ನಂದಿಗ್ರಾಮದಲ್ಲಿ ಶಿವೋತ್ಸವ: ದಿ. ಶಂಕರ್ ನಾಗ್ ಕನಸು ಶೀಘ್ರ ನನಸು; ಸಿಎಂ ಬೊಮ್ಮಾಯಿ
ಚಿಕ್ಕಬಳ್ಳಾಪುರ, ಮಾರ್ಚ್ 1: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಶಿವೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಈ ಐತಿಹಾಸಿಕ ಸ್ಥಳದಲ್ಲಿ ಇಂದು ಶಿವನ ದರ್ಶನ ಮಾಡಲಾಗಿದೆ. ಇದು ಶತಮಾನಗಳ ಇತಿಹಾಸವಿರುವ ದೇವಾಲಯವಿದು. ಶಿವ ಎಂದರೆ ಸೃಷ್ಟಿ, ಲಯದಲ್ಲಿ ಸೃಷ್ಟಿಯಿದೆ. ಲಯ ಮತ್ತು ಸೃಷ್ಟಿ ಒಂದೇ ನಾಣ್ಯದ ಎರಡು ಮುಖಗಳು. ಶಿವರಾತ್ರಿ ದಿನ ಜಾಗರಣೆ ಮಾಡುವುದು, ಸುಖ- ದುಃಖವನ್ನು ಸಮನಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಬದುಕು ಶಿವನ ರೀತಿಯಲ್ಲಿ ಇರಬೇಕು. ಕಣ್ಣು ಮುಚ್ಚಿಕೊಂಡಿರುವ ಶಿವ ಎಲ್ಲವನ್ನು ಅರಿತುಕೊಂಡಿರುತ್ತಾನೆ. ಆತ್ಮ ಲಿಂಗದ ಸತ್ಯವನ್ನು ಅರಿತುಕೊಂಡರೆ ಶಿವ ಅಂಗೈಯಲ್ಲಿ ಕಾಣುತ್ತಾನೆ. ದೈವಕ್ಕಿಂತ ಭಕ್ತಿಯ ಶಕ್ತಿ ಹೆಚ್ಚು ಎಂದು ಹೇಳಿದರು.

ಐತಿಹಾಸ ಪ್ರಸಿದ್ಧ ಶ್ರೀಭೋಗನಂದೀಶ್ವರ ದೇವಸ್ಥಾನ ಅಭಿವೃದ್ಧಿಯಾಗಬೇಕಿದೆ. ನಂದಿ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿಯಾಗಬೇಕು. ದಿ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗಲೇ ನಂದಿಬೆಟ್ಟಕ್ಕೆ ರೋಪ್‌ವೇ ಮಾಡಲು ಹೇಳಿದ್ದರು. ನಟ ದಿ. ಶಂಕರ್ ನಾಗ್ ನನಗೆ ಹೇಳಿ ಪ್ರಸ್ತಾವನೆ ಕೊಟ್ಟಿದ್ದರು. ನಾನು ಮುಖ್ಯಮಂತ್ರಿ ಆದ ಮೇಲೆ ಶಂಕರ್ ನಾಗ್ ಕನಸನ್ನು ನನಸು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎತ್ತಿನಹೊಳೆ ಯೋಜನೆ ಮಾಡಲಾಗುವುದು. ಕೋಲಾರ ಪ್ರವಾಸ ಮಾಡಿದಾಗ ಗಮನಕ್ಕೆ ಬಂತು. ಅತೀ ಹೆಚ್ಚು ಪ್ಲೋರೈಡ್ ಇರುವ ನೀರು ಕುಡಿದು ಅಂಗವಿಕರಾಗಿದ್ದು ಗಮನಕ್ಕೆ ಬಂದಿದೆ. ಎತ್ತಿನಹೊಳೆ ಯೋಜನೆಯಲ್ಲಿ ಹಲವಾರು ಮಾರ್ಪಾಡು ಮಾಡುವ ಮೂಲಕ ಯೋಜನೆಗೆ ತಡೆಯಾಯಿತು. ಈ ವರ್ಷ ಕಾಮಗಾರಿಗೆ ಚುರುಕು ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಭೋಗನಂದೀಶ್ವರ ದೇವಸ್ಥಾನದಲ್ಲಿ ಶಿವೋತ್ಸವ ಕಾರ್ಯಕ್ರಮ
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನದಲ್ಲಿ ಇಂದು ಶಿವೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. ಮಹಾಶಿವರಾತ್ರಿ ಪ್ರಯುಕ್ತ ಸ್ಥಳೀಯ ಶಾಸಕ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ನಡೆಯುತ್ತಿರುವ ಶಿವೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು.
ನಂದಿ ಗ್ರಾಮದಲ್ಲಿ ನಡೆಯುತ್ತಿರುವ ಶಿವೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಪಸ್ಥಿತಿ ಇದ್ದರು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್, ಸಿರಿಗೇರೆ ಶ್ರೀಗಳು, ಮುದ್ದೇನಹಳ್ಳಿಯ ಮಧುಸೂದನ ನಾಯ್ಡು ಆಗಮಿಸಿದ್ದರು.
ನಂತರ ಸಚಿವ ಕೆ. ಸುಧಾಕರ್ ಮಾತನಾಡಿ, ಕಳೆದ 40 ವರ್ಷಗಳ ಹಿಂದೆಯೇ ನಂದಿ ಗಿರಿಧಾಮಕ್ಕೆ ರೋಪ್‌ವೇ ಮಾಡಬೇಕು ಎಂದು ಕನಸು ಕಂಡಿದ್ದೆವು. ಅದು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನನಸಾಗಿದೆ ಎಂದರು.
1973ರವರೆಗೂ ಬೆಂಗಳೂರಿಗೆ ನೀರು ಕೊಡುತ್ತಿದ್ದ ಅರ್ಕಾವತಿ ನೀರು ನಮ್ಮ ಭಾಗದ್ದು. ಈ ಜಿಲ್ಲೆಗೆ ವಿಶೇಷ ನೀರಾವರಿ ಕೊಡುಗೆ ನೀಡಲು ಸಿಎಂ ತೀರ್ಮಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗಕ್ಕೆ ನೀರಾವರಿಯಲ್ಲಿ ಸಿಎಂ ಕೊಡುಗೆ ನೀಡಲಿದ್ದಾರೆ ಎಂದು ತಿಳಿಸಿದರು.
ಮೈಸೂರು ದಸರಾ, ಹಂಪಿ ಉತ್ಸವದ ರೀತಿ ಪ್ರತೀ ವರ್ಷ ನಂದಿಯಲ್ಲಿ ಶಿವೋತ್ಸವ ಆಚರಣೆ ಮಾಡೋಣ. ಆಧ್ಯಾತ್ಮಿಕ ಹಿನ್ನೆಲೆಯಿರುವ ಮಹಾನಿಯರು ಹುಟ್ಟಿದ ಜಿಲ್ಲೆಯಿದು. ಈ ಕ್ಷೇತ್ರದ ಮಹಿಮೆಯನ್ನು ಇಡೀ ರಾಜ್ಯಕ್ಕೆ ತಿಳಿಸೋಣ ಎಂದು ಸಚಿವ ಕೆ. ಸುಧಾಕರ್ ಹೇಳಿದರು.












Click it and Unblock the Notifications