತಕ್ಷಣ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದ ಅವರು, ಆ್ಯಪ್ ಬಳಸಿಕೊಂಡು ತಮ್ಮ ಸಮೀಪದಲ್ಲಿ ನಡೆಯುವ ಚುನಾವಣಾ ಅಕ್ರಮಗಳನ್ನು ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದರು.
ರಾತ್ರಿ 10ರಿಂದ ಬೆಳಗ್ಗೆ 10ರವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ಧಾರ್ಮಿಕ ಕೇಂದ್ರಗಳನ್ನು ಮತ್ತು ಹಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ರಾಜಕೀಯ ಪಕ್ಷಗಳು 40ಜನ ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶವಿದೆ.
ಹಾಗೆಯೇ ಪ್ರಾದೇಶಿಕ ಪಕ್ಷಗಳಿಗೆ 20 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶವಿದೆ. ಇದರ ಖಚ್ಚುವೆಚ್ಚವನ್ನು ರಾಜಕೀಯ ಪಕ್ಷದ ಮೇಲೆ ವಿಧಿಸಲಾಗುವುದು. ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ದುರುಪಯೋಗಪಡಿಸಿಕೊಳ್ಳದಂತೆ ಕಣ್ಗಾವಲು ಇಡಲಾಗಿದೆ ಎಂದರು.












Click it and Unblock the Notifications