ಕೊತ್ತೂರು ಮಂಜುನಾಥ್‌ಗೆ ಟಿಕೆಟ್ ನೀಡಿದರೆ ಸೋಲು ಖಚಿತ: ಕಾಂಗ್ರೆಸ್‌ಗೆ ದಲಿತ ಸಂಘಟನೆಗಳ ಎಚ್ಚರಿಕೆ
ಕೊತ್ತೂರು ಜಿ.ಮಂಜುನಾಥ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ದಲಿತ ಜಾಗೃತಿ ಅಭಿಯಾನದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ, ಮಾರ್ಚ್ 13: ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸಮೀಲಾತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಕೊತ್ತೂರು ಜಿ.ಮಂಜುನಾಥ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ದಲಿತ ಜಾಗೃತಿ ಅಭಿಯಾನದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜೂನಿಯರ್ ಕಾಲೇಜು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಬಿ.ಬಿ ರಸ್ತೆ ಮೂಲಕ ಶಿಡ್ಲಘಟ್ಟ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಯಲ್ಲಿ ಬೇಡವೇ ಬೇಡಾ ದಲಿತ ವಿರೋಧಿ ಕೊತ್ತೂರು ಮಂಜುನಾಥ್ ಚಿಕ್ಕಬಳ್ಳಾಪುರಕ್ಕೆ ಬೇಡ ಎಂದು ಘೋಷಣೆ ಹಾಕಿದರು.

ಕೋಲಾರ ಜಿಲ್ಲೆಯ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಂವಿಧಾನ ಮತ್ತು ದಲಿತರಿಗೆ ವಂಚನೆ ಮಾಡಿರುವ ಬಗ್ಗೆ ಸಾಬೀತಾಗಿದೆ. ಇಂತಹ ವ್ಯಕ್ತಿ ಚಿಕ್ಕಬಳ್ಳಾಪುರದಲ್ಲಿ ಬಂದು ಸ್ಪರ್ಧೆ ಮಾಡಲು ನೈತಿಕತೆಯಿಲ್ಲ ಎಂದು ಆರೋಪಿಸಿದರು.
ಜಾತಿ ಪ್ರಮಾಣ ಪತ್ರದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಅದು ಅಲ್ಲದೆ ದಲಿತರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ಅವರಿಗೆ ದುಡ್ಡಿನ ಮದ ಹೆಚ್ಚಾಗಿದ್ದು, ದಲಿತರು ಎಂದರೆ ಗೌರವವಿಲ್ಲ. ಅವರು ಯಾವುದೇ ಕಂಪನಿ ಶೂ ಬಳಕೆ ಮಾಡಿದರೂ ಅಭ್ಯಂತರವಿಲ್ಲ. ಆದರೆ ದಲಿತರನ್ನು ಲೇಲೇಕರ್ ಶೂಗೆ ಹೊಲಿಸಿರುವುದು ಎಷ್ಟು ಮಾತ್ರ ಸರಿ. ದಲಿತರ ಶಾಪ ತಟ್ಟೇತಟ್ಟುತ್ತದೆ ಎಂದು ಕಿಡಿಕಾರಿದರು.
ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಹಿರಂಗವಾಗಿ ಕೆಲಸ ಮಾಡಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪನವರ ಸೋಲಿಗೆ ಕಾರಣರಾಗಿದ್ದಾರೆ. ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವುದು ವಿಷಾದಕರ ಸಂಗತಿ. ಹೋದ ಕಡೆಯಲ್ಲ ಮುನಿಯಪ್ಪನವರನ್ನು ಸೋಲಿಸಿದ್ದು ನಾವೇ ಎಂದು ಹೇಳಿಕೊಳ್ಳಲು ನಾಚಿಕೆಯಾಗಲಿಲ್ಲವೆ. ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡಿದರೆ ಹೀನಾಯವಾಗಿ ಸೋಲಿಸುವುದು ಗ್ಯಾರೆಂಟಿ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಯಾವ ಜಾತಿಗೆ ಸೇರಿದವರು ಎಂಬುದು ಈಗಲೂ ಅವರಿಗೆ ಗೊಂದಲವಿದೆ. ಜಿಲ್ಲಾಡಳಿತ, ಹೈಕೋರ್ಟ್ ಜಾತಿ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟೀಕರಣ ಕೊಡುವಂತೆ ಮಂಜುನಾಥ್‌ಗೆ ಸೂಚಿಸಿದ್ದರು ಇದುವರೆಗೂ ಕೊಡಲು ಸಾಧ್ಯವಾಗಲಿಲ್ಲ. ಸಮಾಜದಲ್ಲಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ಸಿಗಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಆಶಯವಾಗಿದ್ದು ಸಂವಿಧಾನದಲ್ಲಿ ಉಲ್ಲೇಖ ಮಾಡಿದ್ದಾರೆ. ರಾಜ್ಯ, ದೇಶದಲ್ಲಿ ದಲಿತರ ಮೀಸಲಾತಿ ದುರುಪಯೋಗ ಪಡಿಸಿಕೊಂಡವರು ಯಾರು ಸಮಾಜದಲ್ಲಿ ಮೇಲೆ ಬರಲು ಆಗಲಿಲ್ಲ. ಅದೇ ಪರಿಸ್ಥಿತಿ ಮಂಜುನಾಥ್‌ಗೆ ಬರುತ್ತದೆ ಎಂದು ಹೇಳಿದರು.
ಜಾತಿ ಪ್ರಮಾಣ ಪತ್ರ ಸಾಬೀತು ಮಾಡುವಲ್ಲಿ ವಿಫಲರಾಗಿರುವ ಮಂಜುನಾಥ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರ ಯಾರಿಗೂ ಬಿಟ್ಟಿಯಾಗಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಮರ್ಥ ನಾಯಕರು ಅನೇಕರು ಇದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡಿದರೆ ಭಾರಿ ಅಂತರದ ಮತಗಳಿಂದ ಗೆಲ್ಲಿಸುತ್ತೆವೆ. ಅದು ಬಿಟ್ಟು ಕೊತ್ತೂರು ಮಂಜುನಾಥ್ ಅಥವಾ ಬೇರೆ ಕಡೆಯವರಿಗೆ ಟಿಕೆಟ್ ನೀಡಿದರೆ ಸೋಲುವುದು ಖಚಿತ ಎಂದು ಎಚ್ಚರಿಸಿದರು.
ಸಂವಿಧಾನ ವಿರೋಧಿ ಕೊತ್ತೂರು ಮಂಜುನಾಥ್ ತೊಗಲಿಸಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು. ಕಾಂಗ್ರೆಸ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಮಂಜುನಾಥ್ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಸಂವಿಧಾನಕ್ಕೆ ಹಾಗೂ ಅಂಬೇಕಡ್ಕರ್ ಅವರಿಗೆ ಗೌರವ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ವಿವಿಧ ದಲಿತರ ಸಂಘಟನೆಗಳ ಮುಖಂಡರಾದ ಮಂಚನಬೆಲೆ ಪ್ರಕಾಶ್, ಪೋಷೆಟ್ಟಿಹಳ್ಳಿ ಶಿವಕೃಷ್ಣ. ಅವಲಗುರ್ಕಿ ಲಕ್ಷ್ಮಣ್, ಜೀವಿಕ ಸಂಘಟನೆಯ ನಾರಾಯಣಮ್ಮ, ಆನಂದ್, ಈಶ್ವರ್, ಸುರೇಶ್, ಈಶ್ವರ್ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications