Chikkaballapur: ಚಿಕ್ಕಬಳ್ಳಾಪುರದ ಶೇ.90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೊಟ್ಟೆ- ಇಂದಿನಿಂದಲೇ ವಿತರಣೆ ಶುರು
ಚಿಕ್ಕಬಳ್ಳಾಪುರ ಸೆಪ್ಟೆಂಬರ್ 26: ಮಕ್ಕಳಲ್ಲಿ ಆಪೌಷ್ಟಿಕತೆಯನ್ನು ನಿವಾರಿಸಲು ಸರಕಾರಿ ಮತ್ತು ಆನುದಾನಿತ ಶಾಲೆಗಳಲ್ಲಿ ವಾರಕ್ಕೆರಡು ದಿನ ನೀಡುತ್ತಿದ್ದು ಮೊಟ್ಟೆಯನ್ನು ಈಗ ವಾರದ 6 ದಿನವೂ ಕೊಡಲು ನಿರ್ಧರಿಸಲಾಗಿದೆ. ಜಿಲ್ಲಾದ್ಯಂತ ಬುಧವಾರದಿಂದ ಮೊಟ್ಟೆ ವಿತರಣೆಗೆ ಆರಂಭವಾಗಿದ್ದು, ಸೆ.27ರಂದು ಜಿಲ್ಲಾ ಮಟ್ಟದಲ್ಲಿ ಅಧಿಕೃತ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಸರ್ಕಾರ ಮಧ್ಯಾಹ್ನದ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್‌ಜಿ ಫೌಂಡೇಷನ್, ಅನುದಾನದ ಸಹಭಾಗಿತ್ವದಲ್ಲಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದ ಎಲ್ಲಾ 6 ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

ಇಷ್ಟು ದಿನ ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಕ್ಷರ ದಾಸೋಹ ಯೋಜನೆಯಡಿ ಮೊಟ್ಟೆ, ಚಿಕ್ಕಿ ಮತ್ತು ಬಾಳೆಹಣ್ಣನ್ನು ನೀಡಲಾಗುತ್ತಿತ್ತು. ಆದರೆ ಈಗ ವಾರದ ಆರು ದಿನವೂ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಅಜೀಂ ಪ್ರೇಮ್ ಜೀ ಅನುದಾನದಲ್ಲಿ ಈಗ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ದಿನವೂ ಮಕ್ಕಳಿಗೆ ಮೊಟ್ಟೆಭಾಗ್ಯ ಲಭ್ಯವಾಗುತ್ತಿದೆ.
1601 ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮೊಟ್ಟೆಗೆ ಪುಲ್ ಡಿಮ್ಯಾಂಡ್:
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೂ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಟ್ಟು 77,691ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಮಕ್ಕಳ ಪೈಕಿ 66,194 ವಿದ್ಯಾರ್ಥಿಗಳು ಮೊಟ್ಟೆ ಸ್ವೀಕರಿಸುತ್ತಿದ್ದಾರೆ. ಉಳಿದ 7326 ಮಕ್ಕಳು ಬಾಳೆಹಣ್ಣು ಹಾಗೂ 4171 ಮಕ್ಕಳು ಚಿಕ್ಕಿ ತೆಗೆದುಕೊಳ್ಳುತ್ತಿದ್ದಾರೆ. ಮೊಟ್ಟೆ ಸ್ವೀಕರಿಸುವವರ ಸಂಖ್ಯೆ ಶೇ.90ಕ್ಕೂ ಹೆಚ್ಚಿದೆ. ಮೊಟ್ಟೆ ಬದಲು ಚಿಕ್ಕಿ, ಬಾಳೆಹಣ್ಣು: ಜಿಲ್ಲೆಯಲ್ಲಿ

ವಾರದಲ್ಲಿ ಕೆಲವು ದಿನ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಹೀಗಾಗಿ ಸೋಮವಾರ ಮತ್ತು ಶನಿವಾರ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಚಿಕ್ಕಿ, ಬಾಳೆಹಣ್ಣು ಪಡೆಯುತ್ತಿದ್ದು, ವಾರದ ಉಳಿದ ದಿನಗಳಲ್ಲಿ ಮೊಟ್ಟೆ ಸ್ವೀಕರಿಸುವವರ ಸಂಖ್ಯೆಯೇ ಹೆಚ್ಚಿದೆ.
1601 ಶಾಲೆಗಳಲ್ಲಿ ಮೊಟ್ಟೆ ವಿತರಣೆ:
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೂ ಒಟ್ಟು 1601 ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. 1601 ಅಡುಗೆ ಕೇಂದ್ರಗಳಿದ್ದು ಒಟ್ಟು 2580 ಅಡುಗೆ ಸಿಬ್ಬಂದಿ. ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಾಲೂಕಿನಲ್ಲೂ ಬುಧವಾರದಿಂದಲೇ ಮೊಟ್ಟೆ ವಿತರಣೆ ಶುರುವಾಗಿದ್ದು, ಇನ್ನು ಮುಂದೆ ವಾರದ ಆರು ದಿನವೂ ಮೊಟ್ಟೆ ವಿತರಣೆಯಾಗಲಿದೆ.
ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ ಭಾಗ್ಯ:
ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಪ್ರತಿ ಮಗುವಿಗೂ ತಲಾ 6 ರೂ.ನಂತೆ ನೀಡಲಾಗುತ್ತಿದ್ದು, ಪ್ರತಿ ದಿನ ಶಾಲೆಗೆ ಹಾಜರಾಗುವ ಮಕ್ಕಳ ಸಂಖ್ಯೆಗೆ ಅನುಸಾರ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಕೆಲಸ ನಡೆಯುತ್ತಿದೆ.
ಸೆ.27ರಂದು ಅಧಿಕೃತ ಚಾಲನೆ:
ಎಲ್ಲ ತಾಲೂಕು ಕೇಂದ್ರಗಳಲ್ಲಿ ಬುಧವಾರವೇ ಮೊಟ್ಟೆ ವಿತರಣೆ ಕಾರ್ಯ ಶುರುವಾಗಿದೆ. ಜಿಲ್ಲಾ ಮಟ್ಟದಲ್ಲಿ ಸೆ.27ರಂದು ರೆಡ್ಡಿಗೊಲ್ಲವಾರಹಳ್ಳಿಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
3 ವರ್ಷವೂ ಅಭಾದಿತ:
ಮುಂದಿನ 3 ವರ್ಷದವರೆಗೂ ಅಜೀಂ ಪ್ರೇಮ್ ಜೀ ಪ್ರತಿಷ್ಠಾನದಿಂದ 6 ದಿನವೂ ಮೊಟ್ಟೆ ವಿತರಣೆಗೆ ಅನುದಾನ ಸಿಗಲಿದ್ದು, ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಇದು ಲಭ್ಯವಾಗಲಿದೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಬಡ ಕುಟುಂಬದ ವಿದ್ಯಾರ್ಥಿಗಳೇ ಇರುವುದರಿಂದ ಮಕ್ಕಳು ಆರೋಗ್ಯಕರವಾಗಿ ಬೆಳೆಯಲು ಇದು ಸಹಕಾರಿಯಾಗಲಿದೆ.
ಈ ಕುರಿತು ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ರೇಣುಕಾ ಪ್ರತಿಕ್ರಿಯೆ ನೀಡಿದ್ದು ಜಿಲ್ಲೆಯಾದ್ಯಂತ ಬುಧವಾರದಿಂದಲೇ ವಾರದ 6 ದಿನವೂ ಮೊಟ್ಟೆವಿತರಣೆ ಶುರುವಾಗಿದೆ. ವಾರದ ಕೆಲವು ದಿನಗಳಲ್ಲಿ ಮೊಟ್ಟೆಬೇಡ ಎನ್ನುವವರಿಗೆ ಚಿಕ್ಕಿ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಸೆ.27ರಂದು ರೆಡ್ಡಿಗೊಲ್ಲವಾರಹಳ್ಳಿ ಸರಕಾರಿ ಪ್ರೌಢಶಾಲೆ ಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.
ಈ ಕುರಿತು ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದು, ಇಷ್ಟು ದಿನ ವಾರದಲ್ಲಿ 2 ದಿನ ಮಾತ್ರ ಕೋಳಿ ಮೊಟ್ಟೆ ಕೊಡುತ್ತಿದ್ದರು. ಈಗ 6 ದಿನವೂ ಕೋಳಿಮೊಟ್ಟೆ ಕೊಡುತ್ತಿರುವುದು ಖುಷಿಯಾಗಿದೆ. ಶಿಕ್ಷಣದ ಜತೆಗೆ ಊಟವೂ ಸಿಗುತ್ತಿದ್ದು, ಉತ್ತಮ ಅರೋಗ್ಯದಿಂದ ಉತ್ತಮ ವ್ಯಾಸಂಗಕ್ಕೆ ಅನುಕೂಲವಾಗಿದೆ.
ಅಂಕಿ ಅಂಶ :-
ಮೊಟ್ಟೆ ಪಡೆಯುವವರ ಸಂಖ್ಯೆಯೇ ಹೆಚ್ಚು:-
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 11,185 ವಿದ್ಯಾರ್ಥಿಗಳು ಮೊಟ್ಟೆ ಪಡೆದರೆ, 1084 ವಿದ್ಯಾರ್ಥಿಗಳು ಬಾಳೆಹಣ್ಣು ಹಾಗೂ 423 ವಿದ್ಯಾರ್ಥಿಗಳು ಚಿಕ್ಕಿ ಪಡೆಯುತ್ತಾರೆ.
ಬಾಗೇಪಲ್ಲಿ ತಾಲೂಕಿನಲ್ಲಿ 9651 ವಿದ್ಯಾರ್ಥಿಗಳು ಮೊಟ್ಟೆ ಪಡೆದರೆ, 674 ವಿದ್ಯಾರ್ಥಿಗಳು ಬಾಳೆಹಣ್ಣು ಹಾಗೂ 671 ವಿದ್ಯಾರ್ಥಿಗಳು ಚಿಕ್ಕಿ ಪಡೆಯುತ್ತಾರೆ.
ಚಿಂತಾಮಣಿ ತಾಲೂಕಿನಲ್ಲಿ 13975 ವಿದ್ಯಾರ್ಥಿಗಳು ಮೊಟ್ಟೆ ಪಡೆದರೆ, 1399 ವಿದ್ಯಾರ್ಥಿಗಳು ಬಾಳೆಹಣ್ಣು ಹಾಗೂ 962 ವಿದ್ಯಾರ್ಥಿಗಳು ಚಿಕ್ಕಿ ಪಡೆಯುತ್ತಾರೆ.
ಗೌರಿಬಿದನೂರು ತಾಲೂಕಿನಲ್ಲಿ 16522 ವಿದ್ಯಾರ್ಥಿಗಳು ಮೊಟ್ಟೆ ಪಡೆದರೆ, 2265 ವಿದ್ಯಾರ್ಥಿಗಳು ಬಾಳೆಹಣ್ಣು ಹಾಗೂ 1107 ವಿದ್ಯಾರ್ಥಿಗಳು ಚಿಕ್ಕಿ ಪಡೆಯುತ್ತಾರೆ.
ಗುಡಿಬಂಡೆ ತಾಲೂಕಿನಲ್ಲಿ 4468 ವಿದ್ಯಾರ್ಥಿಗಳು ಮೊಟ್ಟೆ ಪಡೆದರೆ, 3698 ವಿದ್ಯಾರ್ಥಿಗಳು ಬಾಳೆಹಣ್ಣು ಹಾಗೂ 575 ವಿದ್ಯಾರ್ಥಿಗಳು ಚಿಕ್ಕಿ ಪಡೆಯುತ್ತಿದ್ದು, ತಾಲೂಕಿನಲ್ಲಿ ಒಟ್ಟು 66,194 ವಿದ್ಯಾರ್ಥಿಗಳು ಮೊಟ್ಟೆಯನ್ನು, 7,326 ಬಾಳೆಹಣ್ಣು ಹಾಗೂ 4,171 ವಿದ್ಯಾರ್ಥಿಗಳು ಚಕ್ಕಿ ಸ್ವೀಕರಿಸುತ್ತಿದ್ದಾರೆ.












Click it and Unblock the Notifications