ಸಾವಿನ ಕೂಪವಾಗುತ್ತಿರುವ ಶ್ರೀನಿವಾಸ ಸಾಗರ: ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಸ್ಥಳೀಯರ ಬೇಸರ
ಚಿಕ್ಕಬಳ್ಳಾಪುರ, ಏಪ್ರಿಲ್ 4: ಮಿನಿ ಜೋಗ ಜಲಪಾತವೆಂದೇ ಹೆಸರಾಗಿರುವ ಶ್ರೀನಿವಾಸ ಸಾಗರವು, ಹಚ್ಚ ಹಸಿರಿನಿಂದ ಕೂಡಿರುವ ಬೆಟ್ಟ ಸಾಲುಗಳ ಮಧ್ಯೆ ಮಳೆಗಾಲದಲ್ಲಿ ಮೈದುಂಬಿಕೊಂಡು ಬೋರ್ಗರಿಯುತ್ತದೆ. ಈ ಸೊಬಗನ್ನು ಸವಿಯಲು ಮೈಸೂರು, ಬೆಂಗಳೂರು, ಚಿಂತಾಮಣಿ, ಹಿಂದುಪುರ ಸೇರಿದಂತೆ ಅನೇಕ ಊರುಗಳಿಂದ ಸಾವಿರಾರು ಮಂದಿ ಈ ಭಾಗಕ್ಕೆ ಭೇಟಿ ನೀಡುತ್ತಾರೆ.
ಜಿಲ್ಲಾ-ಅಂತರ್‌ಜಿಲ್ಲಾ ಪ್ರವಾಸಿಗರು ಶ್ರೀನಿವಾಸ ಸಾಗರಕ್ಕೆ ಭೇಟಿ ನೀಡಿ, ಬೋರ್ಗರಿಯುತ್ತಿರುವ ನೀರಿನಲ್ಲಿ ಕುಣಿದು, ಕುಪ್ಪಳಿಸಿ, ಮನ ತಣಿಯುವಷ್ಟು ಆಟವಾಡಿ ಸಂತೋಷ ಪಡುತ್ತಾರೆ. ಆದರೆ ಇತ್ತೀಚಿಗೆ ಶ್ರೀನಿವಾಸ ಸಾಗರದಲ್ಲಿ ಸಾವಿನ ಘಟನೆಗಳೇ ಹೆಚ್ಚು ಹೆಚ್ಚು ನಡೆದು ಸಾವಿನ ಕೂಪವಾಗಿ ಮಾರ್ಪಡುತ್ತಿದೆ.

ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಶ್ರೀನಿವಾಸ ಸಾಗರವು ಮೈದುಂಬಿಕೊಂಡು ಹರಿಯುತ್ತಿತ್ತು. ಕಳೆದ ತಿಂಗಳು ಇದನ್ನು ವೀಕ್ಷಿಸಲು ಬಂದ ಮೈಸೂರು ಮೂಲದ ಒಬ್ಬ ಯುವಕ ಮತ್ತು ಗೌರಿಬಿದನೂರು ಮೂಲದ ಯುವಕನೊಬ್ಬ ಸೇರಿದಂತೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆ ಘಟನೆ ಮಾಸುವಷ್ಟರಲ್ಲಿ ಭಾನುವಾರ ಬೆಂಗಳೂರಿನಿಂದ ಬಂದಿದ್ದ ಯುವತಿ, ಯುವಕರು ನೀರಿನಲ್ಲಿ ಆಟವಾಡಲು ಹೋಗಿ ನೀರಿನಲ್ಲಿ ಮುಳುಗಿ ಮೂರು ಜನ ಸಾವನ್ನಪ್ಪಿರುವ ಘಟನೆ ಸಹ ನಡೆದಿದೆ.
ಭದ್ರತಾ ಸಿಬ್ಬಂದಿ ನೇಮಿಸಿದೆ ಜಿಲ್ಲಾಡಳಿತ ನಿರ್ಲಕ್ಷ್ಯ
ಶ್ರೀನಿವಾಸ ಸಾಗರಕ್ಕೆ ಪ್ರತಿನಿತ್ಯ ಪ್ರವಾಸಿಗರು ಬರುವುದು ಎಲ್ಲರಿಗೂ ತಿಳಿದ ವಿಷಯ, ಆದರೆ ಇಲ್ಲಿ ನೀರಿಗೆ ಇಳಿಯದಂತೆ ನೋಡಿಕೊಳ್ಳಲು ಯಾರೊಬ್ಬರನ್ನು ಜಿಲ್ಲಾಡಳಿತ ನೇಮಕ ಮಾಡದೆ ನಿರ್ಲಕ್ಷ್ಯ ತೋರಿರುವುದರಿಂದ ಇಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಘಟನೆಗಳು ಇತ್ತೀಚಿಗೆ ಸಹಜವಾಗಿ ಹೋಗಿದೆ.

ಇನ್ನು ಪ್ರವಾಸಿ ಸ್ಥಳವಾದ ಶ್ರೀನಿವಾಸ ಸಾಗರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಪರಿಣಾಮ ಸ್ಥಳೀಯ ಸುತ್ತಮುತ್ತಲಿನ ಪುಂಡರು ಹಾಗೂ ಕೆಲ ಪ್ರವಾಸಿಗರು ಕೆರೆಯ ಸುತ್ತಮುತ್ತಲಿನಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಾರೆ. ಮದ್ಯ ಸೇವಿಸಿದ ಮತ್ತಿನಲ್ಲಿ ಬಾಟಲ್‌ಗಳನ್ನು ಅಲ್ಲೇ ಒಡೆದು ಬಿಸಾಡುತ್ತಾರೆ. ಅಲ್ಲದೇ ಗಿಡ ಮರಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದು ಪರಿಸರವನ್ನು ಸಹ ನಾಶ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕಿದೆ.
ಶ್ರೀನಿವಾಸ ಸಾಗರದಲ್ಲಿ ಐತಿಹಾಸಿಕ ದೇವಾಲಯ
ಶ್ರೀನಿವಾಸ ಸಾಗರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದ್ದು, ಇದನ್ನು ಚಿಕ್ಕ ತಿರುಪತಿ ಎನ್ನುವ ಹೆಸರಿನಲ್ಲಿ ಸಹ ಕರೆಯಲಾಗುತ್ತದೆ. ಈ ದೇವಾಲಯವು ನೂರಾರು ಕಾಲಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ಕಳೆದ ವರ್ಷ ದೇವಾಲಯವು ಜೀರ್ಣೋದ್ಧಾರವಾಗಿದ್ದು, ನಂತರ ಮದುವೆ ಸೇರಿದಂತೆ ಅನೇಕ ಸಂಭ್ರಮಗಳು ಹೆಚ್ಚಾಗಿ ಇಲ್ಲಿ ಜರುಗುತ್ತವೆ. ಹಾಗಾಗಿ ಇಲ್ಲಿ ಜನಸಂದಣಿ ಇದ್ದೇ ಇರುತ್ತದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶ್ರೀನಿವಾಸ ಸಾಗರದ ಕಡೆ ಗಮನಹರಿಸಿ ಇಲ್ಲಿಗೆ ಬರುವ ಪ್ರವಾಸಿಗರ ಮೇಲೆ ಗಮನ ಹರಿಸಬೇಕಾಗಿದೆ. ಅಲ್ಲದೇ ನೀರಿನಲ್ಲಿ ಅಪಾಯ ಇರುವ ಸ್ಥಳಗಳಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ಮತ್ತು ಪರಿಸರವನ್ನು ಹಾಳು ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶ್ರೀನಿವಾಸ ಸಾಗರಕ್ಕೆ ವಾರಾಂತ್ಯದಲ್ಲಿ ಬೆಂಗಳೂರು, ಮೈಸೂರು, ಕೋಲಾರ, ಚಿಂತಾಮಣಿ ಸೇರಿದಂತೆ ಅನೇಕ ಪ್ರದೇಶಗಳಿಂದ ಪ್ರವಾಸಿಗರು ಬರುತ್ತಾರೆ, ಆದರೆ ಅವರಿಗೆ ಗೊತ್ತಿಲ್ಲ ಕೆರೆಯಲ್ಲಿ ಎಲ್ಲಿ ಎಷ್ಟು ಆಳ ಇದೆ ಎಂದು ಹಾಗಾಗಿ ಏಷ್ಟೋ ಜನ ಅಮಾಯಕರು ನೀರಿನಲ್ಲಿ ಈಜಲು ಹೋಗಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆದರಿಂದ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಯಾರಾದರೂ ಒಬ್ಬರನ್ನು ಎಚ್ಚರಿಸಲು ನೇಮಿಸಿ, ಕೆರೆಯ ಸುತ್ತಲೂ ತಡೆ ಬೇಲಿಯನ್ನು ಹಾಕಿದರೆ ಇತರ ಪ್ರಕರಣಗಳು ಮರುಕಳಿಸದಂತಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.












Click it and Unblock the Notifications