ಡಾ. ಕೆ. ಸುಧಾಕರ್‌ಗೆ ಬೆಂಬಲ ಘೋಷಿಸಿದ ಡಿಎಸ್‌ಎಸ್
ಚಿಕ್ಕಬಳ್ಳಾಪುರ, ಏಪ್ರಿಲ್ 22; ಕರ್ನಾಟಕದ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಯಾವ ಕ್ಷೇತ್ರದಲ್ಲಿ ಯಾರ ಬೆಂಬಲ ಯಾರಿಗೆ? ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ. ಕೆ. ಸುಧಾಕರ್ ಬೆಂಬಲಿಸುತ್ತೇವೆ ಎಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ಘೋಷಣೆ ಮಾಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಬಾಲಕುಂಟಹಳ್ಳಿ ಗಂಗಾಧರ್, ಕಾಂಗ್ರೆಸ್, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ದಲಿತ ವಿರೋಧಿ ನೀತಿ ಅನುಸರಿಸುತ್ತಿವೆ. ಹೀಗಾಗಿ ಬಿಜೆಪಿಯ ಡಾ. ಕೆ. ಸುಧಾಕರ್ ಬೆಂಬಲಿಸುತ್ತೇವೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದಾಗಿ" ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ಡಾ. ಕೆ. ಸುಧಾಕರ್‌ಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಿಂದ ಪ್ರದೀಪ್ ಈಶ್ವರ್ ಅಭ್ಯರ್ಥಿ. ಜೆಡಿಎಸ್ ಪಕ್ಷ ಕೆ. ಪಿ. ಬಚ್ಚೇಗೌಡ ಕಣಕ್ಕಿಳಿಸಿದೆ. ಹಲವು ಕಾರಣಗಳಿಗೆ ಈ ಕ್ಷೇತ್ರದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ; ಬಾಲಕುಂಟಹಳ್ಳಿ ಗಂಗಾಧರ್ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. 'ದಲಿತರಿಗೆ ಕಾಂಗ್ರೆಸ್ ಮಾಡಿದಷ್ಟು ಮೋಸ ಯಾವುದೇ ಪಕ್ಷ ಮಾಡಿಲ್ಲ. ಅಂಬೇಡ್ಕರ್ ಅವರ ಸಮಾಧಿಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್, ಜಗಜೀವನ್ ರಾಮ್ ಅವರ ಫೋಟೋ ಇಟ್ಟುಕೊಂಡು ಚುನಾವಣೆ ಗೆದ್ದ ಕಾಂಗ್ರೆಸ್ ಅವರನ್ನು ಪ್ರಧಾನಿ ಮಾಡದೆ ಮೋಸ ಮಾಡಿದೆ" ಎಂದು ಆರೋಪಿಸಿದರು.

"ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಾದ ಮುಸ್ಲಿಮರಿಗೆ ಮೋಸ ಮಾಡಿಲ್ಲ. ಈ ಹಿಂದೆ ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಎಂದು ಕೆಲ ಪ್ರಬುದ್ಧರು ವಾದಿಸಿದ್ದರು. ಹಾಗಾಗಿ ಉಪ ಸಮಿತಿ ರಚನೆ ಮಾಡಲಾಯಿತು. ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ಬ್ರಾಹ್ಮಣರಿಗೆ ಶೇ10ರಷ್ಟು ಮೀಸಲಾತಿ ನೀಡಿದ್ದು, ಇದರಲ್ಲಿ ಮೀಸಲಾತಿ ಪಡೆಯುವಂತೆ ಅಲ್ಪಸಂಖ್ಯಾತರಿಗೆ ಸೇರಿಸಲಾಗಿದೆ" ಎಂದು ವಿವರಿಸಿದರು.
"ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆಗಳು ಹಲವಾರು ಜಿಲ್ಲೆಗಳಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದು, ಪ್ರಬಲವಾಗಿವೆ. ಆದರೆ ದಲಿತ ಸಂಘಟನೆಗಳ ಒಕ್ಕೂಟ ಯಾವುದೇ ತೀರ್ಮಾನ ಕೈಗೊಳ್ಳುವುದಕ್ಕೂ ಮೊದಲು ಈ ದಲಿತ ಸಂಘಟನೆಗಳನ್ನು ಸೌಜನ್ಯಕ್ಕಾದರೂ ಕರೆದು ಅಭಿಪ್ರಾಯ ಕೇಳುವ ಕೆಲಸ ಮಾಡದೆ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ" ಎಂದು ದೂರಿದರು.
"ಎಡಗೈ ಜನಾಂಗ ಪ್ರಬಲವಾಗಿರುವ ಜಿಲ್ಲೆಗಳ ಸಂಘಟನೆಗಳನ್ನು ಕರೆದು ಮಾತನಾಡಲಿಲ್ಲ, ಇವರೇ ದಲಿತರು ಎಂದು ಹೇಳಿಕೊಂಡು ಜನಾಂಗವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ವರದಿ ಮಂಡನೆ ಮಾಡಲು ಹೋದಾಗ ಬಲಗೈ ಸಮುದಾಯ ವಿರೋಧ ಮಾಡಿತು" ಎಂದು ಕಿಡಿ ಕಾರಿದರು.
ಎಡಗೈ ಸಮುದಾಯಕ್ಕೆ ಅನ್ಯಾಯ; ಬಾಲಕುಂಟಹಳ್ಳಿ ಗಂಗಾಧರ್, "ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡೆಸಿದ ಸಮೀಕ್ಷೆಗಳಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವುದು ದೃಢಪಟ್ಟಿದೆ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕತವಾಗಿ ಎಡಗೈ ಸಮುದಾಯಕ್ಕೆ ಅನ್ಯಾಯ ಆಗಿರುವ ಹಿನ್ನೆಲೆಯಲ್ಲಿ ಬಿಟ್ಟುಹೋಗಲಿದ್ದಾರೆ ಎಂದು ಬೆಂಗಳೂರಲ್ಲಿ ಸಭೆ ಕರೆದು ಒಕ್ಕೂಟ ಮಾಡಿದ್ದಾರೆ. ನಮ್ಮನ್ನೂ ಕರೆದು ಮಾತನಾಡಬಹುದಿತ್ತು, ಆದರೆ ಆ ಕೆಲಸ ಮಾತನಾಡಲಿಲ್ಲ. ಸುಧಾಕರ್ ಅವರ ಜೊತೆ ಕಳೆದ 10 ವರ್ಷಗಳಿಂದ ಇದ್ದವರು ಆಗ ಯಾಕೆ ಪ್ರಶ್ನೆ ಮಾಡಲಿಲ್ಲ, ನಿಮಗೆ ಅನ್ಯಾಯ ಆಗಿದ್ದರೆ ಆಗಲೇ ಯಾಕೆ ಹೋರಾಟ ಮಾಡಲಿಲ್ಲ?" ಎಂದು ಪ್ರಶ್ನಿಸಿದರು.
"ಕಾಂಗ್ರೆಸ್ ಸದಾಶಿವ ಆಯೋಗದ ವರದಿ ಬಗ್ಗೆ ಚರ್ಚೆ ಮಾಡದೆ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತದೆ, ಅಂದು ಪರಮೇಶ್ವರ ಬೇಡ ಎಂದರು, ಪ್ರಿಯಾಂಕ ಖರ್ಗೆ, ಮಹದೇವಪ್ಪ ವಿರೋಧ ಮಾಡಿದರು. ಇಂದು ಯಾವ ಮುಖ ಇಟ್ಟಿಕೊಂಡು ಎಡಗೈ ಸಮುದಾಯವನ್ನು ಮತ ಕೇಳುತ್ತೀರಾ ಎಂದು ಕೇಳಿದರು. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಬಲಗೈ ಸಮುದಾಯದ 21 ಮಂದಿಗೆ ಟಿಕೆಟ್ ನೀಡಿದ್ದರೆ, ಎಡಗೈ ಸಮುದಾಯದ 6 ಮಂದಿಗೆ ಮಾತ್ರ ಟಿಕೆಟ್ ನೀಡಿದೆ. ಇದರಿಂದಲೇ ತಿಳಿಯಲಿದೆ ಎಡಗೈ ಸಮುದಾಯವನ್ನು ಕಾಂಗ್ರೆಸ್ ಯಾವ ಹಂತದಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು. ಎಡಗೈ ಸಮುದಾಯದವರಿಗೆ ಅನುಕೂಲ ಮಾಡಿರುವುದು ಬಿಜೆಪಿ, ಹಾಗಾಗಿ ಎಡಗೈ ಸಮುದಾಯ ಬಿಜೆಪಿ ಬೆಂಬಲಿಸಬೇಕು" ಎಂದು ಮನವಿ ಮಾಡಿದರು.












Click it and Unblock the Notifications