ಈ ತಾಲೂಕಿನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಟದ ಮೈದಾನವೇ ಇಲ್ಲ: ದೈಹಿಕ ಶಿಕ್ಷಕರಂತೂ ಮೊದ್ಲೇ ಇಲ್ಲ!
ಚಿಕ್ಕಬಳ್ಳಾಪುರ ಫೆಬ್ರವರಿ 7: 'ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ' ಎನ್ನುವ ಮಾತು ದೈಹಿಕ ಆರೋಗ್ಯದ ಮಹತ್ವವನ್ನು ಒತ್ತಿ ಹೇಳುತ್ತದೆ. ದುರದೃಷ್ಟದ ಸಂಗತಿ ಎಂದರೆ ಗುಡಿಬಂಡೆ ತಾಲೂಕಿನ ಬಹುತೇಕ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸುಸಜ್ಜಿತ ಆಟದ ಮೈದಾನವೇ ಇಲ್ಲದೆ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಿಂದುಳಿಯುವಂತಾಗಿದೆ.
ಹೌದು ವಿದ್ಯಾರ್ಥಿಗಳು ಪಾಠದ ಜತೆಗೆ ಆಟಕ್ಕೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಆಟದ ಮೈದಾನದ ವಿವರ ಪ್ರಾಮುಖ್ಯತೆ ನೀಡಬೇಕೆನ್ನುವ ಉದ್ದೇಶದಿಂದ ಸರಕಾರ ಸಾಕಷ್ಟು ಖರ್ಚು ಮಾಡಿ ಕ್ರೀಡಾ ಸಾಮಾಗ್ರಿಗಳನ್ನು ಸರಕಾರಿ ಶಾಲೆಗಳಿಗೆ ಪೂರೈಕೆ ಮಾಡಿದರೂ ಸೌಕರ್ಯ ಕೊರತೆ ಅವುಗಳನ್ನು ಬಳಕೆ ಮಾಡಿಕೊಂಡು ಆಟವಾಡಲು ಮೈದಾನವೇ ಇಲ್ಲದಿರುವುದು ಅತ್ಯಂತ ದುರದೃಷ್ಟಕರ ಸಂಗತಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಹಾಗೂ ವಸತಿ ಶಾಲೆಗಳು ಸೇರಿ 106 ಶಾಲೆಗಳಿದ್ದು, ಒಟ್ಟು 5 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶೇ.80ಕ್ಕೂ ಹೆಚ್ಚು ಶಾಲೆಗಳಿಗೆ ಆಟದ ಮೈದಾನ ಇಲ್ಲದ ಪರಿಣಾಮ ಮಕ್ಕಳ ಶಿಕ್ಷಣ ನಾಲ್ಕು ಗೋಡೆಗಳ ಮಧ್ಯದ ಕೋಣೆಗೆ ಸೀಮಿತ ಎಂಬಂತಾಗಿದೆ.
ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಆಟದ ಮೈದಾನ ಅಪರಿಚಿತವಾಗಿದೆ, ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅನುಪಸಿನಲ್ಲಿರುವ ಶಾಲಾ ಮಕ್ಕಳಿಗೆ ಮಾತ್ರ ಮೈದಾನವಿದೆ.
ಶೈಕ್ಷಣಿಕವಾಗಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿರುವ ಹಿರಿಮೆಯನ್ನು ಹೊಂದಿರುವ ಗುಡಿಬಂಡೆಯಲ್ಲಿ ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ಸಾಧನೆಗೆ ಪೂರಕವಾಗಿ ಬೇಕಾದ ದೈಹಿಕ ಶಿಕ್ಷಕರ ಕೊರತೆಯೂ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧ್ಯವಾಗುತ್ತಿಲ್ಲ.
ಇಕ್ಕಟ್ಟಾದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಭ್ಯಾಸ ಅನಿವಾರ್ಯವಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮಕ್ಕಳು ಬೆಳಗ್ಗೆ ಪ್ರಾರ್ಥನೆಗೂ ಮೈದಾನದಲ್ಲಿ ನಿಲ್ಲುವುದಕ್ಕೂ ಜಾಗದ ಸಮಸ್ಯೆ ಇರುವುದನ್ನು ಕಾಣುತ್ತೇವೆ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ತೀರಾ ಹಿನ್ನಡೆಯಾಗುತ್ತಿದ್ದು ಪ್ರತಿ ವರ್ಷ ನಡೆಯುವ ಶಾಲಾ ಕ್ರೀಡಾಕೂಟಗಳಿಗೆ ಮಕ್ಕಳಿಗೆ ಹೆಚ್ಚಿನ ಅಭ್ಯಾಸಕ್ಕೆ ಕೊರತೆ ಉಂಟಾಗಿದೆ. ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ.
ಮಕ್ಕಳ ದೈಹಿಕ ಶಿಕ್ಷಣಕ್ಕೆ ಪೂರಕವಾದ ಯಾವುದೇ ಸೌಲಭ್ಯಗಳು ಇಲ್ಲವಾದ್ದರಿಂದ ಗುರಿ ಸಾಧನೆಯಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆಟದ ಮೈದಾನ ಹಾಗೂ ದೈಹಿಕ ಶಿಕ್ಷಕರು ಇಲ್ಲದೆ ಮಕ್ಕಳು ಕ್ರೀಡೆಯಲ್ಲಿ ಯಶಸ್ಸು ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
ದೈಹಿಕ ಶಿಕ್ಷಕರ ಕೊರತೆ, ಮೈದಾನದ ಸಮಸ್ಯೆ, ನಡುವೆಯೂ ಕೆಲ ಶಾಲೆಗಳ ಸಹ ಶಿಕ್ಷಕರೇ ಗ್ರಾಮದ ಹಳೇ ವಿದ್ಯಾರ್ಥಿಗಳ ಸಹಕಾರ ಪಡೆದು ಊರಿನ ಸಮೀಪವಿರುವ ಬರಡು ಭೂಮಿಯಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುತ್ತಿದ್ದಾರೆ.
ಎಷ್ಟು ಹುದ್ದೆಗಳು ಖಾಲಿ?
ತಾಲೂಕಿನಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ 94 ಶಾಲೆಗಳಿದ್ದು ಅವುಗಳಲ್ಲಿ ಕೇವಲ 02 ಶಾಲೆಗಳಿಗಳಲ್ಲಿ ಮಾತ್ರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಇನ್ನುಳಿದಂತೆ ಮಿಕ್ಕ ಹುದ್ದೆಗಳು ಖಾಲಿ ಇವೆ. ಇನ್ನು ಪ್ರೌಢ ವಿಭಾಗದಲ್ಲಿ ಶಾಲೆಗಳಿದ್ದು 15 ಹುದ್ದೆಗಳ ಮಂಜೂರಾತಿ ಇದೆ. ಆದರೆ ಇದರಲ್ಲಿ 08 ದೈಹಿಕ ಶಿಕ್ಷಕರು ಮಾತ್ರ ಸೇವೆ ಸಲ್ಲಿಸುತ್ತಿದ್ದು, ಉಳಿದ 07 ಹುದ್ದೆಗಳು ನೇಮಕ ಆಗಬೇಕಿದೆ.
ಅತಿಥಿ ದೈಹಿಕ ಶಿಕ್ಷಕರ ನೇಮಕವಾಗಲಿ -
ತಾಲೂಕಿನಲ್ಲಿರುವ ಶಾಲೆಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ದೈಹಿಕ ಶಿಕ್ಷಕ ಹುದ್ದೆಗಳ ಮಂಜೂರಾತಿ ಆಗಬೇಕಿದೆ ಮತ್ತು ಇತರ ವಿಷಯ ಶಿಕ್ಷಕರ ಹುದ್ದೆಗಳಂತೆ ದೈಹಿಕ ಶಿಕ್ಷಣಕ್ಕೂ ತಾತ್ಕಾಲಿಕವಾಗಿ ಸರಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕೆಂಬ ಒತ್ತಾಯಗಳು ಪೋಷಕರಿಂದ ಕೇಳಿಬಂದಿದೆ.
'ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯಾಸ ಮಾಡುವ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಹಾಗೂ ಗುಣಮಟ್ಟದ ಕಲಿಕೆಗೆ ಹಿನ್ನಡೆಯಾಗಿದೆ. ಮೂಲ ಸೌಕರ್ಯ ಹಾಗೂ ದೈಹಿಕ ಶಿಕ್ಷಕರು ಇಲ್ಲದೆ ಅಳಿವಿನ ಅಂಚಿನತ್ತ ಸರಕಾರಿ ಶಾಲೆಗಳು ಬಂದು ನಿಂತಿದೆ. ಈ ಬಗ್ಗೆ ಸರಕಾರ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ' ಎಂದು ಪೋಷಕ ಪ್ರವೀಣ್ ಕುಮಾರ್ ಹೇಳಿದರು.
ಸರಕಾರಿ ಶಾಲೆಗಳಲ್ಲಿ ಆಟದ ಮೈದಾನಗಳ ಕೊರತೆಯ ಜೊತೆಗೆ, ಶಿಕ್ಷಕರ ಕೊರತೆಯೂ ಕಾಣಿಸಿಕೊಂಡಿದೆ. ಸರಕಾರ ಕೂಡಲೇ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಿ, ಬಿಪಿಈಡಿ ವೃತ್ತಿಪರ ಶಿಕ್ಷಣ ಪಡೆದ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿ ಗಳಾಗಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಸರಕಾರ ನೇಮಕಾತಿಗೆ ಮುಂದಾಗಲಿ ಎಂದು ಗುಡಿಬಂಡೆ ಪದವೀಧರ ಮಂಜುನಾಥ್ ಒತ್ತಾಯಿಸಿದರು.












Click it and Unblock the Notifications