ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ
ಬೆಂಗಳೂರು ನವೆಂಬರ್ 21: ಚಿಕ್ಕಬಳ್ಳಾಪುರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿಯವರ ಫ್ಲಾಟ್ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾಗಿರುವ ಕೃಷ್ಣವೇಣಿ ರವರಿಗೆ ಸೇರಿದ ಮನೆಯ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಮನೆಯಲ್ಲಿ ಶೋಧಕಾರ್ಯ ಮುಂದುವರಿಸಿದ್ದು ಮನೆಯಲ್ಲಿರುವ ದಾಖಲೆ ಪತ್ರಗಳು, ಹಣ, ಚಿನ್ನಭರಣ ಲೆಕ್ಕ ಹಾಕುತ್ತಿರುವ ಬಗ್ಗೆ ಮಾಹಿತಿ ಬಂದಿದೆ.

ಅಲ್ಲದೆ ಮೈನಿಂಗ್ ಅಧಿಕಾರಿ ಎಂ. ಸಿ.ಕೃಷ್ಣವೇಣಿ ರವರಿಗೆ ಸೇರಿದ ಯಲಹಂಕ ಬಳಿ ಇರುವ ಫ್ಲಾಟ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮಂಗಳೂರು, ಬೆಂಗಳೂರು ಹಾಗೂ ಮೈಸೂರು ನಲ್ಲಿ ಏಕ ಕಾಲದಲ್ಲಿ ದಾಳಿ ಮಾಡಿರುವ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಅಸ್ತಿ ಪಾಸ್ತಿ ಪತ್ತೆಯಾಗಿರುವ ಬಗ್ಗೆ ಮಾಹಿತಿಯೂ ಇದೆ.
ರಾಜ್ಯದ 25 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ
ಇದಲ್ಲದೇ ರಾಜ್ಯದ ಸುಮಾರು 25 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಮನೆ ಬಾಗಿಲು ತಟ್ಟಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಠ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಮಂಗಳೂರು ಸೇರಿದಂತೆ ಹಲವು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರಮುಖ ನಾಲ್ವರು ಅಧಿಕಾರಿಗಳ ಕಚೇರಿ ಹಾಗೂ ನಿವಾಸದಲ್ಲಿ ಶೋಧ ನಡೆಸುತ್ತಿದ್ದಾರೆ.
ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದ ಒಟ್ಟು 25 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಎಸ್‌ಪಿ ಮೋಹನ್ ಮನೆ ಮೇಲೆಯೂ ರೇಡ್ ನಡೆದಿದೆ.
ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್, ಸಂಬಂಧಿಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಹೇಶ್ ಮನೆ, ಸಂಬಂಧಿಕರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಲೋಕಯುಕ್ತ ಎಸ್‌ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ. ಮಂಗಳೂರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಚರಣೆ ನಡೆಸಿದೆ.
ಅಲ್ಲದೆ ಮಂಡ್ಯದಲ್ಲಿ ಕೋಲಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.












Click it and Unblock the Notifications