ಮಳೆಯ ಅಭಾವ: ಚಿಕ್ಕಬಳ್ಳಾಪುರದ ಈ ಹಳ್ಳಿಗಳಲ್ಲಿ ಸದ್ಯಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ!
ಚಿಕ್ಕಬಳ್ಳಾಪುರ ಜನವರಿ 8: ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿ ಬೇಸಿಗೆಗೂ ಮೊದಲೇ ನೀರಿನ ಸಂಕಷ್ಟ ಎದುರಾಗಿದೆ. ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದಕ್ಕೆ ಚಿಕ್ಕಬಳ್ಳಾಪುರದ ಹಳ್ಳಿಗಳೂ ಹೊರತಾಗಿಲ್ಲ. ಆದರೆ ಸದ್ಯ ಈ ಹಳ್ಳಿಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಹೌದು.. ಗುಡಿಬಂಡೆ ತಾಲೂಕಿನಲ್ಲಿ 123 ಗ್ರಾಮಗಳಿದ್ದು, 140ಕ್ಕೂ ಹೆಚ್ಚು ಬೋರ್ ವೇಲ್ ಗಳಲ್ಲಿ ನೀರು ಸರಬರಾಜು ಆಗುತ್ತಿದೆ. 97 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 9 ಘಟಕಗಳು ದುಸ್ಥಿತಿಯಲ್ಲಿರುವುದು ಬಿಟ್ಟರೆ ಸದ್ಯದ ಮಟ್ಟಿಗೆ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೂರಿಲ್ಲ. ಆದರೆ ಮಳೆಯ ಅಭಾವದಿಂದ ಕೆರೆ ಕುಂಟೆಗಳಲ್ಲಿ ನೀರು ಬತ್ತಿ ಹೋಗುತ್ತಿದ್ದೂ ಬೇಸಿಗೆ ವೇಳೆಗೆ ನೀರು ಖಾಲಿಯಾದರೆ ಜನ-ಜಾನುವಾರು ನೀರಿಗಾಗಿ ಪರದಾಡುವ ಸ್ಥಿತಿ ತಲೆದೂರಬಹುದು.

ಗುಡಿಬಂಡೆ ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿಗೆ ಆಗಾಗ ಸಮಸ್ಯೆಯಾಗುತ್ತಿದ್ದು ಕನಿಷ್ಠ ವಾರಕ್ಕೊಮ್ಮೆ, ಇಲ್ಲವೇ ಮೂರು ದಿನಗಳಿಗೊಮ್ಮೆ ಸಮಸ್ಯಾತ್ಮಕ ವಾರ್ಡ್ ಗಳಿಗೆ ನೀರನ್ನು ಸರಬರಾಜು ಮಾಡುವುದು ಹಾಗೂ ಅಮಾನಿ ಬೈರಸಾಗರ ಕೆರೆಯ ನೀರನ್ನು ಶುದ್ಧಿಕರಿಸಿ ಪಟ್ಟಣಕ್ಕೆ ಸರಬರಾಜು ಮಾಡುವ ಮೂಲಕ ಸಮಸ್ಯೆ ನೀವಾರಿಸುವ ಪ್ರಯತ್ನವನ್ನು ಆಧಿಕಾರಿಗಳಿಂದ ನಡೆಯುತ್ತಿದೆ.
ಹೌದು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಂತರ್ಜಲ ಮಟ್ಟ ಇದೇ ರೀತಿ ಕುಸಿತ ಉಂಟಾದರೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ವೇಳೆಗೆ ಸರಿ ಸುಮಾರು 26 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗುವ ಸೂಚನೆ ಸಿಕ್ಕಿದ್ದು, ಅಂತಹ ಗ್ರಾಮಗಳಲ್ಲಿ ಸಮಸ್ಯೆ ನಿವಾರಣೆಗೆ ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ.

ಖಾಸಗಿ ಬೋರ್ ವೆಲ್ ಮಾಲೀಕರೊಂದಿಗೆ ಒಪ್ಪಂದ?
ಬೇಸಿಗೆ ಕಾಲದಲ್ಲಿ ಸಮಸ್ಯೆ ಉಂಟಾದರೆ ಬಾಡಿಗೆ ಆಧಾರದಲ್ಲಿ ಖಾಸಗಿ ಬೋರ್ ವೇಲ್ ಗಳಿಂದ ನೀರು ಸರಬರಾಜು ಮಾಡಲು ತಾಲ್ಲೂಕಿನ ಕೊಂಡರೆಡ್ಡಿಹಳ್ಳಿ, ಪಸಪಲೋಡು, ಹಂಪಸಂದ್ರ, ಸಂಜೀವರಾಯನಹಳ್ಳಿ, ಕಡೇಹಳ್ಳಿ ಗ್ರಾಮಗಳಲ್ಲಿ ಬಾಡಿಗೆ ಆಧಾರದಲ್ಲಿ ನೀರು ಒದಗಿಸಲು ಕ್ರಮ ಜರುಗಿಸಲಾಗಿದೆ.
ಸಮಸ್ಯೆ ತಲೆದೋರಬಹುದಾದ ಗ್ರಾಮಗಳು?
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಂದ ಮುಂದಿನ ಬೇಸಿಗೆ ವೇಳೆಯಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಗುರುತಿಸಿದ್ದು ಕೂಡಲೇ ಜೆಜೆಎಂ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಸುಮಾರು 26 ಗ್ರಾಮಗಳ ಪಟ್ಟಿ ತಯಾರಿಸಿ ಅಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ:-
ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಾಣದಿದ್ದರೂ, ಕೆಲ ಭಾಗದಲ್ಲಿ ಕುಡಿಯಲು ಯೋಗ್ಯವಲ್ಲದ ನೀರೆ ಹೆಚ್ಚು. ವಿವಿಧೆಡೆ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಅಶುದ್ಧ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಇದೆ. ಪ್ಲೋರೈಡ್‌ಯುಕ್ತ ನೀರು ಸೇವಿಸಲು ಯೋಗ್ಯವಲ್ಲ.
ಸಮಸ್ಯೆಯಿಂದ ಪಟ್ಟಣವೂ ಹೊರತಾಗಿಲ್ಲ?
ಗುಡಿಬಂಡೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 11 ವಾರ್ಡ್ಗಳಿದ್ದು, ಪಟ್ಟಣದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮನೆಗಳು,10 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ, ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ 18 ಬೋರ್ ವೆಲ್ ಗಳು ಹಾಗೂ ಬಳಕೆಗೆಂದು ಪಟ್ಟಣದ ಹೊರವಲಯದಲ್ಲಿರುವ ಅಮಾನಿ ಬೈರಸಾಗರ ಕೆರೆಯ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ಅಷ್ಟಾಗಿ ನೀರಿಗೆ ಸಮಸ್ಯೆಯ ಬಿಸಿ ತಟ್ಟಿಲ್ಲ. ಉಳಿದಂತೆ ಪಟ್ಟಣದಲ್ಲಿ ಒಟ್ಟು 7 ಶುದ್ಧಕುಡಿಯುವ ನೀರಿನ ಘಟಕಗಳಿದ್ದು,6 ಘಟಕಗಳು ಪ್ರಸ್ತುತ ಶುದ್ಧ ಕುಡಿಯುವ ನೀರಿನ ದಾಹವನ್ನು ತಣಿಸುತ್ತಿವೆ.
ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆ?
ಪಟ್ಟಣದ ವ್ಯಾಪ್ತಿಯ ನಿವಾಸಿಗಳಿಗೆ ಪ್ರತಿನಿತ್ಯ 135 ಲೀಟರ್ ನೀರು ಕೊಡಬೇಕೆಂಬ ನಿಯಮವಿದ್ದು ಸದ್ಯ 100 ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿನಿತ್ಯ 1.3ಎಂ. ಎಲ್. ಡಿ ನೀರು ಅವಶ್ಯಕತೆ ಇದ್ದು ಸದ್ಯ .9 ಎಂಎಲ್ ಡಿ ನೀರು ಲಭ್ಯವಾಗುತ್ತಿದು ಶೇ. ಕೊರತೆಯಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಒಟ್ಟು 58 ಬೋರ್ ವೆಲ್ ಗಳನ್ನು ಕೊರೆಸಿದ್ದು, ಸದ್ಯ 18 ಕಾರ್ಯ ನಿರ್ವಹಿಸುತ್ತಿವೆ, ಇನ್ನು ಅಮಾನಿ ಬೈರ ಸಾಗರ ಕೆರೆಯಲ್ಲಿ ಸುಸ್ಥಿತಿಯಲ್ಲಿರುವ 7 ಬೋರ್ ವೆಲ್ ಗಳು ಮುಳುಗಿವೆ ಉಳಿದವು ವಿವಿಧ ಕಾರಣದಿಂದ ಕೆಟ್ಟು ನಿಂತಿವೆ.
ಜೆಜೆಎಂ ಕಾಮಗಾರಿ ಪ್ರಗತಿ:
ಈಗಾಗಲೇ ಅಮಾನಿ ಬೈರಸಾಗರದಿಂದ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ಯೋಜನೆಯಡಿ ತಾಲೂಕಿನ ಹಲವು ಗ್ರಾಮಗಳ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ನೀರು ಒದಗಿಸಲು ನಿರ್ಮಿಸಲಾಗುತ್ತಿರುವ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಈ ಯೋಜನೆ ವ್ಯಾಪ್ತಿಗೆ ಒಳಪಡುವ ತಾಲೂಕಿನ ಹಲವು ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.
ಕಳೆದ 2-3ವರ್ಷಗಳಿಂದ ಉತ್ತಮ ಮಳೆಯಾಗಿದ್ದರಿಂದ ಇಲ್ಲಿಯ ತನಕ ಸಮಸ್ಯೆ ತಲೆದೋರಿರಲಿಲ್ಲ, ಈ ವರ್ಷ ಮಳೆ ಕೊರತೆಯಿಂದ ಸಮಸ್ಯೆ ಸಂಭವಿಸಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಿ ಮುಂದೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಪೂರ್ವ ತಯಾರಿ ಮಾಡಿದ್ದೆವೆ, ತಾಲೂಕಿನಲ್ಲಿ ಎಲ್ಲೂ ಸಹ ಸದ್ಯದ ಮಟ್ಟಿಗೆ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಹಾಯಕ ಕಾರ್ಯಪಾಲಕ ಇಂಜಿನಿಯರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನವೀನ್ ಹೇಳಿದರು.












Click it and Unblock the Notifications