ಅರೂರಿನಲ್ಲಿ 810 ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡಲಿರುವ ಕೇಂದ್ರ ಆರೋಗ್ಯ ಸಚಿವ
ಚಿಕ್ಕಬಳ್ಳಾಪುರ, ಮಾರ್ಚ್, 27: ಅರೂರಿನಲ್ಲಿ ಇಂದು ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ 810 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಕಟ್ಟಡದ ಉದ್ಘಾಟನೆ ಆಗಲಿದೆ.
ವೈದ್ಯಕೀಯ ಕಾಲೇಜು ಉದ್ಘಾಟನೆ
ಈ ವೈದ್ಯಕೀಯ ಕಾಲೇಜು 57.24 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಇಂದು ಇದರ ಉದ್ಘಾನೆಯಾಗಲಿದೆ. ಆಯುಷ್ಮತಿ ಕ್ಲಿನಿಕ್, ನಮ್ಮ ಕ್ಲಿನಿಕ್, ಕಾಕ್ಲಿಯರ್ ಇಂಪ್ಲಾಟ್ ಯೋಜನೆ, ಡಯಾಲಿಸಿಸ್ ಹೊಸ ಸೇವೆಗಳ ಲೋಕಾರ್ಪಣೆ, ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಇಂದು ನೆರವೇರಲಿದೆ.

ಇನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ, ರೈತರಿಗೆ ಹಾಗೂ ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆ, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ.
ಫಲಾನುಭವಿಗಳ ಸಮ್ಮೇಳನ ಆಯೋಜನೆ
ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡದ ಉದ್ಘಾಟನೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ನೆರವೇರಿಸಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗಳ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಸಮ್ಮೇಳನದಲ್ಲಿ ನೂತನ ಕಂದಾಯ ಗ್ರಾಮಗಳ ಸುಮಾರು 23,000 ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ಕಂದಾಯ ಸಚಿವರಾದ ಆರ್.ಅಶೋಕ್ ವಿತರಿಸಲಿದ್ದಾರೆ. ಮೊದಲ ಹಂತದಲ್ಲಿ 11,500 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ವಿವಿಧ ಇಲಾಖೆಗಳ ವಾಹನಗಳನ್ನು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ನಾಗರಾಜು ಅವರು ವಿತರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಹಿಸಲಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪ್ರಭು ಬಿ. ಚೌಹಾನ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವವರ ವಿವರ
ಮುಖ್ಯ ಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ರವಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ, ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಎನ್.ಹೆಚ್. ಶಿವಶಂಕರ್ ರೆಡ್ಡಿ, ಎಂ.ಕೃಷ್ಣಾರೆಡ್ಡಿ, ಎಸ್.ಎನ್. ಸುಬ್ಬಾರೆಡ್ಡಿ ಭಾಗಿಯಾಗಲಿದ್ದಾರೆ.
ಇನ್ನುಳಿದಂತೆ ವಿ.ಮುನಿಯಪ್ಪ, ಟಿ.ವೆಂಕಟರಾಮಣಯ್ಯ, ಕೆ. ಶ್ರೀನಿವಾಸಮೂರ್ತಿ, ಎಲ್.ಎನ್. ನಿಸರ್ಗ ನಾರಾಯಣಸ್ವಾಮಿ, ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ ಶಾಸಕರಾದ ಚಿದಾನಂದ ಎಂ. ಗೌಡ, ಪುಟ್ಟಣ್ಣ, ಎಂ.ಎಲ್. ಅನಿಲ್ ಕುಮಾರ್, ದೇವೇಗೌಡ, ಎಸ್.ರವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ
ಅತಿಥಿಗಳಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಕಂಠೀರವ ಸ್ಟುಡಿಯೋ ನಿಯಮಿತ ಅಧ್ಯಕ್ಷ ಎನ್.ಎಂ.ರವಿ ನಾರಾಯಣರೆಡ್ಡಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಅವಗಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂಕಜ ಭಾಗಿಯಾಗಲಿದ್ದಾರೆ.












Click it and Unblock the Notifications