ಚಿಕ್ಕಬಳ್ಳಾಪುರ: ಆದಿಯೋಗಿ ಸನ್ನಿಧಿಯಲ್ಲಿ ನಾಗರಾಧನೆಯ ಮಹತ್ವದ ಬಗ್ಗೆ ಸದ್ಗುರು ಹೇಳಿದ್ದಿಷ್ಟು
ಚಿಕ್ಕಬಳ್ಳಾಪುರ, ಆಗಸ್ಟ್, 22: ಚಿಕ್ಕಬಳ್ಳಾಪುರ ಜಿಲ್ಲೆಯ ಆದಿಯೋಗಿ ಧಾನ್ಯ ಕೇಂದ್ರದಲ್ಲಿ ಸೋಮವಾರ ನಾಗರಾಧನೆ ಮಾಡಲಾಗಿದ್ದು, ಈ ವೇಳೆ ವಿಶೇಷ ಪೂಜೆಯಲ್ಲಿ ಭಕ್ತಸಾಗರವೇ ನೆರೆದಿತ್ತು. ಹಾಗೆಯೇ ದೈವಿಕ ನಾಗನನ್ನು ಆರಾಧಿಸುವ ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಸದ್ಗುರು ನೇತೃತ್ವದಲ್ಲಿ ಅದ್ಧೂರಿಯಾಗಿ ಕೈಗೊಂಡ ಬೃಹತ್ ಕಾರ್ಯಕ್ರಮದಲ್ಲಿ ಪೂಜಾ ಚಟುವಟಿಕೆಯು ಸಂಪ್ರದಾಯಬದ್ಧವಾಗಿ ನೆರವೇರಿತು.
ಇಲ್ಲಿನ ಸನ್ನಿಧಿಯಲ್ಲಿರುವ ನಾಗಮಂಟಪವನ್ನು ವಿಶೇಷವಾಗಿ ಅಲಂಕರಿಸಿದ್ದು, ನಾಗನಿಗೆ ವಿಶೇಷ ಆರತಿ ಅರ್ಪಿಸಲಾಯಿತು. ಯೋಗೇಶ್ವರಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಇದೇ ಮೊದಲ ಬಾರಿಗೆ ಈ ಭಾಗದ ಜನ ಸಾಂಪ್ರದಾಯಿಕ ನಾಗಮಂಡಲ ನೃತ್ಯವನ್ನು ಕಣ್ತುಂಬಿಕೊಂಡರು.

ಈ ವೇಳೆ ನಟಿಯರಾದ ತಮ್ಮನ್ನಾ, ಶ್ರೀನಿಧಿ ಶೆಟ್ಟಿ, ಸಂಸದರಾದ ಉಮೇಶ್ ಜಾದವ್, ಎನ್.ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಪ್ರದೀಪ್ ಈಶ್ವರ್, ಟಿ.ಬಿ.ಜಯಚಂದ್ರ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ ಕೃಷ್ಣ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹೆಗಡೆ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕಿ ದಿವ್ಯ ಹೊಸೂರು, ಬಿಬಿಎಂಪಿ ವಿಶೇಷ ಆಯುಕ್ತ ಕೆ.ವಿ.ತಿಲೋಕಚಂದ್ರ ಡಿಜಿಪಿ ರವೀಂದ್ರನಾಥ್, ಎಡಿಜಿ ಸೀಮಂತಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ನಾಗಮಂಡಲವು ನಾಗನ ಅನುಗ್ರಹ ಪಡೆಯುವ ಸಾಂಪ್ರದಾಯಿಕ ಆಚರಣೆ, ಇದು ಆಧ್ಯಾತ್ಮಿಕ, ಸಾಂಸ್ಕೃತಿಕ ಬೆಳವಣಿಗೆಯ ಅನುಕೂಲಗಳನ್ನು ಹೊಂದಿದೆ ಎಂಬ ನಂಬಿಕೆಯಿದೆ. ಜ್ಯಾಮಿತೀಯ ವಿನ್ಯಾಸದ ಮಂಡಲದ ರೇಖಾ ಚಿತ್ರ ಬಿಡಿಸುವಿಕೆಯು, ಸ್ತೋತ್ರ ಮತ್ತು ಮಂತ್ರಗಳ ಪಠಣ ಹಾಗೂ ಅರ್ಪಣೆಯು ನಾಗಾರಾಧನೆಯಲ್ಲಿದೆ. ಇದರಿಂದ ಜೀವನದಲ್ಲಿರುವ ಅಡೆತಡೆಗಳು ನಿವಾರಣೆಗೊಂಡು ಸಾಮರಸ್ಯ, ಶಾಂತಿ, ಸಮೃದ್ಧಿ ಉಂಟಾಗುತ್ತದೆ. ಪ್ರಾಮಾಣಿಕ ಪ್ರಯತ್ನದಲ್ಲಿ ಯಶಸ್ಸು ಮೂಡಿ ಆಧ್ಯಾತ್ಮಿಕ ಪ್ರಗತಿ ಕಂಡುಬರುತ್ತದೆ ಎಂದು ಸದ್ಗುರು ತಿಳಿಸಿದರು.
ಅಲ್ಲದೆ ಮಾನವ ಹೃದಯದಲ್ಲಿ ಎಲ್ಲ ಮಿತಿಗಳನ್ನು ಮೀರಿ ಹೋಗಬೇಕೆಂಬ ಒಂದು ಅಂತರ್ಗತ ಹಾತೊರೆತವಿದೆ. ನಾಗವು ಜೀವನದ ವಿದ್ಯಮಾನವನ್ನು ಅಗಾಧ ಪರಿಮಾಣದಲ್ಲಿ ಗ್ರಹಿಸಲು ಒಂದು ದ್ವಾರವಾಗಿ ನಿರ್ಮಿಸಲಾದ ಒಂದು ಜೀವಂತ ದೈವ. ಭೌತಿಕತೆ, ಇಂದ್ರಿಯಗಳನ್ನು ಮೀರಿ ಜೀವನವನ್ನು ಆಳವಾಗಿ ತಿಳಿದುಕೊಳ್ಳಲು ಬಯಸುವವರಿಗೆ ನಾಗರ ಪಂಚಮಿಯು ಮಹತ್ವ ಪೂರ್ಣವಾದ ದಿನವಾಗಿದೆ ಎಂದು ಹೇಳಿದರು.
ಇದರ ವಿಷಯಗಳನ್ನು ಗ್ರಹಿಸುವಲ್ಲಿ ನಾಗನ ಉಪಸ್ಥಿತಿ ಇರುತ್ತದೆ. ಹಾಗೆಯೇ ಆತನ ಮಹಿಮೆಯು ಕಾಣಿಸುತ್ತದೆ. ಜೀವನವು ಎಷ್ಟು ಉತ್ಸಾಹಭರಿತವಾಗಿದೆ, ಎಷ್ಟು ಸಂತೋಷದಾಯಕವಾಗಿದೆ, ಎಷ್ಟು ಅದ್ಭುತವಾಗಿದೆ? ಎನ್ನುವುದು ಮುಖ್ಯ. ಇದಕ್ಕೆ ಪೂರಕವಾಗಿ ನಾಗನ ಅನ್ವೇಷಣೆಯಲ್ಲಿ ನಿಶ್ಚಲತೆ, ಲವಲವಿಕೆ ಮತ್ತು ಉನ್ಮತ್ತತೆ ಕಾಣಬಹುದಾಗಿದ್ದು, ಈ ಎಲ್ಲ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಈ ಪೂಜೆಯ ಮಹತ್ವ ತಿಳಿಯಿರಿ
ವಿಶೇಷ ದಿನದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಸರ್ಪದೋಷ ನಿವಾರಣೆಗಾಗಿ ಸಾಂಪ್ರದಾಯಿಕವಾದ ಆಶ್ಲೇಷ ಬಲಿ ಪೂಜಾ ಕಾರ್ಯಕ್ರಮ ನಡೆಯಿತು. ದೇಶ-ವಿದೇಶಗಳಿಂದ ಆಗಮಿಸಿದ್ದ ಭಕ್ತಾದಿಗಳು ಆಗಮಿಕ ಪಂಡಿತರ ಮಾರ್ಗದರ್ಶನದಲ್ಲಿ ಪೂಜೆ ಸಲ್ಲಿಸಿ, ದೋಷಗಳ ಪರಿಹಾರಕ್ಕೆ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡ ಜನಸಂದಣಿಯೇ ನೆರೆದಿತ್ತು. ಬೆಳಗ್ಗೆಯಿಂದಲೇ ಜನರು ಜಮಾವಣೆಗೊಂಡರು. ಈ ವೇಳೆ 112 ಆಡಿ ಎತ್ತರದ ಆದಿಯೋಗಿ ಶಿವನ ಮೂರ್ತಿಯನ್ನು ವೀಕ್ಷಿಸಿದರು. ನಾಗಪಂಚಮಿಯನ್ನು ದೊಡ್ಡ ಜಾತ್ರೆ ಮಾದರಿಯಲ್ಲಿ ಆಚರಿಸುತ್ತಿದ್ದು, ಮೂರು ದಿನಗಳ ಅವಧಿಗೆ ವಿಶೇಷ ಆಹಾರ, ಆಟಿಕೆ ಮತ್ತು ಕರಕುಶಲ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಹಲವರು ವಿವಿಧ ಭಾಗಗಳಲ್ಲಿ ಹೆಸರುವಾಸಿಯಾಗಿರುವ ಸಿಹಿ ತಿನಿಸು ಸವಿದರು. ಅಲ್ಲದೆ ಬ್ಯಾಂಡ್, ಪೋಟೋ ಸೇರಿದಂತೆ ದೇವರ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.












Click it and Unblock the Notifications