ಕೋಚಿಮುಲ್‌ ವಿಭಜನೆ ಆದೇಶ ವಾಪಸ್‌ ವಿರುದ್ಧ ಕಾನೂನು ಹೋರಾಟ: ಹಾಲಿ ಶಾಸಕರಿಗೆ ಸುಧಾಕರ್ ಹಾಕಿದ ಸವಾಲೇನು?

ಚಿಕ್ಕಬಳ್ಳಾಪುರ ಜುಲೈ 3: ಸೇಡಿನ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರವು ಕೋಚಿಮುಲ್ ವಿಭಜನೆಯ ಆದೇಶ ಹಿಂಪಡೆದು ರೈತರಿಗೆ ಅನ್ಯಾಯ ಮಾಡಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸಲಾಗುವುದು. ಜನರಿಗಾಗಿ 20 ಸಾವಿರ ನಿವೇಶನಕ್ಕೆ ಭೂಮಿ ಮಂಜೂರು ಮಾಡಿಸಿದ್ದೇನೆ. ಈಗಿನ ಶಾಸಕರು ಈ ಕೆಲಸ ಮಾಡಿಲ್ಲ. ಬೇಕಿದ್ದರೆ ಭೋಗನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಎಂದು ಸವಾಲು ಹಾಕಿದರು.

ಜಿಲ್ಲೆಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೆಂಗಳೂರು ಹಾಲು ಒಕ್ಕೂಟದಿಂದ ಬೇರ್ಪಟ್ಟಿತ್ತು. ತದನಂತವೇ ಉತ್ಪಾದನೆ 10 ಲಕ್ಷ ಲೀಟರ್‌ಗೆ ಏರಿತು. ಇದು ಹೆಮ್ಮೆಯ ವಿಚಾರವೇ ಹೊರತು ರಾಜಕೀಯ ವಿಚಾರವಲ್ಲ ಎಂದರು.

Legal Fight Against Govt For Withdrawing Kochimul Partition Order: Former Minister Dr K Sudhakar.

ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಹಾವೇರಿ ಹಾಲು ಒಕ್ಕೂಟವನ್ನು ಪ್ರತ್ಯೇಕವಾಗಿ ರಚಿಸಿದೆ. ಅದರ ಜೊತೆಗೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಒಕ್ಕೂಟದಲ್ಲಿ ನಾಲ್ಕೂವರೆ ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ.

ಕೋಚಿಮುಲ್‌ ವಿಭಜನೆ ವಿರೋಧಿಸಿ ಕೆಲ ನಿರ್ದೇಶಕರು ಕೋರ್ಟ್‌ ಮೊರೆ ಹೋಗಿದ್ದರು. ಈ ಪ್ರಕರಣ ನಡೆಯುತ್ತಿದ್ದರೂ ಕಾಂಗ್ರೆಸ್‌ ಸರ್ಕಾರ ದುರುದ್ದೇಶದಿಂದ, ಸೇಡಿನ ರಾಜಕಾರಣಕ್ಕಾಗಿ ವೈಯಕ್ತಿಕವಾಗಿ ತೆಗೆದುಕೊಂಡು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆದೇಶವನ್ನೇ ವಾಪಸ್‌ ಪಡೆದಿದೆ.

ಸೇಡಿನ ರಾಜಕಾರಣ ವಿರುದ್ಧ ಕಾನೂನು ಹೋರಾಟ

ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ. ಆಗಲೇ ಚಿಕ್ಕಬಳ್ಳಾಪುರದ ರೈತರಿಗೆ ಮೊದಲ ಕೊಡಲಿ ಪೆಟ್ಟು ಕೊಟ್ಟಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಅವರು ಗುಡುಗಿದರು.

Legal Fight Against Govt For Withdrawing Kochimul Partition Order: Former Minister Dr K Sudhakar.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದಾದರೆ, ಇದು ಸೇಡಿನ ರಾಜಕಾರಣವಲ್ಲವೇ ಎಂದು ಅವರೇ ತಿಳಿಸಬೇಕು. ಇಲ್ಲಿ ಹಾಲು ಒಕ್ಕೂಟ ಉತ್ತಮ ರೀತಿಯಲ್ಲಿ ಕಾರ್ಯಾ ನಿರ್ವಹಿಸುತ್ತಿತ್ತ. ಇದು ಜಿಲ್ಲೆಯ ರೈತರಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಸರ್ಕಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮರುಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಚಾಮರಾಜನಗರ ಹೊಸ ಜಿಲ್ಲೆ ಎಂದು ಘೋಷನೆಯಾದಾಗ ಅಲ್ಲಿ ಹಾಲು ಒಕ್ಕೂಟವನ್ನು ಬೇರ್ಪಡಿಸಿದವರೇ ಸಿದ್ದರಾಮಯ್ಯನವರು. ಅವರ ಜಿಲ್ಲೆಯಲ್ಲಿ ನ್ಯಾಯ ನೀಡುವ ಅವರು ಇಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ದಾಳಿದ್ದಾರೆ. ಇಲ್ಲಿ ಗೆದ್ದು ಅತಿಯಾದ ಸಂತೋಷ ಪಡುತ್ತಿರುವವರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಶಾಸಕ ಪ್ರದೀಪ್ ವಿರುದ್ಧ ಹರಿಹಾಯ್ದರು.

ಸುಳ್ಳಿನ ಯೋಜನೆಯಲ್ಲ, ಕಣ್ಣಿಗೆ ಕಾಣುವ ಯೋಜನೆ

ಜಿಲ್ಲೆಯ ಹೊಸ ಶಾಸಕ ಪ್ರದೀಪ್ ಈಶ್ವರ್ ವಸತಿ ಯೋಜನೆ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದ್ದಾರೆ. ಗೆದ್ದಾದ ಮೇಲಾದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಲಕ್ಷ್ಯ ನೀಡುತ್ತಾರೆ ಎಂದುಕೊಂಡರೆ ಸುಳ್ಳೇ ಮನೆ ದೇವರು ಎಂಬಂತೆ ಆಡುತ್ತಿದ್ದಾರೆ. ಜನರ ಮನೆ ಕಟ್ಟುವ ಆಸೆಗೆ ತಣ್ಣೀರೆರೆಚಿದ್ದಾರೆ. ನಾನೆಂದೂ ಸುಳ್ಳಿನ ಯೋಜನೆ ತಂದಿಲ್ಲ, ಆದರೆ ಕಣ್ಣಿಗೆ ಕಾಣುವ ಯೋಜನೆಗಳನ್ನು ತಂದಿದ್ದೇನೆ. ಇಡೀ ರಾಜ್ಯದಲ್ಲಿ ಒಂದೇ ಕಡೆ 20 ಸಾವಿರ ನಿವೇಶನ ಹಂಚುವ ಕೆಲಸವನ್ನು ಬೇರೆ ಯಾವ ಶಾಸಕ ಮಾಡಿದ್ದಾರೆ ಎಂದು ತಿಳಿಸಬೇಕು ಎಂದು ಸವಾಲೆಸೆದರು.

ನಿವೇಶನಕ್ಕಾಗಿ ಸಚಿವ ಸಂಪುಟದಲ್ಲೇ ಒಟ್ಟು 555 ಎಕರೆ ಜಮೀನು ಮಂಜೂರು ಆಗಿದೆ. ನಾನೇ ಖುದ್ದಾಗಿ ಗ್ರಾಮ ಸಭೆ ಮಾಡಿ ಫಲಾನುಭವಿ ಆಯ್ಕೆ ನಡೆದಿದೆ. ಹಕ್ಕು ಪತ್ರ ಹಾಗೂ ಮಂಜೂರಾತಿ ಪತ್ರ ಎಂಬುದರ ಬಗ್ಗೆಯೇ ಈಗಿನ ಶಾಸಕರಿಗೆ ಪ್ರಾಥಮಿಕ ಮಾಹಿತಿ ಇಲ್ಲ. ಸಿನಿಮಾ ಡೈಲಾಗ್‌ ಹೇಳಿ ಬಿಟ್ಟರೆ ರಾಜಕೀಯ ಮಾಡಬಹುದು ಎಂದುಕೊಂಡಿದ್ದಾರೆ ಎಂದು ಕುಟುಕಿದರು.

ದೇವರ ಮೇಲೆ ಪ್ರಮಾಣ ಮಾಡಲು ಸಿದ್ಧ: ಸುಧಾಕರ್

ನಾನು ನಿವೇಶನ ನೀಡಿದ್ದು ಸುಳ್ಳಾಗಿದ್ದಲ್ಲಿ ಭೋಗನಂದೀಶ್ವರ ದೇವಸ್ಥಾನದಲ್ಲಿ ದೀಪ ಹಚ್ಚಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಇಲ್ಲ ಎಂದು ಈಗಿನ ಶಾಸಕರು ಪ್ರಮಾಣ ಮಾಡಲಿ.ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ದುಸ್ಥಿತಿಗೆ ತಲುಪಿಲ್ಲ ಎಂದರು.

ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು, ನಂದಿ ಬೆಟ್ಟಕ್ಕೆ ರೋಪ್‌ವೇ ಮಾಡಲು, ನಂದಿ ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣ ಮಾಡಲು ಬಜೆಟ್‌ನಲ್ಲಿ ಅನುದಾನ ನೀಡಬೇಕಿದೆ. ಅದನ್ನು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕು ಎಂದು ಆಗ್ರಹಿಸಿದರು.

CSR ಅಡಿ ಕೆಲವು ಶಾಲಾ ಕಾಲೇಜುಗಳ ಅಭಿವೃದ್ಧಿ ಮಾಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ರೈತರಿಗಾಗಿ ಹೈಟೆಕ್ ಹೂ ಮಾರುಕಟ್ಟೆಗೆ 100 ಕೋಟಿ ರೂ. ಘೋಷಿಸಲಾಗಿದೆ. ಇದಕ್ಕೆ ಹಣ ಒದಗಿಸಬೇಕು. ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ ಸಹ ಅಗತ್ಯತೆ ಇದೆ. ಇದೆಲ್ಲದರ ಬಗ್ಗೆ ಸರ್ಕಾರದ ಮಗನ ಸೆಳೆದು ಬಜೆಟ್‌ನಲ್ಲಿ ಅನುದಾನ ಕೊಡಿಸಬೇಕು. 5 ವರ್ಷ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದ್ದು, ಅದನ್ನು ಜನರ ಅಭ್ಯುದಯಕ್ಕೆ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.

ಕಾಂಗ್ರೆಸ್ ವಿಷಯಾಂತರ: ನಾನೂ ಸೋತಿದ್ದೇನೆ ಸತ್ತಿಲ್ಲ

ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜು ಯೋಜನೆಯನ್ನು ಚಿಕ್ಕಬಳ್ಳಾಪುರಕ್ಕೆ ತರಲಾಗಿದೆ. ಕಾಂಗ್ರೆಸ್‌ ಸರ್ಕಾರ ಎಲ್ಲಾ ತನಿಖೆಗಳನ್ನು ಮಾಡಲಿ. ಗ್ಯಾರಂಟಿಗಳ ಬಗ್ಗೆ ಮಾತನಾಡುವುದು ಬಿಟ್ಟು ತನಿಖೆ ಬಗ್ಗೆ ಮಾತಾಡಿ ವಿಷಯವನ್ನು ಬೇರೆಡೆ ಸೆಳೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಮೂರು ಜಿಲ್ಲೆಗಳಲ್ಲಿ 2018 ರ ಚುನಾವಣೆ ಹಾಗೂ 2023 ರ ಚುನಾವಣೆಯನ್ನು ಗಮನಿಸಿದರೆ ಬಿಜೆಪಿಗೆ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಈಗ ಸ್ವಲ್ಪ ಹಿನ್ನಡೆಯಾಗಿರಬಹುದು. ಆದರೆ ಮುಂದಿನ ಚುನಾವಣೆಯಲ್ಲಿ 8 ರಿಂದ 10 ಸ್ಥಾನ ಬಿಜೆಪಿ ಪಡೆಯಲು ಶ್ರಮಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಸೋತಿರಬಹುದು, ಆದರೆ ಸತ್ತಿಲ್ಲ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+