Chikkaballapur: ನಂದಿಗಿರಿಧಾಮದಲ್ಲಿ ರೋಪ್ ವೇ ಕಾಮಗಾರಿ ಆರಂಭಕ್ಕೆ ಮಹೂರ್ತ ಫಿಕ್ಸ್
ಚಿಕ್ಕಬಳ್ಳಾಪುರ ಜೂನ್ 20: ನಂದಿಗಿರಿಧಾಮಕ್ಕೆ ರೋಪ್ ವೇ ನಿರ್ಮಾಣಕ್ಕಿದ್ದ ತೊಡಕುಗಳು ಬಹುತೇಕ ನಿವಾರಣೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ. ರೋಪ್ ವೇ ನಿರ್ಮಾಣ ಸಂಸ್ಥೆಗೆ ಜಮೀನು ಹಸ್ತಾಂತರ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಮುಕ್ತಿ ಸಿಗಲಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಂದಿಗಿರಿ ಧಾಮದಲ್ಲಿ ರೋಪ್ ವೇ ಕಾಮಗಾರಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಸಭೆ ನಡೆಸಿ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸ ಲಾಗಿತ್ತು. ಅಲ್ಲದೇ ಬೆಂಗಳೂರಿನಲ್ಲೂ ಅರಣ್ಯ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚಿಸಲಾಗಿತ್ತು.

ಬೇಗ ಕಾಮಗಾರಿಗೆ ಸೂಚನೆ:
ಇದೀಗ ರಾಜ್ಯ ಸರಕಾರದ ಅಪರ ಮುಖ್ಯಕಾರ್ಯದರ್ಶಿ ಹಾಗೂ ನಂದಿಗಿರಿಧಾಮ ಸಮಗ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಲಿನಿ ರಜನೀಶ್ ಅವರು ಅಧಿಕಾರಿಗಳ ಸಭೆ ನಡೆಸಿ ರೋಪ್ ವೇ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದಾರೆ. ಅಲ್ಲದೇ ರೋಪ್ ವೇ ಕಾಮಗಾರಿ ನಡೆಯುವ ಸ್ಥಳ ಪರಿ ಶೀಲನೆ ನಡೆಸಿದ್ದು, ನಂದಿ ಗಿರಿಧಾಮದ ಸಮಗ್ರ ಅಭಿವೃದ್ಧಿಗೆ ಹಲವಾರು ಸೂಚನೆ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ಶುರು:
ನಂದಿಗಿರಿಧಾಮ ದಲ್ಲಿ 3 ಕಿ.ಮೀ. ಉದ್ದದ ರೋಪ್ ವೇಯನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಕಾಮಗಾರಿ ಆರಂಭಕ್ಕೂ ಮುನ್ನ ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆಯಿಂದ ಎನ್‌ಬಿಸಿ ಹಾಗೂ ರೋಪ್ ವೇ ಹಾದುಹೋಗುವ ಹಾದಿಯಲ್ಲಿ ಬರುವ ಖಾಸಗಿ ಜಮೀನುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆದಿತ್ತು. ಈಗ ಅದು ಅಂತಿಮ ಹಂತಕ್ಕೆ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ.
ಎಲ್ ಟಿಪಿ (ಲೋಯರ್ ಟರ್ಮಿನಲ್ ಪಾಯಿಂಟ್) ಮತ್ತು ಯುಟಿಪಿಗಳಲ್ಲಿ (ಅಪ್ಪರ್ ಟರ್ಮಿನಲ್ ಪಾಯಿಂಟ್) ಜಮೀನನ್ನು ರೋಪ್ ವೇ ನಿರ್ಮಾಣ ಸಂಸ್ಥೆಗೆ ಹಸ್ತಾಂತರ ನಡೆ ದಿದೆ. ರೋಪ್ ವೇ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ 9 ಎಕರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಸೇರಿದ 7 ಎಕರೆ ಜಮೀನನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಏನಿದು ಯೋಜನೆ?:
ನಂದಿಬೆಟ್ಟದಲ್ಲಿ ಪ್ಯಾಸೆಂಜರ್ ರೋಪ್ ವೇ ಅಭಿವೃದ್ದಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್ ವೇ ಪ್ರೈ.ಲಿ. ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿ ಸಲಾಗಿತ್ತು. ಸುಮಾರು 2.93 ಕಿ.ಮೀ. ರೋಪ್ ವೇಳೆ ಅಭಿವೃದ್ಧಿಪಡಿಸಲು ಸೂಚಿಸಲಾಗಿತ್ತು.
ರೋಪ್ ವೇ ಜತೆ ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಪೆಷನ್‌ಗಳಲ್ಲಿ ಆದಾಯ ಮತ್ತು ಆದಾಯೇತರ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರವಾಸಿಗರಿಗೆ ಹೋಟೆಲ್ ಮತ್ತು ವಸತಿ ಸೌಕರ್ಯ, ಬೆಟ್ಟದ ಕೆಳಗೆ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಬಾಡಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಕುಡಿಯುವ ನೀರಿನ ಘಟಕಗಳು, ಶೌಚಾಲಯ, ಟಿಕೆಟ್ ಕೌಂಟರ್‌ಗಳು, ವಿಶ್ರಾಂತಿ ಕೊಠಡಿಗಳು, ರೆಸ್ಟೋರೆಂಟ್, ಟೀ ಮತ್ತು ಕಾಫಿ ಮಳಿಗೆಗಳು ಕೂಡ ಈ ಮೆಗಾ ಯೋಜನೆಯ ಭಾಗವಾಗಿದೆ.
ಬಿಜೆಪಿ ಸರಕಾರದ ಅವಧಿಯಲ್ಲೇ ರೂಪ್ ವೇ ನಿರ್ಮಾಣ ಸಂಬಂಧ ಸರ್ವೆ ಕಾರ್ಯಗಳು ನಡೆದು 2023ರ ಮಾರ್ಚ್ ತಿಂಗಳಲ್ಲಿ ರೋಪ್ ವೇ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಾ ಗಿತ್ತು. ಆದರೆ ಇನ್ನೇನು ರೋಪ್ ವೇ ಕಾಮಗಾರಿ ಶುರುವಾಗಬೇಕು ಎನ್ನುವ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಆನಂತರ ಹಲವಾರು ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ಈಗ ಅಂತಿಮ ಹಂತದಲ್ಲಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ.

ಹೇಗಿರಲಿದೆ ರೋಪ ವೇ?
ಈ ಮೊದಲು ರೋಪ್ ವೇ ನಿರ್ಮಾಣಕ್ಕೆ 93.40 ಕೋಟಿ ರೂ.ಗೆ ಯೋಜನಾ ವೆಚ್ಚವನ್ನು ನಿಗದಿಗೊಳಿಸಲಾಗಿತ್ತು. ಆದರೆ ಈಗ ಅದು 115 ಕೋಟಿ ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಬಂಡವಾಳ ಹೂಡುವ ರೋಪ್ ವೇ ನಿರ್ಮಾಣ ಸಂಸ್ಥೆಗೆ 30 ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ. 3 ಕಿ. ಮೀ. ಉದ್ದದ ರೋಪ್ ವೇನಲ್ಲಿ 18 ಪಿಲ್ಲರ್ ಗಳು ಬರಲಿದ್ದು, 50 ಕೇಬಲ್ ಕಾರ್ ಗಳು ಹೋಗುವ ಮತ್ತು 50 ಕೇಬಲ್ ಕಾರ್ ಗಳು ಬರುವ ವ್ಯವಸ್ಥೆಯಿದೆ. ಪ್ರತಿ ಕಾರ್ ನಲ್ಲಿ ಆರು ಜನರು ಕುಳಿತುಕೊಳ್ಳಲು ಅವಕಾಶವಿರಲಿದೆ.
ಈ ಕುರಿತು ಅಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ.ವಿ. ರಾಮಪ್ರಸಾದ್ ಮನೋಹರ್ ಮಾತನಾಡಿ ಈ ಪ್ಯಾಸೆಂಜರ್ ರೋಪ್‌ವೇ ಒಂದು ಅಪ್ರತಿಮ ಪ್ರಯತ್ನವಾಗಿದ್ದು, ಇದು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಭೂಪಟದಲ್ಲಿ ನಂದಿ ಬೆಟ್ಟವನ್ನು ಸೇರಿಸಲು ತುಂಬಾ ಅನುಕೂಲಕರವಾಗಿದೆ. ಜತೆಗೆ ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯದ ಮೂಲ ಒದಗಿಸುತ್ತದೆ. ಅಲ್ಲದೆ, ಸರಕಾರಕ್ಕೂ ಆದಾಯ ತರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಟ್ಟದ ಮಾಲಿನ್ಯ ಕಡಿಮೆ ಮಾಡಲು ಸಹಾಯ

ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು.
ಇನ್ನೂ ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಂದಿ ಗಿರಿಧಾಮದ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ರೋಪ್ ವೇ ಕಾಮಗಾರಿ ಸಂಬಂಧ ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಿದ್ದಾರೆ. ಇನ್ನು ಒಂದಷ್ಟು ಜಮೀನು ಗುತ್ತಿಗೆ ಸಂಸ್ಥೆಗೆ ನೀಡಬೇಕಿದ್ದು, ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications