Chikkaballapur to Ayodhya by cycle: ಸೈಕಲ್ ಸವಾರಿ ಮೂಲಕ ಅಯೋಧ್ಯೆಗೆ ಹೊರಟ ರಾಮನ ಭಕ್ತ
ಚಿಕ್ಕಬಳ್ಳಾಪುರ ಮೇ 16: ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲು ಕರ್ನಾಟಕದಿಂದ ಹಲವಾರು ಭಕ್ತರು ತೆರಳುತ್ತಿದ್ದಾರೆ. ಬಸ್, ರೈಲು ಹಾಗೂ ವಿಮಾನಗಳ ಮೂಲಕ ಅಯೋಧ್ಯೆ ತಲುಪಿ ಶ್ರೀರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರದ ಯುವಕನೊಬ್ಬ ಸೈಕಲ್ ಸವಾರಿ ಮೂಲಕ ರಾಮನನ್ನು ಕಾಣಲು ನಿರ್ಧರಿಸಿದ್ದಾನೆ.
ಹೌದು.. ಅಯೋದ್ಯೆಯ ಶ್ರೀ ಬಾಲ ರಾಮನ ದರ್ಶನಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ರಾಯನಕಲ್ಲು ಗ್ರಾಮದ ಯುವಕ 22 ವರ್ಷದ ಯುವಕ ಬಾನುಪ್ರಸಾದ್‍ರೆಡ್ಡಿ ಸೈಕಲ್ ಏರಿ ಅಯೊಧ್ಯೆ ಕಡೆಗೆ ಪ್ರಯಾಣ ಬೆಳಸಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ರಾಯನಕಲ್ಲು ಗ್ರಾಮದ ನಿವಾಸಿಯಾದ ನರಸಿಂಹರೆಡ್ಡಿ, ಜಯಲಕ್ಷ್ಮಮ್ಮ ಪುತ್ರ ಬಾನುಪ್ರಸಾದ್‍ರೆಡ್ಡಿ (22) ಎಂಬ ಯುವಕ ಸೈಕಲ್ ಮೂಲಕ ಅಯೋಧ್ಯೆಯ ರಾಮನ ದರ್ಶನದ ಸಾಹಸಕ್ಕೆ ಕೈ ಹಾಕಿದ್ದಾನೆ.

ಸೈಕಲ್ ಸವಾರಿಗೂ ಮುನ್ನ ಪೂಜೆ
ಅಯೋಧ್ಯೆಗೆ ತೆರಳುವ ಮುನ್ನ ಇಂದು ಬೆಳಿಗ್ಗೆ ಮಂಚೇನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಾನುಪ್ರಸಾದ್, ಈ ಸಂದರ್ಭದಲ್ಲಿ ನೆರೆದಿದ್ದ ಹಿತೈಷಿಗಳು, ಸ್ನೇಹಿತರು, ಬಂಧುಗಳು ಶುಭ ಹಾರೈಕೆಗಳೊಂದಿಗೆ ಅಯೋಧ್ಯೆಗೆ ತಮ್ಮ ಸೈಕಲ್ ಯಾತ್ರೆಯನ್ನು ಆರಂಭಿಸಿದರು.
ಈ ವೇಳೆ ಮಾತನಾಡಿದ ಬಾನುಪ್ರಸಾದ್‍ರೆಡ್ಡಿ, ಅಯೋಧ್ಯೆಗೆ ಬೈಕ್, ರೈಲು ಸೇರಿದಂತೆ ಬೇರೆಬೇರೆ ರೀತಿಯಲ್ಲಿ ಸಾಕಷ್ಟು ಭಕ್ತರು ಪ್ರಯಾಣಿಸುತ್ತಾರೆ. ಆದರೆ ನನಗೆ ಸೈಕಲ್ ಮೂಲಕವೇ ಅಯೋಧ್ಯೆಗೆ ಹೋಗಲು ಇಷ್ಟ. ಇದನ್ನು ನಿರ್ಧರಿಸಿ ಇಂದು ಮಂಚೇನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೈಕಲ್ ಮೂಲಕ ಅಯೋಧ್ಯೆಗೆ ಪ್ರಯಾಣ ಆರಂಭಿಸಿದ್ದೇನೆ ಎಂದು ತಿಳಿಸಿದರು.
ಪೊಲೀಸ್ ಆಗುವ ಇಚ್ಚೆ ಹೊಂದಿದ ರಾಮ ಭಕ್ತ
ನಾನು ಪೊಲೀಸ್ ಉದ್ಯೋಗ ಪಡೆಯಲು ಓದುತ್ತಿರುವೆ. ಉದ್ಯೋಗ ಸಿಗುವ ಮುನ್ನವೇ ಅಯೋಧ್ಯೆ ಸೇರಿದಂತೆ ದೇಶದ ವಿವಿಧೆಡೆ ಇರುವ ಪ್ರಸಿದ್ಧ ತಾಣಗಳನ್ನು ವೀಕ್ಷಿಸಬೇಕೆಂಬುದು ನನ್ನ ಬಯಕೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಲ್ಲಿ ಪ್ರಸಿದ್ಧ ತಾಣಗಳಿವೆ, ದೇವಾಲಯಗಳು ಇವೆ ಎಂಬುದನ್ನು ಈಗಾಗಲೇ ತಿಳಿದುಕೊಂಡಿರುವೆ ಎಂದು ಹೇಳಿದರು.
ಇನ್ನು ಚಿಕ್ಕಬಳ್ಳಾಪುರದಿಂದ ಅಯೋಧ್ಯೆಗೆ ಸುಮಾರು 1800 ಕಿ.ಮೀಗೂ ಅಧಿಕ ದೂರವಿದ್ದು, ಒಂದು ತಿಂಗಳೊಳಗೆ ಅಯೋಧ್ಯೆಗೆ ತೆರಳಬೇಕೆಂದು ಪಣ ತೊಟ್ಟಿರುವೆ. ಮಂಚೇನಹಳ್ಳಿ ಮೂಲಕ ಡಿ.ಪಾಳ್ಯ, ಲೇಪಾಕ್ಷಿ ಮಾರ್ಗವಾಗಿ ತೆರಳುವುದಾಗಿ ಅಯೋಧ್ಯೆಗೆ ಪ್ರಯಾಣ ಬೆಳೆಸುವೆ ಎಂದು ಈ ವೇಳೆ ಅವರು ನುಡಿದರು.

ಯುವಕರಿಗೆ ಪ್ರೇರಣೆ ಬಾನುಪ್ರಸಾದ್
ಇದೇ ವೇಳೆ ಶಿಕ್ಷಕ ಸುರೇಶ್ ಮಾತನಾಡಿ, 22 ರ ವರ್ಷದ ಯುವಕ ಎಲ್ಲರ ಯುವಕರಿಗೆ ಪ್ರೇರಣೆಯಾಗಿದ್ದಾನೆ. ನಮ್ಮ ದೇಶದ ಸಂಸ್ಕøತಿ ಎತ್ತಿ ಹಿಡಿಯಲು, ಯುವಶಕ್ತಿಯಲ್ಲಿ ರಾಮ ಭಕ್ತಿ ವೃದ್ಧಿಯಾಗಬೇಕೆಂಬ ಕಾರಣಕ್ಕೆ ಬಾನುಪ್ರಸಾದರೆಡ್ಡಿ ಎಂಬ ಯುವಕ ಅಯೋಧ್ಯೆಗೆ ಸೈಕಲ್ ಯಾತ್ರೆ ಸಂಕಲ್ಪ ತೊಟ್ಟಿರುವುದು ಹೆಮ್ಮೆಯ ವಿಚಾರವಾಗಿದೆ.
ಈ ಯಾತ್ರೆ ಯಶಸ್ವಿಯಾಗಲಿ ಎಂದು ಶ್ರೀರಾಮ, ಹನುಮನಲ್ಲಿ ಎಲ್ಲರ ಪರವಾಗಿ ಪ್ರಾರ್ಥಿಸುವೆ ಎಂದು ಶುಭ ಹಾರೈಸಿದರು. ಪೂಜೆ ಸಂದರ್ಭದಲ್ಲಿ ಮುಖಂಡರಾದ ಸುದರ್ಶನರೆಡ್ಡಿ, ಭರತ್ ರೆಡ್ಡಿ, ನರಸಿಂಹರೆಡ್ಡಿ, ರಮೇಶ್, ಮುನಿರಾಜು ಸೇರಿದಂತೆ ಹಲವರು ಯುವಕ ಬಾನುಪ್ರಸಾದರೆಡ್ಡಿ ಅವರಿಗೆ ಶುಭ ಹಾರೈಸಿದರು.
ಹಾವೇರಿಯಿಂದ ಕನ್ಯಾಕುಮಾರಿಗೆ ಹೊರಟ ಮತ್ತೊಬ್ಬ ಯುವಕ:
ಜಿಲ್ಲೆಯ ಸರ್ವ ಅಭಿವೃದ್ಧಿಯ ಸಂಕಲ್ಪ ತೊಟ್ಟು ಹಾವೇರಿ ಜಿಲ್ಲೆಯ ವಿವೇಕಾನಂದ ಅವರು, ಹಾವೇರಿಯಿಂದ ತಮಿಳುನಾಡಿನ ಕನ್ಯಾಕುಮಾರಿಗೆ ಸೈಕಲ್ ಮೂಲಕ ಪ್ರಯಾಣ ಬೆಳೆಸಿದ್ದಾನೆ. ವಿವೇಕಾನಂದ ಅವರು ಇಂದು (ಗುರುವಾರ) ಮಂಚೇನಹಳ್ಳಿಗೆ ಆಗಮಿಸಿದ ವೇಳೆ ಸೈಕಲ್‍ನಲ್ಲಿ ಅಯೋಧ್ಯೆಗೆ ಹೊರಟಿರುವ ಯುವಕ ಬಾನುಪ್ರಸಾದ್‍ರೆಡ್ಡಿ ಅವರ ವಿಷಯ ತಿಳಿದು ಭೇಟಿಯಾಗಿದ್ದಾನೆ. ಇದೇ ವೇಳೆ ವೇಳೆ ಇಬ್ಬರು ಜೊತೆಗೂಡಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯುವಕನಿಗೆ ಶುಭಾಶಯ ಕೋರಿದ್ದಾನೆ.












Click it and Unblock the Notifications