ಭಾರತೀಯರ ನಂಬಿಕೆಗೆ ಚ್ಯುತಿ ತಂದ ಕಾಂಗ್ರೆಸ್, ಯಾವಾಗಲೂ ಹಿಂದೂಗಳಿಗೆ ವಿರೋಧ: ಕೆ ಸುಧಾಕರ್
ಚಿಕ್ಕಬಳ್ಳಾಪುರ ಜನವರಿ 18: ಕಾಂಗ್ರೆಸ್ ನಾಯಕರು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಹೋಗುವುದಿಲ್ಲ ಎನ್ನುವ ಮೂಲಕ 140 ಕೋಟಿ ಭಾರತೀಯರ ನಂಬಿಕೆಗೆ ಚ್ಯುತಿ ತಂದಿದ್ದಾರೆ. ಆದರೆ ಅಸಂಖ್ಯಾತ ರಾಮಭಕ್ತರು ಸಂಭ್ರಮದಿಂದ ಕಾರ್ಯಕ್ರಮ ಆಚರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸ್ವಚ್ಛತೀರ್ಥ ಅಭಿಯಾನದ ಭಾಗವಾಗಿ ಬಾಗೇಪಲ್ಲಿ ತಾಲೂಕಿನ ಗಡಿದಂ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ, ಚಿಕ್ಕಬಳ್ಳಾಪುರ ನಗರದ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಭಾಗವಹಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್.ಕೆ.ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಸ್ವಯಂಸೇವಕರು, ಕರಸೇವಕರು ಹಾಗೂ ಭಕ್ತರಿಂದಾಗಿ ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಈ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಜಿ20 ಶೃಂಗಸಭೆ, ಸಂಸತ್ತಿನ ಉದ್ಘಾಟನೆಯ ಕಾರ್ಯಕ್ರಮ ಮೊದಲಾದ ಕಾರ್ಯಕ್ರಮಗಳಿಗೂ ಕಾಂಗ್ರೆಸ್ ನಾಯಕರು ಹೋಗಿಲ್ಲ. ಕಾಂಗ್ರೆಸ್ಸಿಗರು ಒಬ್ಬ ವ್ಯಕ್ತಿಗೆ ಅಗೌರವ ತೋರಿಸುತ್ತಿಲ್ಲ, 140 ಕೋಟಿ ಭಾರತೀಯರ ನಂಬಿಕೆಗೆ ಚ್ಯುತಿ ತಂದಿದ್ದಾರೆ. ಇದು ಶ್ರೇಯಸ್ಸು ತರುವುದಿಲ್ಲ ಎಂದರು.
ಕಾಂಗ್ರೆಸ್‌ನಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಇದು ಬಿಜೆಪಿಯ ಮಂದಿರವಲ್ಲ ಎನ್ನುವುದನ್ನು ಇವರು ಅರಿಯಲಿ. ಕಾಂಗ್ರೆಸ್ ಸರ್ಕಾರಗಳು ಯಾವಾಗಲೂ ಹಿಂದೂಗಳ ಭಾವನೆಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದರು.
ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿ ಈಗಿನ ಶಾಸಕರ ಕೊಡುಗೆ ಏನೂ ಇಲ್ಲ. ಯಾವುದೇ ಆಸ್ಪತ್ರೆಯ ಯೋಜನೆ ಜಿಲ್ಲೆಗೆ ಬಂದಿಲ್ಲ. ವಸತಿ ರಹಿತರಿಗೆ ಮನೆ ಕೊಡಿಸುವ, ನಿವೇಶನ ನೀಡುವ ಕೆಲಸ ಮಾಡಿಲ್ಲ. ಶಾಲೆಯನ್ನೂ ನೀಡಿಲ್ಲ. ಆದರೆ ಪ್ರತಿ ಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲಾಗುತ್ತಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಗ್ಯಾರಂಟಿ ಯೋಜನೆ ಕೆಲಸ ಮಾಡುವುದಿಲ್ಲ. ಇತ್ತೀಚೆಗೆ ಒಬ್ಬ ಕೆಎಎಸ್ ಅಧಿಕಾರಿಯನ್ನು ಭೇಟಿ ಮಾಡಿದ್ದು, ಅವರಿಗೆ ಸಂಬಳವಿಲ್ಲದೆ ನಾಲ್ಕು ತಿಂಗಳಾಗಿದೆ ಎಂದು ಹೇಳಿದರು. 200 ಯುನಿಟ್ ವಿದ್ಯುತ್ ಉಚಿತ ಎಂದಿದ್ದು, ಅದು ಕೂಡ ಸರಿಯಾಗಿ ಸಿಗುತ್ತಿಲ್ಲ. ಪದವೀಧರರಿಗೆ ನಿರುದ್ಯೋಗ ಭತ್ಯೆ ಎಂದಿದ್ದು, ಅದು ಎಲ್ಲರಿಗೂ ಸಿಗುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿಯನ್ನು ನಂಬಬೇಡಿ, ಮೋದಿ ಗ್ಯಾರಂಟಿಯನ್ನು ನಂಬಿ ಎಂದರು.
ಅಯೋಧ್ಯೆಯ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ, ಶ್ರೀರಾಮಚಂದ್ರ ಪ್ರಭುವನ್ನು ಬರಮಾಡಿಕೊಳ್ಳಲು ದೇಶದಲ್ಲಿ ಸಿದ್ಧತೆ ನಡೆದಿದೆ. ದೇವಸ್ಥಾನಗಳನ್ನು ಶುಚಿಗೊಳಿಸುವ ಮೂಲಕ ಭಗವಂತನಿಗೆ ಸೇವೆ ಸಲ್ಲಿಸಲಾಗುತ್ತಿದೆ. ಇದು ಸನಾತನ ಧರ್ಮದ ಮೌಲ್ಯವನ್ನು ಎತ್ತಿ ಹಿಡಿಯುವ ಕ್ರಮ. ಪ್ರಧಾನಿ ನರೇಂದ್ರ ಮೋದಿಯವರು ರಾಮರಾಜ್ಯವನ್ನು ಕಟ್ಟವ ಕೆಲಸ ಮಾಡುತ್ತಿದ್ದಾರೆ. ಅದರ ಜೊತೆಗೆ ಈ ವಿಶೇಷ ಕಾರ್ಯಕ್ರಮದ ಮೂಲಕ ಜನರು ಒಗ್ಗಟ್ಟಾಗುತ್ತಿದ್ದಾರೆ. ಇದು ಯಾವುದೇ ಧರ್ಮದ ಅಥವಾ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ನಾವೆಲ್ಲರೂ ಒಂದೇ ಎಂದು ಸಾರಿ ಹೇಳುವ ಭಾವನೆ. ಕಾಂಗ್ರೆಸ್ ನಾಯಕರು ದೊಡ್ಡ ಪ್ರಜಾಪ್ರಭುತ್ವವಾದಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಶ್ರೀರಾಮನಂತಹ ಪ್ರಜಾಪ್ರಭುತ್ವವಾದಿ ಬೇರೆ ಯಾರೂ ಇಲ್ಲ ಎಂದರು.
ಚಿಕ್ಕಬಳ್ಳಾಪುರದಲ್ಲಿದ್ದ ಹಾಲು ಒಕ್ಕೂಟವನ್ನು ಕೋಲಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಜಿಲ್ಲೆಯ ಲಕ್ಷಾಂತರು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಶಾಸಕರೇ ಗೆದ್ದಿದ್ದಾರೆ. ಒಬ್ಬರು ಸಚಿವರಾಗಿದ್ದಾರೆ. ಆದರೂ ಹಾಲು ಒಕ್ಕೂಟ ರದ್ದಾದಾಗ ಏನೂ ಮಾಡಲಿಲ್ಲ. ನಾನಾಗಿದ್ದರೆ ರಾಜೀನಾಮೆ ನೀಡುತ್ತಿದ್ದೆ. ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ಯೋಜನೆ ಬಾರದಿದ್ದಾಗ ನಾನು ರಾಜೀನಾಮೆ ನೀಡಿದ್ದೆ. ಕಾಂಗ್ರೆಸ್ ಶಾಸಕರಂತೆ ಅಧಿಕಾರದ ಹಂಗಿಗೆ ಬಿದ್ದಿರಲಿಲ್ಲ. ಎಚ್‌ಎನ್ ವ್ಯಾಲಿ, ಕೆಸಿ ವ್ಯಾಲಿ ಯೋಜನೆಯಡಿ 3ನೇ ಹಂತದ ಸಂಸ್ಕರಣೆ ತಂತ್ರಜ್ಞಾನ ತರಬೇಕಿದ್ದು, ಈ ಕುರಿತು ಸರ್ಕಾರ ಕ್ರಮ ವಹಿಸಬೇಕಿದೆ. ವೈದ್ಯಕೀಯ ಕಾಲೇಜು ಕಟ್ಟಡದ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದು ಆಗ್ರಹಿಸಿದರು.












Click it and Unblock the Notifications