ಹಿಂಗಾರು ಮಳೆಗೆ ಮೈದುಂಬಿದ ಜಕ್ಕಲಮಡುಗು ಜಲಾಶಯ: ರೈತರ ಮೊಗದಲ್ಲಿ ಮಂದಹಾಸ
ಚಿಕ್ಕಬಳ್ಳಾಪುರ, ಅಕ್ಟೋಬರ್ 23: ಮುಂಗಾರು ಮಳೆಗೆ ಮಲೆನಾಡುಗಳಲ್ಲಿ ಜಲಾಶಯ, ಕೆರೆಕಟ್ಟೆ, ನದಿಗಳು ತುಂಬಿ ಹರಿದಿದ್ದರೆ ಇದೀಗ ಸುರಿಯುತ್ತಿರುವ ಹಿಂಗಾರು ಮಳೆ ಬಯಲುಸೀಮೆಯಲ್ಲಿದ್ದ ಕೆರೆಕಟ್ಟೆ, ಜಲಾಶಯಗಳಲ್ಲಿ ನೀರು ಅಲೆಯಾಡುವಂತೆ ಮಾಡಿದೆ. ಅಷ್ಟೇ ಅಲ್ಲದೆ ಬಹುತೇಕ ಕಡೆ ಮಳೆಯಿಂದಾಗಿ ಕೆರೆಕಟ್ಟೆಗಳು ಕೋಡಿ ಬಿದ್ದಿದ್ದು ರೈತರು ಬೆಳೆದ ಬೆಳೆ ನೀರು ಪಾಲಾಗಿದೆ. ಆದರೂ ಕೆರೆಕಟ್ಟೆಗಳು ಭರ್ತಿಯಾಗಿ ಹೆಚ್ಚುವರಿ ನೀರು ಹರಿದು ಹೋಗುವಾಗ ನಿರ್ಮಾಣವಾಗುವ ಜಲಧಾರೆಗಳು ಜನರನ್ನು ಆನಂದ ತುಂದಿಲರನ್ನಾಗಿ ಮಾಡಿದೆ.
ಈ ಬಾರಿಯ ಹಿಂಗಾರು ಮಳೆ ಎಲ್ಲರನ್ನು ತತ್ತರಿಸುವಂತೆ ಮಾಡಿದೆ. ಈ ಮಳೆಗೆ ಬಹುತೇಕ ಜಲಾಶಯಗಳು ಇದೀಗ ಭರ್ತಿಯಾಗಿವೆ. ಆದರಲ್ಲೂ ರೈತರ ಜೀವನಾಡಿ, ಚಿಕ್ಕಬಳ್ಳಾಪುರ ನಗರದ ಜನತೆಯ ಜೀವಸೆಲೆಯಾಗಿರುವ ಜಕ್ಕಲಮಡುಗು ಜಲಾಶಯ ಭರ್ತಿಯಾಗಿ ಜಲಧಾರೆ ಸೃಷ್ಠಿಯಾಗಿದ್ದರೆ, ಅದರಲ್ಲಿ ತಲೆಕೊಟ್ಟು ಮೀಯಲು, ಜಲಲ ಜಲಧಾರೆಯಾಗಿ ಧುಮ್ಮಿಕ್ಕುವುದನ್ನು ನೋಡಲೆಂದೇ ಜನ ಸಾಗರವೇ ಹರಿದು ಬರುತ್ತಿದ್ದು ಪಿಕ್ನಿಕ್ ಸ್ಪಾಟ್ ಆಗಿ ಗಮನಸೆಳೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಹೆಚ್ಚುವರಿ ನೀರು ಜಲಾಶಯದಿಂದ ಹೊರಕ್ಕೆ ಹರಿದು ಹೋಗುತ್ತಿದೆ. ಈ ವೇಳೆ ನೀರು ಧುಮ್ಮಿಕ್ಕುವ ದೃಶ್ಯ ನೋಡುವುದೇ ಕಣ್ಣಿಗೆ ಆನಂದವಾಗಿರುತ್ತದೆ. ಅದರಲ್ಲೂ ಈ ದೃಶ್ಯಗಳು ಎಲ್ಲ ವರ್ಷಗಳಲ್ಲಿ ಸಿಗುವುದು ಅಪರೂಪವಾಗಿರುವ ಕಾರಣದಿಂದಾಗಿ ಜನರು ಖುಷಿಯಿಂದ ಇತ್ತ ಬರುವುದು ವಿಶೇಷವಾಗಿದೆ.
2017ರ ದಿನಗಳ ನೆನಪಿಸಿದ ಜಲಾಶಯ
ಸದ್ಯ ಜಕ್ಕಲಮಡುಗು ಜಲಾಶಯಕ್ಕೆ ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಎಲ್ಲರೂ ಇತ್ತ ದೌಡಾಯಿಸುತ್ತಿದ್ದು, ಒಂದು ರೀತಿಯ ಸಂಭ್ರಮ ಮನೆ ಮಾಡಿದೆ. ಕೆಲವರಿಗಂತು ಇದು ಪಿಕ್ನಿಕ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಪಟ್ಟಣದ ಗೌಜು ಗದ್ದಲದಲ್ಲಿದ್ದವರು ನಿಸರ್ಗದ ಮಡಿಲಲ್ಲಿ ಕೂತು ಧಾರೆ, ಧಾರೆಯಾಗಿ ಇಳಿಯುವ ಜಲವನ್ನು ಕಂಡು ಸಂಭ್ರಮಿಸುತ್ತಾ ಮೈಮನಸ್ಸು ಹಗುರ ಮಾಡಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
2017ರಲ್ಲಿ ಹಿಂಗಾರು ಮಳೆ ಅಬ್ಬರಿಸಿತ್ತು. ಈ ಸಂದರ್ಭವೂ ಜನ ಸಾಗರೋಪಾದಿಯಲ್ಲಿ ಬಂದಿದ್ದರು. ಇಪ್ಪತ್ತು ವರ್ಷಗಳ ಬಳಿಕ 2017ರಲ್ಲಿ ಜನ ಜಲಾಶಯಕ್ಕೆ ಬಂದಿದ್ದರು. ಇದೀಗ ಮತ್ತೆ ಅದೇ ದಿನಗಳನ್ನು ನೆನಪಿಸುತ್ತಿದೆ. ಈ ಜಲಾಶಯ ಪ್ರತಿವರ್ಷವೂ ಭರ್ತಿಯಾಗುವುದು ಕಡಿಮೆಯೇ ಹೀಗಾಗಿ ಜಲಾಶಯ ಭರ್ತಿಯಾಗಿದೆ ಎಂದರೆ ಈ ವ್ಯಾಪ್ತಿಯ ಜನ ತುಂಬಾ ಖುಷಿಪಡುತ್ತಾರೆ. ಈ ಬಾರಿಯ ಹಿಂಗಾರು ಮಳೆ ಜಕ್ಕಲಮಡುಗು ಜಲಾಶಯಕ್ಕೆ ಜೀವ ಕಳೆ ತುಂಬಿದ್ದು, ಜನರಲ್ಲಿ ಹುಮ್ಮಸ್ಸು, ರೈತರಲ್ಲಿ ಸಡಗರ ಸಂಭ್ರಮ ಮನೆ ಮಾಡುವಂತೆ ಮಾಡಿರುವುದಂತು ನಿಜ.

ಸದಾ ಬರಡಾಗಿದ್ದ ಜಲಾಶಯವನ್ನು ನೋಡುವ ಜನ ಪ್ರತಿವರ್ಷವೂ ಭರ್ತಿಯಾಗುವುದನ್ನು ಛಾತಕ ಪಕ್ಷಿಯಂತೆ ಕಾಯುತ್ತಾ ಇರುತ್ತಾರೆ ಜಲಾಶಯ ನಿರ್ಮಾಣವಾದ ಬಳಿಕ ಸುಮಾರು ಇಪ್ಪತ್ತು ವರ್ಷಗಳ ಕಾಲ ನೀರು ಸಂಗ್ರಹವಾಗುತ್ತಿತ್ತಾದರೂ ಭರ್ತಿಯಾಗಿರಲಿಲ್ಲ. ಆದರೆ 2017ರಲ್ಲಿ ಹಿಂಗಾರು ಮಳೆ ಜಲಾಶಯ ಭರ್ತಿಯಾಗುವಂತೆ ಮಾಡಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸಿರುವುದು ಅಚ್ಚರಿ ಮೂಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಕ್ಕಲಮಡುಗು ಜಲಾಶಯ ಮಾತ್ರವಲ್ಲದೆ ಈಗಾಗಲೇ ಬತ್ತಿ ಹೋಗಿದ್ದ ಬಹುತೇಕ ಕೆರೆಗಳು ಕೋಡಿ ಹರಿದಿದೆ. ಗುಡಿಬಂಡೆಕೆರೆ, ಬಾಗೇಪಲ್ಲಿ ಚಿತ್ರಾವತಿ, ಶಿಡ್ಲಘಟ್ಟ ಅಮಾನಿ ಬೈರಾಸಾಗರ, ಗೌರಿಬಿದನೂರು ಚಿತ್ರ ಪಿನಾಕಿನಿ ನದಿಗೂ ಸಾಕಷ್ಟು ನೀರು ಹರಿದು ಬರುತ್ತಿದ್ದು ಸಣ್ಣಪುಟ್ಟ ಕೆರೆಕಟ್ಟೆಗಳಿಗೆ ಜೀವ ಬಂದಂತಾಗಿದೆ. ಒಟ್ಟಾರೆ ಮಳೆಯಿಂದ ಹಾನಿಯಾಗಿದ್ದರೂ ಕೆರೆಕಟ್ಟೆಗಳು ತುಂಬುವಂತಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡಿದೆ.












Click it and Unblock the Notifications