ಚಿಕ್ಕಬಳ್ಳಾಪುರ: ಗಡಿಭಾಗದಲ್ಲಿ ಮುಂದುವರಿದ ಅಕ್ರಮ ಮರಳು ಸಾಗಾಟ, ಯಾರಿಗೂ ಕ್ಯಾರೇ ಎನ್ನದ ದಂಧೆಕೋರರು
ಚಿಕ್ಕಬಳ್ಳಾಪುರ, ನವೆಂಬರ್ 20: ಅಕ್ರಮ ಮರಳುದಂಧೆಯನ್ನು ತಡೆಯಲು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ನಿಯಮಗಳನ್ನು ಜಾರಿಗೊಳಿಸಿ ಹದ್ದಿನ ಕಣ್ಣಿಟ್ಟಿದ್ದರು ಸಹ ಪೊಲೀಸರ ಕಣ್ಣು ತಪ್ಪಿಸಿ ಕೆಲವು ಕಡೆ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎನ್ನುವ ಆರೋಪ ಜೋರಾಗಿ ಕೇಳಿ ಬರುತ್ತಿದೆ.
ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿ ಭಾಗದಲ್ಲಿರುವ ಚೇಳೂರು ತಾಲೂಕಿನ ಹಲವು ಕಡೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಿಚಾರ ತಿಳಿದ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ನೆರೆಯ ಆಂಧ್ರ ಪ್ರದೇಶದ ನೋಂದಣಿ ಸಂಖ್ಯೆಯ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡು, ಚಾಲಕನನ್ನು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೇಳೂರು ಹೋಬಳಿಯನ್ನು ಸುಗಮ ಆಡಳಿತಕ್ಕಾಗಿ ವಿಶಾಲ ಬಾಗೇಪಲ್ಲಿ ತಾಲೂಕಿನಿಂದ ಬೇರ್ಪಡಿಸಿ ನೂತನ ಚೇಳೂರು ತಾಲೂಕಾಗಿ ಘೋಷಿಸಲಾಗಿತ್ತು.
ಚೇಳೂರು ಗ್ರಾಮದ ಪಾಪಾಗ್ನಿ ನದಿಯಿಂದ ಮರಳು ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಚೇಳೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಜನಾರ್ದನ್ ಪಿ.ಆರ್ ಅವರ ಮಾರ್ಗದರ್ಶನದಲ್ಲಿ ಆರಕ್ಷಕ ಉಪ ನಿರೀಕ್ಷಕ ಎಸ್. ಹರೀಶ್ ಮತ್ತು ಸಿಬ್ಬಂದಿ ಚೇಳೂರು ತಾಲೂಕಿನ ಪಾಳ್ಯಕೆರೆ ಸಮೀಪ ಚೌಡಂಪಲ್ಲಿ ಗ್ರಾಮದ ಬಳಿ ದಾಳಿ ನಡೆಸಿ ಎ.ಪಿ. 02, ಟಿ.ಸಿ. 8449 ನಂಬರ್‌ನ ದೊಡ್ಡ ಗಾತ್ರದ ಲಾರಿಯನ್ನು ಮತ್ತು ಚಾಲಕನನ್ನು ಪೋಲಿಸರ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಯ ಪಾಪಾಗ್ನಿ ನದಿಯಲ್ಲಿ ಮರಳು ಸಾಗಾಣಿಕೆ ಹೆಚ್ಚಾಗುತ್ತಿದ್ದು, ಮರಳು ಸಾಗಾಣಿಕೆಯಿಂದ ಅಂತರ್ ಜಲ ಕುಸಿಯುತ್ತಿರುವುದರಿಂದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ರೈತರ ಆರೋಪವಾಗಿದೆ. ಇನ್ನಾದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.












Click it and Unblock the Notifications