ಬೆಳೆ, ಆರೋಗ್ಯಕ್ಕೆ ಮಾರಕವಾದ ಕ್ರಷರ್ ಧೂಳು: ವಾಹನ ತಡೆದು ರೈತರ ಪ್ರತಿಭಟನೆ
ಚಿಕ್ಕಬಳ್ಳಾಪುರ, ಆಗಸ್ಟ್ 11: ಪರಿಸರ ಹಾಗೂ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿರುವ ಕೆರೆಯ ಅಂಗಳದಲ್ಲಿ ನಿರ್ಮಾಣವಾಗಿರುವ ಜಲ್ಲಿ ಕ್ರಷರ್‌ಗಳನ್ನು ನಿಲ್ಲಿಸಿ, ದೇಶಕ್ಕೆ ತುತ್ತು ನೀಡುವ ಅನ್ನದಾತರನ್ನು ಉಳಿಸಿ ಎಂದು ಹಿರೇನಾಗವಲ್ಲಿ ಮತ್ತು ಜೊನ್ನಲಕುಂಟೆ ಸುತ್ತಮುತ್ತಲಿನ ರೈತರು ಟ್ರಾಕ್ಟರ್‌ಗಳನ್ನು ಅಡ್ಡ ಹಾಕಿ, ಟಿಪ್ಪರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿಯ ಜೊನ್ನಲಕುಂಟೆ ಸರ್ವೆ ನಂಬರ್‌ನಲ್ಲಿ ತಲೆ ಎತ್ತಿರುವ ಕ್ರಷರ್‌ಗಳಿಂದ ರೈತರ ಕೃಷಿ ಜಮೀನುಗಳು ಸಂಪೂರ್ಣ ಧೂಳುಮಯವಾಗಿದ್ದು, ಯಾವುದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲು ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಗಿದೆ.

ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕ್ರಷರ್ ಧೂಳಿನಿಂದ ಮುಕ್ತಿ ಕೊಡುವತನಕ ಟಿಪ್ಪರ್ ಲಾರಿಗಳನ್ನು ಬಿಡುವುದಿಲ್ಲ ಎಂದು ಟಿಪ್ಪರ್ ಗಳನ್ನು ನಿಲ್ಲಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ನಷ್ಟ ಪರಿಹಾರ ನೀಡುವಂತೆ ರೈತರ ಆಗ್ರಹ
ಪರಿಸರ ಹಾಳಾಗುತ್ತಿದೆ, ಕೆರೆಯೊಳಗೆ ಕ್ರಷರ್‌ಗಳಲ್ಲಿನ ತ್ಯಾಜ್ಯ ಸುರಿದು ಕೆರೆಯನ್ನು ಹಾಳು ಮಾಡುತ್ತಿದ್ದಾರೆ. ದನಕರುಗಳಿಗೆ ತಿನ್ನಲು ಮೇವಿಲ್ಲ. ಕುಡಿಯಲು ನೀರಿಲ್ಲದಂತಾಗಿದೆ ಹಾಗಾಗಿ ರೈತರಿಗೆ ಕಂಟಕವಾಗಿರುವ ಕ್ರಷರ್‌ಗಳನ್ನು ನಿಲ್ಲಿಸಿ, ಇಲ್ಲವೆ ರೈತರು ಬೆಳೆಯುತ್ತಿರುವ ಬೆಳೆಗಳು ಧೂಳಿನಿಂದ ನಾಶ ಆಗುತ್ತಿರುವುದಕ್ಕೆ ಸೂಕ್ತ ಪ್ರಮಾಣದಲ್ಲಿ ನಷ್ಟ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಸುಮಾರು ಮೂರು-ನಾಲ್ಕು ಗಂಟೆಗಳ ಕಾಲಕ್ಕೂ ಹೆಚ್ಚು ಸಮಯ ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಲಾರಿಗಳನ್ನು ನಡು ರಸ್ತೆಯಲ್ಲೇ ಅಡ್ಡಗಟ್ಟಿ ಕ್ರಷರ್ ಮಾಲೀಕರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು ಕೆರೆಯನ್ನು ಹಾಗೂ ಕ್ರಷರ್‌ಗಳ ಸುತ್ತಮುತ್ತಲಿನ ರೈತರ ಕೃಷಿ ಭೂಮಿ ಪರಿಶೀಲನೆ ನಡೆಸಿ ನಮಗೆ ನ್ಯಾಯ ಕೊಡಿಸಬೇಕೆಂದು ರೈತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಯುವ ಸ್ಥಳದಲ್ಲಿದ್ದ ರೈತ ಜಯಪ್ಪ ಮಾತನಾಡಿ 'ನನಗೆ ಜಕ್ಕಲಕುಂಟೆ ಸರ್ವೆ ನಂಬರ್‌ನಲ್ಲಿ ಜಮೀನಿದ್ದು, ಅರ್ಧ ಎಕೆರೆ ಜಮೀನಿಗೆ ಸೀಬೆ ಗಿಡ ಮತ್ತು ಅರ್ಧ ಭಾಗಕ್ಕೆ ಶೇಂಗಾ ಮತ್ತು ರಾಗಿ ಹಾಕಿದ್ದೇನೆ. ಆದರೆ ಕ್ರಷರ್‌ಗಳಿಂದ ಬರುವ ಧೂಳಿನಿಂದ ಬೆಳೆ ಸಂಪೂರ್ಣವಾಗಿ ನಾಶ ಆಗಿದೆ.
ಇನ್ನು ಈ ಬಗ್ಗೆ ನನಗೆ ನಷ್ಟ ಆಗುತ್ತಿರುವ ಬಗ್ಗೆ ಡಿಸೆಂಬರ್ 2022ರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಎ.ಸಿ.ಸಾಹೇಬರಿಗೆ ಮನವಿ ಪತ್ರ ನೀಡಿದ್ದೇನೆ. ಆದರೆ ಇದುವರೆಗೂ ನನಗೆ ಯಾವುದೇ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಇಂದು ನಾವು ಟಿಪ್ಪರ್‌ಗಳನ್ನು ನಿಲ್ಲಿಸಿದ್ದೇವೆ. ವಿಶೇಷ ಎಂದರೆ ಒಂದು ವೇಳೆ ಅಧಿಕಾರಿಗಳು ತನಿಖೆಗೆ ಬಂದರೆ ಕ್ರಷರ್ ಮಾಲೀಕರ ಪರವಾಗಿ ಮೇಲಾಧಿಕಾರಿಗಳಿಗೆ ವರದಿ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಅಧಿಕಾರಿಗಳೇ ಹೀಗೆ ಮಾಡಿದರೆ ನಾವು ಇನ್ನು ಯಾರನ್ನು ಕೇಳುವುದು ಎಂದು ತಮ್ಮ ಅಳಲು ತೋಡಿಕೊಂಡರು.
ರೈತ ಶಿವಪ್ಪ ಮಾತನಾಡಿ, ಸ್ಥಳೀಯ ನಿವಾಸಿಗಳಾದ ನಾವು ದಿನ ನಿತ್ಯ ಕ್ರಷರ್ ಗಳಿಂದ ಹೊರ ಬರುವ ಧೂಳನ್ನು ಕುಡಿದು ಬದುಕುತ್ತೇವೆ. ಸರ್ಕಾರಗಳು ದೇಶದ ಜನಕ್ಕೆ ಅನ್ನ ನೀಡುವ ಅನ್ನದಾತರನ್ನು ಉಳಿಸುವ ಕೆಲಸ ಮಾಡಬೇಕು, ಅದು ಬಿಟ್ಟು ತೆರಿಗೆ ಪಾವತಿಸುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ಖಾಸಗಿ ಕಂಪನಿಗಳ ಪರವಾಗಿ ಕೆಲಸ ಮಾಡಬೇಡಿ, ಅಧಿಕಾರಿಗಳು ಬಂದು ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಪ್ರತಿಭಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೆರೇಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ರೈತರನ್ನು ಮನವೊಲಿಸಲು ಪ್ರಯತ್ನಿಸಿದರ., ಸ್ವಲ್ಪ ಕಾಲ ಆಕ್ರೋಶ ವ್ಯಕ್ತಪಡಿಸಿದ ರೈತರು ಪೊಲೀಸರು ನೀಡಿದ ಆಶ್ವಾಸನೆಗೆ ಒಪ್ಪಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಒಟ್ಟಾರೆ ಪ್ರತಿ ದಿನ ಶುದ್ಧ ಗಾಳಿಯನ್ನು ಸೇವನೆ ಮಾಡಬೇಕಾದ ಜನರು ಕ್ರಷರ್‌ಗಳಿಂದ ಬರುತ್ತಿರುವ ಧೂಳನ್ನು ಕುಡಿಯುತ್ತಾ ಅನೇಕ ಕಾಯಿಲೆಗಳಿಗೆ ತುತ್ತಾಗಿ ಅಂಗವಿಕಲರಾಗುತ್ತಿದ್ದಾರೆ. ಕ್ರಷರ್ ಮಾಲೀಕರು ನೀಡುವ ಹಣವನ್ನು ಪಡೆಯುವ ಅಧಿಕಾರಿಗಳು ಅನ್ನದಾತನಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪ ಕೂಡ ಇದೆ. ಹೀಗಗಿ ಹೊಸ ಸರ್ಕಾರ, ಹೊಸ ಶಾಸಕರು ಬಂದರೂ ಇಲ್ಲಿನ ಜನರ ಬದುಕು ಬದಲಾವಣೆ ಆಗದೇ ಇರುವುದು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎನ್ನಬಹುದಾಗಿದೆ.
ಇನ್ನಾದರೂ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಗೆ ಹರಿಸುತ್ತಾರಾ ಇಲ್ಲವೇ ಸ್ಥಳೀಯ ರಾಜಕೀಯ ನಾಯಕರ ಕರೆಗಳಿಗೆ ಓಗುಟ್ಟು ಸಾರ್ವಜನಿಕರು, ರೈತರು ಹಾಗೂ ದನಕರುಗಳು ಧೂಳಿನ ಗಾಳಿ ಸೇವನೆ ಮಾಡಲು ಹಾಗೆ ಬಿಡುತ್ತಾರ ಕಾದು ನೋಡಬೇಕಾಗಿದೆ.












Click it and Unblock the Notifications