ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ; ನ.21ರ ತನಕ ಯೆಲ್ಲೊ ಅಲರ್ಟ್
ಚಿಕ್ಕಬಳ್ಳಾಪುರ, ನವೆಂಬರ್ 17; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಸದ್ಯ ಸುರಿಯುತ್ತುರುವ ಮಳೆಯೇ ಅವಾಂತರಗಳನ್ನು ಸೃಷ್ಟಿ ಮಾಡಿದೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಮಳೆ ಮುಂದುವರೆಯಲಿದ್ದು, ನವೆಂಬರ್ 21ರ ತನಕ ಆರೆಂಜ್ ಆಲರ್ಟ್ ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಮನೆಯೊಂದು ಕುಸಿದಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದೆ.
ಹಾಸನ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ; ತತ್ತರಿಸಿದ ಕಾಫಿ ಬೆಳೆಗಾರರು
ವೀರಾಪುರ ಗ್ರಾಮದ ಶಂಕರಪ್ಪ ಮತ್ತು ಶಿವಮ್ಮಗೆ ಸೇರಿದ ಸುಮಾರು 30 ವರ್ಷಗಳ ಹಿಂದಿನ ಹಳೆಯ ಮನೆ ಸಂಪೂರ್ಣ ನೆಲಸಮವಾಗಿದೆ. ಕಳೆದ ತಿಂಗಳಿನಿಂದ ಜಡಿ ಸುರಿಯುತ್ತಲೇ ಇದ್ದು, ಇದರಿಂದ ಎಚ್ಚೆತ್ತುಕೊಂಡ ಶಿವಮ್ಮ ಪಕ್ಕದ ಮನೆಯಲ್ಲಿ ಮಲಗಲು ತೆರಳುತ್ತಿದ್ದರು. ಇದರಿಂದಾಗಿ ಜೀವ ಉಳಿದಿದೆ.
ಕರ್ನಾಟಕ; ನವೆಂಬರ್ 17ರಂದು ಜಲಾಶಯಗಳ ನೀರಿನ ಮಟ್ಟ
ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಕುಸಿದು ಬಿದ್ದಿರುವುದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಒಂದು ವೇಳೆ ಯಾರಾದರೂ ಮನೆಯಲ್ಲಿ ಇದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ಚಿಕ್ಕಬಳ್ಳಾಪುರ ಏಳ್ಗೆಗಾಗಿ ಸುಧಾಕರ್ ಕೈಗೊಂಡ ದೆಹಲಿ ಪ್ರವಾಸ ಯಶಸ್ಸು
ಸುಮಾರು ವರ್ಷಗಳ ಹಿಂದಿನ ಹಳೆಯ ಚಪ್ಪಡಿ ಕಲ್ಲಿನ ಮನೆ ಇದಾಗಿದ್ದು, ಜಡಿ ಮಳೆಗೆ ಕುಸಿದು ಬಿದ್ದಿದೆ. ಶಿವಮ್ಮ, ಶಂಕರಪ್ಪ ದಂಪತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಮನೆ ಕುಸಿದ ಪರಿಣಾಮ ಇದ್ದ ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ.
ಮಳೆರಾಯನ ಆರ್ಭಟ; ದಶಕಗಳ ಕಾಲ ಬರಗಾಲದ ಪಟ್ಟಿಗೆ ಸೇರಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೀಗ ಮಳೆರಾಯ ಅಬ್ಬರಿಸುತ್ತಿದ್ದಾನೆ. ಇದರಿಂದಾಗಿ ಜಿಲ್ಲೆಯನ್ನು ಬರಗಾಲದ ಪಟ್ಟಿಯಿಂದ ಕೈಬಿಡುವಂತಾಗಿದೆ.
ಆದರೆ ಅಧಿಕ ಮಳೆಯಿಂದಾಗಿ ರೈತರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಒಂದೆಡೆ ಅಧಿಕ ಮಳೆಯಿಂದ ಕೆರೆಕಟ್ಟೆಗಳು ಒಡೆದು ಕೆಲವು ಗ್ರಾಮಗಳಿಗೆ ಜಲದಿಗ್ಬಂಧನವಾಗಿದೆ. ಮತ್ತೊಂದೆಡೆ ರೈತರು ಬೆಳೆದ ಬೆಳೆ ನೀರುಪಾಲಾಗಿದೆ.
ಜಿಲ್ಲೆಯ ರಸ್ತೆಗಳು ಸಹ ಹದಗೆಡುತ್ತಿದ್ದು ಜಿಲ್ಲೆಯ ಅಧಿಕಾರಿಗಳಿಗೆ ನಿದ್ದೆ ಇಲ್ಲದಂತೆ ಮಾಡಿದೆ. ಇದುವರೆಗೂ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಮನೆಗಳು ಕುಸಿದು ಬಿದಿದ್ದು ಬಡ ಜನತೆ ಮನೆಯನ್ನು ಕಳೆದುಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳಿಗಾಗಿ ಕಾದು ಕುಳಿತಿದ್ದಾರೆ.
ಒಟ್ಟಾರೇ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟದಿಂದ ಕೆರೆ, ಕುಂಟೆ, ಮುಚ್ಚಿ ಹೋಗಿದ್ದ ನದಿ, ಕಾಲುವೆಗಳು ಮತ್ತೆ ಕಾಣಿಸಿಕೊಂಡು ಗತವೈಭವದೊಂದಿಗೆ ತುಂಬಿ ಹರಿಯುತ್ತಿವೆ. ಮಳೆಯಿಂದಾಗಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಗಳು ಒಟ್ಟಿಗೆ ಬಂದಂತಾಗಿದೆ.
ಕೊಚ್ಚಿ ಹೋಗುತ್ತಿದ್ದ ಯುವಕರ ರಕ್ಷಣೆ; ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬ್ರಾಹ್ಮಣಹಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆಯುತ್ತಿದ್ದು ಜನಜೀವನ ಅಸ್ತವ್ಯಸ್ಥವಾಗುತ್ತಿದೆ. ಹಲವು ಗ್ರಾಮಗಳಿಗೆ ರಸ್ತೆ ಮಾರ್ಗಗಳು ಸಂಪೂರ್ಣ ಬಂದ್ ಆಗಿವೆ. ಇನ್ನೂ ದ್ವಿಚಕ್ರ ವಾಹನದಲ್ಲಿ ಸೇತುವೆ ದಾಟುವಾಗ ವಾಹನ ಸಮೇತ ಕೊಚ್ಚಿಹೋಗುತ್ತಿದ್ದ ಯುವಕರನ್ನು ತಾಲೂಕಿನ ಬ್ರಾಹ್ಮಣಹಳ್ಳಿಯಲ್ಲಿ ಗ್ರಾಮಸ್ಥರು ತಮ್ಮ ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದಾರೆ.
ಮುಂಜಾನೆಯಿಂದಲೂ ವರುಣನ ಆರ್ಭಟ ಮುಂದುವರೆಯುತ್ತಿದೆ. ಇದರಿಂದ ತಾಲೂಕಿನ ರಗುತ್ತಾಹಳ್ಳಿ ಕಡೆಯಿಂದ ಬ್ರಾಹ್ಮಣಹಳ್ಳಿಯ ಕಡೆ ಹೋಗುವ ಮಾರ್ಗದ ಸಂಪರ್ಕ ಕಡಿತಗೊಂಡಿತ್ತು. ಗ್ರಾಮಗಳಿಗೆ ಹೋಗಲು ಬೇರೆ ಮಾರ್ಗವಿಲ್ಲದೆ ಹರಿಯುವ ನೀರಿನಲ್ಲಿ ದಡ ಸೇರಲು ಯತ್ನಿಸಿದವರು ಜಾರಿ ಬಿದ್ದಿದ್ದಾರೆ. ಇದೇ ವೇಳೆ ಯುವಕರನ್ನು ಗಮನಿಸಿದ ಗ್ರಾಮಸ್ಥರು ಜೆಸಿಬಿ ಮೂಲಕ ರಕ್ಷಣೆ ಮಾಡಿದರು.
ಮತ್ತೊಂದೆಡೆ ಗುಡಿಬಂಡೆ ಪಟ್ಟಣ ವ್ಯಾಪ್ತಿಯ ಕುಶಾವತಿ ನದಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ತಾಲೂಕಿನ ಲಕ್ಕೇನಹಳ್ಳಿ-ಹಂಪಸಂದ್ರ ಗ್ರಾಮದ ಮಾರ್ಗದಲ್ಲಿ ರಭಸದಿಂದ ನೀರು ಹರಿಯುತ್ತಿದ್ದು ರಸ್ತೆ ದಾಟಲು ಹೋಗಿ ವ್ಯಕ್ತಿಯೋರ್ವ ಬೈಕ್ ನೊಂದಿಗೆ ಕೊಚ್ಚಿಕೊಂಡು ಹೋಗಿದ್ದಾನೆ. ಇನ್ನೂ ಬೈಕ್ ಅನ್ನು ನೀರಿನಿಂದ ಹೊರತೆಗೆಯಲು ಹರಸಾಹಸಪಡಬೇಕಾಯಿತು.