ಮುಂದಿನ 20 ವರ್ಷಗಳಲ್ಲಿ ವಿಶ್ವಕ್ಕೆ ಮಾದರಿಯಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನಿರ್ಮಾಣ-ಅಶ್ವತ್ಥ್ ನಾರಾಯಣ್
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ್ ವಿಶ್ವಕ್ಕೆ ಇದೊಂದು ಮಾದರಿ ವಿಶ್ವವಿದ್ಯಾಲಯ ಆಗಲಿದೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್ 21: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಅಮರಾವತಿ ಗ್ರಾಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ್ ವಿಶ್ವಕ್ಕೆ ಇದೊಂದು ಮಾದರಿ ವಿಶ್ವವಿದ್ಯಾಲಯ ಆಗಲಿದೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಇಡೀ ವಿಶ್ವಕ್ಕೆ ಪ್ರಯೋಜನವಾಗುವಂತಹ, ಗುರುತಿಸುವ ಪ್ರತಿಭೆಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಹೊರಹೊಮ್ಮಲಿವೆ. ವ್ಯವಸಾಯ ಕ್ಷೇತ್ರದಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳನ್ನು ಅನ್ವಯಿಸಿಕೊಂಡು ಹೆಚ್ಚಿನ ಅನುಕೂಲಗಳನ್ನು ಪಡೆಯಲು ಮೂಲ ಆಧಾರವೇ ಶಿಕ್ಷಣ ಎಂದರು.

ಸ್ವಾವಲಂಬನೆ, ಸ್ವಯತ್ತತೆ ಹೊಂದಲು ಹಾಗೂ ಸಮಾಜದಲ್ಲಿನ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಅಂತಹ ಶಿಕ್ಷಣಕ್ಕೆ ಒತ್ತು ನೀಡಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಜಿಲ್ಲೆಗಳ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಅಮರಾವತಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡಗಳನ್ನು ಉತ್ಕೃಷ್ಟ ದರ್ಜೆಯಲ್ಲಿ ಇಲ್ಲಿನ ನೈಸರ್ಗಿಕತೆಗೆ ತೊಂದರೆಯಾಗದ ರೀತಿಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಲಿಕೆಗೆ ಪೂರಕವಾಗಿ 172 ಎಕರೆ ವ್ಯಾಪ್ತಿಯಲ್ಲಿ ಸುಮಾರು 88 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವ ದರ್ಜೆಯ ವಿಶ್ವವಿದ್ಯಾಲಯವಾಗಿ ಇಲ್ಲಿ ತಲೆಯತ್ತಲಿದೆ ಎಂದರು.
ಶಿಕ್ಷಣವನ್ನು ನೆಪ ಮಾತ್ರಕ್ಕೆ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಹತೆ ಹೊಂದಬಾರದು, ನಿಜವಾದ ಕಲಿಕೆಗೆ ವಿದ್ಯಾರ್ಥಿಗಳು ತೊಡಗಬೇಕು.ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಒತ್ತು ನೀಡಿ ಶಿಕ್ಷಣವನ್ನು ಮತ್ತಷ್ಟು ಗುಣಮಟ್ಟದಲ್ಲಿ ನೀಡಬೇಕು ಎಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಅಂತಹ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲಿಗೆ ಜಾರಿಗೆ ತಂದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಒಂದು ಐತಿಹಾಸಿಕ ಮೈಲುಗಲ್ಲು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, 'ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯ ಒಂದು ಐತಿಹಾಸಿಕ ಮೈಲುಗಲ್ಲಾಗಿದೆ. 21ನೇ ಶತಮಾನ ಜ್ಞಾನದ ಶತಮಾನವಾಗಿದೆ. ಇದಕ್ಕೆ ಇಂಬು ನೀಡುವಂತೆ ಅಮರಾವತಿಯಲ್ಲಿ ಜ್ಞಾನ ನಗರಿಯನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ, ಅಮರಾವತಿ ಇಡೀ ವಿಶ್ವಕ್ಕೆ ಮಾದರಿಯಾಗಬೇಕು' ಎಂದು ತಿಳಿಸಿದರು.
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಫಲವನ್ನು ನೀಡೇ ನೀಡುತ್ತದೆ ಎಂದು ಖ್ಯಾತ ಸಾಹಿತಿ ದೇವನೂರು ಅವರ ಸಾಹಿತ್ಯದ ಸಾಲುಗಳನ್ನು ಉಲ್ಲೇಖಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಿತ್ತನೆ, ವಿಸ್ತರಣೆ ಕಾರ್ಯಕ್ಕೆ ಮುಂದಾಗಿ ಬೆಂಗಳೂರು ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಕಾರಣೀಭೂತರಾಗಿರುವ ಉನ್ನತ ಶಿಕ್ಷಣ ಸಚಿವರನ್ನು ಅಭಿನಂದಿಸಿದರು.
20 ವರ್ಷಗಳಲ್ಲಿ ಜಾಗತಿಕ ಮಟ್ಟಕ್ಕೆ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನವಳ್ಳಿ ಮಾತನಾಡಿ '172 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಈ ವಿಶ್ವವಿದ್ಯಾಲಯ ಮುಂದಿನ ಎರಡು ವರ್ಷಗಳಲ್ಲಿ ತನ್ನೆಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಮರಾವತಿಯ ನೂತನ ಕಟ್ಟಡದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಮುಂದಿನ 20 ವರ್ಷಗಳಲ್ಲಿ ಜಾಗತಿಕ ಮಟ್ಟಕ್ಕೆ ವಿಶ್ವವಿದ್ಯಾಲಯ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಯೋಜಿಸಲಾಗಿದೆ. ಈ ಭಾಗದಲ್ಲಿ ಜಿಂಕೆಗಳು, ನವಿಲುಗಳು, ಗುಬ್ಬಚ್ಚಿಗಳು ಇನ್ನಿತರ ಜೈವಿಕ ಸಂಪತ್ತು ಹೇರಳವಾಗಿದ್ದು ಈ ನೈಸರ್ಗಿಕತೆಗೆ ಪೂರಕವಾಗಿ ವಿವಿಯನ್ನು ನಿರ್ಮಾಣ ಮಾಡಲಾಗುತ್ತದೆ. ಉತ್ತರೋತ್ತರವಾಗಿ ವಿಶ್ವವಿದ್ಯಾಲಯ ಬೆಳೆಯುತ್ತದೆ' ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ವಿಶ್ವವಿದ್ಯಾಲಯದ ಕುರಿತು ಕಿರುಚಿತ್ರವನ್ನು ಪ್ರಸಾರ ಮಾಡಲಾಯಿತು. 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಮತದಾನದ ಬಗ್ಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ. ಮುನಿಯಪ್ಪ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲ ಸಚಿವ ಡಾ. ವೆಂಕಟೇಶ ಮೂರ್ತಿ, ಮೌಲ್ಯಮಾಪನ ಕುಲ ಸಚಿವ ಪ್ರೊ. ಡೋಮಿನಿಕ್, ಸಿಂಡಿಕೇಟ್ ಸದಸ್ಯರುಗಳು, ಕುಂಬಿಗಾನ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಧ್ಯಾ ಶ್ರೀನಿವಾಸ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.












Click it and Unblock the Notifications