ಚಿಕ್ಕಬಳ್ಳಾಪುರ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಜನತೆ ಸುಸ್ತು: ತಪ್ಪದ ಅಲೆದಾಟ
ಚಿಕ್ಕಬಳ್ಳಾಪುರ, ಜನವರಿ 21: ಸದಾ ಜನಜಂಗುಳಿ, ಸಾಲು ನಿಂತಿರುವ ಜನ, ಅಧಿಕಾರಿಗಳ ಜೊತೆ ಮಾತಿನ ಚಕಮಕಿ, ಜನರಿಂದ ಗಿಜಿಗುಡುವ ಕಚೇರಿಯ ವಿವಿಧ ವಿಭಾಗಗಳು. ಇವೆಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಂಡು ಬರುವ ದೃಶ್ಯಗಳು. ಆದರೆ ಚಿಕ್ಕಬಳ್ಳಾಪುರ ನಗರಸಭೆಯ ವಿಚಾರಕ್ಕೆ ಬಂದರೆ ವ್ಯತಿರಿಕ್ತವಾದ ಸನ್ನಿವೇಶವನ್ನು ನಾವು ಕಾಣಬಹುದು ಅಂದರೆ ಇಲ್ಲಿನ ಸಿಬ್ಬಂದಿ ಕಾರ್ಯ ನಿರ್ವಹಿಸುವ ವಿಧಾನವೇ ಬೇರೆ ಎನ್ನುವಂತಾಗಿದೆ.
ಈ ನಗರಸಭೆ ಕಚೇರಿಯಲ್ಲಿ ಬೆಳಿಗ್ಗೆ 10:30ಯಿಂದ ಆರಂಭವಾಗಿ ಸಂಜೆ 5 ಗಂಟೆಯವರೆಗೂ ಖಾಲಿ ಖಾಲಿ ಇರುತ್ತದೆ. ಯಾವುದೇ ವಿಭಾಗದಲ್ಲಿ ಜನರಿಗೆ ಅಧಿಕಾರಿಗಳು, ಸಿಬ್ಬಂದಿ ಸಿಗುವುದಿಲ್ಲ. ಒಂದು ವೇಳೆ ಇದ್ದರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಳಜಿಯಂತೂ ಇಲ್ಲವೆ ಇಲ್ಲ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಅಧ್ಯಕ್ಷರು ಕಚೇರಿಗೆ ಯಾವ ಸಮಯದಲ್ಲಿ ಬಂದು ಹೋಗುತ್ತಾರೆ ಎನ್ನುವ ಮಾಹಿತಿಯೇ ಜನರಿಗಿಲ್ಲ.
ನಗರಸಭೆಗೆ ನಿತ್ಯ ನೂರಾರು ಮಂದಿ ವಿವಿಧ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಆದರೆ ಅಧಿಕಾರಿಗಳು ಲಭ್ಯವಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಎಲ್ಲ ಅವ್ಯವಸ್ಥೆಯಿಂದ ರೋಸಿಹೋದ ನಗರಸಭೆ ಸದಸ್ಯ ನರಸಿಂಹಮೂರ್ತಿ ಬುಧವಾರ ಮಧ್ಯಾಹ್ನ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.

ಜನನ-ಮರಣ ಪ್ರಮಾಣ ಪತ್ರ, ಇ-ಆಸ್ತಿ ದಾಖಲೆ, ಖಾತೆ ಬದಲಾವಣೆ, ಯುಜಿಡಿ, ನೀರಿನ ಸಂಪರ್ಕ, ಸ್ವಚ್ಛತೆ, ಬೀದಿದೀಪ, ಮನೆ ಲೈಸನ್ಸ್, ಅಂಗಡಿ ಲೈಸನ್ಸ್, ತೆರಿಗೆ ಪಾವತಿ ಹೀಗೆ ಅನೇಕ ಕೆಲಸಗಳಿಗಾಗಿ ಸಾರ್ವಜನಿಕರು ನಗರಸಭೆಗೆ ಆಗಮಿಸುತ್ತಾರೆ. ಆದರೆ ಅಧಿಕಾರಿಗಳು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ನಗರಸಭೆಯೇ ಸಮಸ್ಯೆಗಳ ತಾಣವಾದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಂದಾಯ ವಿಭಾಗ, ದೂರು ವಿಭಾಗ, ಸಕಾಲ ವಿಭಾಗ, ಇಂಜನಿಯರಿಂಗ್, ಟಪಾಲು, ಕಂಪ್ಯೂಟರ್, ಯುಜಿಡಿ ವಿಭಾಗ, ಕುಡಿಯುವ ನೀರು, ಆರೋಗ್ಯ ನಿರೀಕ್ಷಕರ ವಿಭಾಗ ಹೀಗೆ ಇನ್ನು ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದು ಕೆಲಸ ಮಾಡಬೇಕು. ಆದರೆ ಯಾವ ಸಮಯದಲ್ಲಿ ಕಚೇರಿಗೆ ಬರುತ್ತಾರೆ, ಹೋಗುತ್ತಾರೆ ಎನ್ನುವ ಮಾಹಿತಿಯಿಲ್ಲ.

ಇನ್ನು ದೂರವಾಣಿ ಕರೆ ಮಾಡಿದರೆ ಫೀಲ್ಡ್‌ನಲ್ಲಿ ಇರುವುದಾಗಿ, ತೆರಿಗೆ ವಸೂಲಿಗೆ ಬಂದಿರುವುದಾಗಿ ಉತ್ತರಿಸುತ್ತಾರೆ. ಆದರೆ ಇಂತಹ ಸಮಯಕ್ಕೆ ಕಚೇರಿಗೆ ಬರುತ್ತೇವೆ ಎನ್ನುವ ಮಾಹಿತಿ ಹೇಳುವ ಸೌಜನ್ಯ ಕೂಡ ಅಧಿಕಾರಿಗಳಲ್ಲಿ ಇಲ್ಲವಾಗಿದೆ. ಮಧ್ಯಾಹ್ನದ ನಂತರ ಕಚೇರಿಗೆ ಬಂದರೆ ಅಧಿಕಾರಿ, ಸಿಬ್ಬಂದಿಯ ಕುರ್ಚಿಗಳು ಖಾಲಿಖಾಲಿ ಇರುತ್ತವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ನಗರಸಭೆ ಸದಸ್ಯರೆ ಕಚೇರಿಗೆ ಬಂದು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಸಬೂಬು ಹೇಳುತ್ತಾರೆ. ಇವರು ಸಾರ್ವಜನಿಕರ ಕೆಲಸ ಎಷ್ಟರ ಮಟ್ಟಿಗೆ ಮಾಡುತ್ತಾರೆ. ಪೌರಾಯುಕ್ತರು ಕ್ರಮಕೈಗೊಂಡು ಕಾರ್ಯವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳಿಗೆ, ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರಸಭೆಯ ಪೌರಾಯುಕ್ತ ಉಮಾಶಂಕರ್, "ಕಚೇರಿಯ ಕೆಲ ಅಧಿಕಾರಿಗಳು ಚುನಾವಣೆಯ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಇಂಜನಿಯರ್‌ಗಳು ಕಾಮಗಾರಿ ವೀಕ್ಷಣೆಗೆ ಹೋಗಿದ್ದರು. ಕಚೇರಿಯ ವ್ಯವಸ್ಥಾಪಕರು, ಆರೋಗ್ಯ ನಿರೀಕ್ಷಕರು ಕಚೇರಿಯಲ್ಲೇ ಇದ್ದರು. ಸಮಯಕ್ಕೆ ಸರಿಯಾಗಿ ಕೆಲಸ ಆಗದಿದ್ದಾಗ ತಮ್ಮ ಗಮನಕ್ಕೆ ತಂದರೆ ಕ್ರಮಕೈಗೊಳ್ಳಲಾಗುವುದು" ಎಂದು ತಿಳಿಸಿದರು.












Click it and Unblock the Notifications