Get Updates
Get notified of breaking news, exclusive insights, and must-see stories!

Chikkaballapur: ಶಾಸಕರ ಸ್ವಗ್ರಾಮದಲ್ಲೆ ಮೂಲೆಗುಂಪಾದ ಗರಡಿ ಮನೆ: ಕಾಮಗಾರಿಗೆ ಇದ್ದ ಆಸಕ್ತಿ ಉದ್ಘಾಟನೆಗಿಲ್ಲ

ಚಿಕ್ಕಬಳ್ಳಾಪುರ ಮೇ 7: ಒಂದು ಕಾಲದಲ್ಲಿ ಯುವಕರ ಅಚ್ಚುಮೆಚ್ಚಿನ ಅಭ್ಯಾಸ ತಾಣಗಳಾಗಿದ್ದ ಗರಡಿ ಮನೆ ಕನಿಷ್ಠ ಪಕ್ಷ ಉದ್ಘಾಟನೆಯನ್ನೂ ಸಹ ಕಾಣದೆ ಗಿಡ ಬಳ್ಳಿಗಳಿಂದ ಆವೃತವಾಗಿ ಕಾಲಗರ್ಭ ಸೇರುವ ದುಸ್ಥಿತಿಗೆ ಬಂದಿದ್ದು ಅಧಿಕಾರಿಗಳಿಗೆ ಇಲ್ಲೊಂದು ಕಟ್ಟಡ ನಿರ್ಮಾಣವಾಗಿರುವ ಮಾಹಿತಿ ಸಹ ಇಲ್ಲವಾಗಿದೆ.

ಚಿಕ್ಕಬಳ್ಳಾಪುರದ ಹಾಲಿ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಚಿವ ಡಾ. ಕೆ. ಸುಧಾಕರ್ ರವರ ಸ್ವಗ್ರಾಮ ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಗ್ರಾಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಾಣ ಮಾಡಿರುವ ವ್ಯಾಯಾಮ ಶಾಲೆ ಇಂದು ಪಾಳುಬಿದ್ದ ಕೊಂಪೆಯಂತಾಗಿದ್ದು, ಸರಕಾರ ಲಕ್ಷಾಂತರ ರೂಪಾಯಿ ಅನುದಾನ ನಿರುಪಯುಕ್ತವಾಗಿದೆ.

Chikkaballapur Orphaned Garadi Mane The interest in the work has not been inaugurated

ವ್ಯಾಯಾಮ ಶಾಲೆ, ಕಸರತ್ತಿನ ಮನೆ ಎಂದೆಲ್ಲಾ ಕರೆಸಿಕೊಳ್ಳುವ ಗರಡಿ ಮನೆಗಳ ವೈಭವ ಇತ್ತೀಚೆಗೆ ಬಹುತೇಕ ಮರೆಯಾಗುವ ಸ್ಥಿತಿಗೆ ತಲುಪಿವೆ. ಒಂದು ಕಾಲದಲ್ಲಿ ನಾಡ ಕುಸ್ತಿಗೆ ಮೈಸೂರು ಹೆಸರುವಾಸಿಯಾಗಿತ್ತು. ಮೈಸೂರಿನ 'ರಾಜಧಾನಿ' ಎನಿಸಿದ್ದ ಕುಸ್ತಿ ಕೇವಲ ದಸರಾ ಕುಸ್ತಿಗೆ ಮಾತ್ರ ಸೀಮಿತವಾಗಿದೆ. ಪೈಲ್ವಾನರನ್ನು ಹುಟ್ಟುಹಾಕಬೇಕಿದ್ದ ಗರಡಿ ಮನೆಗಳ ಸಂಖ್ಯೆಯೂ ಸಹ ದಿನೇ ದಿನೇ ಕಡಿಮೆಯಾಗುತ್ತಿವೆ.

ಊರಿನ ಯುವಕರು ಗರಡಿ ಮನೆಗೆ ಹೋಗಿ ಅಭ್ಯಾಸ ಮಾಡಲೆಂದು, ಕಠಿಣ ಪರಿಶ್ರಮದಿಂದ ದೇಹ ಹುರಿಗೊಳಿಸಿ, ಎದುರಾಳಿಗಳನ್ನು ಕ್ಷಣಾರ್ಧದಲ್ಲಿ ಮಣ್ಣು ಮುಕ್ಕಿಸುವ ಪಟ್ಟುಗಳನ್ನು ಕರಗತ ಮಾಡಿಕೊಳ್ಳಲೆಂದು, ಆರೋಗ್ಯವಂತ ಪೈಲ್ವಾನ ರನ್ನು ಸೃಷ್ಟಿಸಲೆಂದು ಸರಕಾರ ಲಕ್ಷಾಂತರ ರೂ. ಹಣ ಖರ್ಚು ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿ ಸುತ್ತದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ನಿರ್ಲಕ್ಷ್ಯದಿಂದ ಅನೇಕ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ಇಬ್ಬರು ಶಾಸಕರನ್ನು ಕೊಟ್ಟ ಊರನ್ನು ಮರೆತ ಅಧಿಕಾರಿಗಳು?

ಮಾಜಿ ಅರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾದ ಪ್ರದೀಪ್ ಈಶ್ವರ್ ರವರ ಸ್ವಗ್ರಾಮವಾದ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ಅದನ್ನು ಸಾರ್ವಜನಿಕರ ಸದುಪಯೋಗಕ್ಕೆ ನೀಡದೆ ನಿರ್ಲಕ್ಷ ಮಾಡಿರುವುದು, ಇಲಾಖೆಯ ಅನುದಾನದಲ್ಲಿ ಕಟ್ಟಡ ನಿರ್ಮಾಣ ಆಗಿರುವ ವಿಚಾರ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷತೆಯನ್ನು ತೋರಿಸುತ್ತಿದೆ.

ನಿರ್ಮಾಣವಾಗಿದ್ದು ಯಾವಾಗ?

ಮಾಜಿ ಶಾಸಕ ಡಾ.ಕೆ . ಸುಧಾಕರ್ ಅವರ ಅಧಿಕಾರದ ಅವಧಿಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಪೆರೇಸಂದ್ರ ಗ್ರಾಮದಲ್ಲಿ ನಿರ್ಮಾಣವಾದ ಹೊಸ ಗರಡಿ ಮನೆ ಅಂದಿನ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಇಂದಿಗೂ ಅನಾಥವಾಗಿದ್ದು ಇಂದಿನ ಶಾಸಕರಿಂದಾದರೂ ಪೂರ್ಣಗೊಳ್ಳುತ್ತಾ ಕಾದುನೋಡಬೇಕಿದೆ.

Chikkaballapur Orphaned Garadi Mane The interest in the work has not been inaugurated

ಹಬ್ಬಿದ ಗಿಡ ಗಂಟೆಗಳು:

ಕಟ್ಟಡದ ಅಷ್ಟ ದಿಕ್ಕುಗಳಲ್ಲೂ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಗಿಡಗಳು, ಪೊದೆಗಳು, ಬಾಗಿಲು ತೆರೆ ಯಲು ಸಾಧ್ಯವಿಲ್ಲದಂತೆ ಹಬ್ಬಿಕೊಂಡಿರುವ ಬಳ್ಳಿಗಳು, ವಿಷ ಜಂತುಗಳ ವಾಸಸ್ಥಳವಾಗಿದ್ದು, ಕಟ್ಟಡವನ್ನು ಹೊಸಬರು ಗುರುತು ಹಿಡಿಯದಂತೆ ಬೆಳೆದು ನಿಂತಿರುವ ಬಳ್ಳಿಗಳನ್ನು ಕಂಡಾಗ ಯಾವುದೋ ಹಳೇಯ ಪಾಳು ಬಿದ್ದಿರುವ ಕಟ್ಟಡವೆಂದು ಅನಿಸುತ್ತದೆ.

ಉದ್ಘಾಟನೆ ಭಾಗ್ಯವಿಲ್ಲ:

ಕಟ್ಟಡ ಕಾಮಗಾರಿ ಪೂರ್ಣವಾಗಿ 4 ವರ್ಷಕ್ಕೂ ಮೇಲಾಗಿದೆ. ಇಂದಿಗೂ ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ದೊರೆತಿಲ್ಲ ಕಸರತ್ತು ನಡೆಸುವ ಮನಸ್ಸುಳ್ಳ ಯುವ ಸಮುದಾಯದ ಬಳಕೆಗೆ ಲಭ್ಯವಾಗಿಲ್ಲ, ಕಟ್ಟಡ ನೋಡಿದಾಗ ಕ್ರೀಡಾ ಇಲಾಖೆ ಅನುದಾನ ನೀಡಿದೆ, ಆದರೆ ಅದನ್ನು ಸಾರ್ವಜನಿಕ ಬಳಕೆಗೆ ಒಪ್ಪಿಸುವ ಕೆಲಸ ಮಾಡದೆ ಇಲಾಖೆಯೂ ಸಹ ಕೈತೊಳೆದುಕೊಂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಯುವಕರಿಗೆ ಅನುಕೂಲ:

ಗರಡಿ ಮನೆ ಮತ್ತು ವ್ಯಾಯಾಮ ಶಾಲೆ ಉದ್ಘಾಟನೆಯಾದರೆ ಗ್ರಾಮೀಣ ಪ್ರದೇಶದಲ್ಲಿ ದೈಹಿಕ ಕಸರತ್ತು ಮಾಡುವ ಇಚ್ಛೆಯುಳ್ಳವರಿಗೆ ಅನುಕೂಲವಾಗುತ್ತದೆ. ಪ್ರಮುಖವಾಗಿ ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಗರಡಿ ಮನೆ ನಿರ್ಮಿಸಲಾಗಿದೆ. ಹೀಗೆ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಕಟ್ಟಡ ದಿನದಿಂದ ದಿನಕ್ಕೆ ಅವಸಾನದತ್ತ ಸಾಗುತ್ತಿದ್ದು, ಕಬ್ಬಿಣದ ಕಿಟಕಿ ಬಾಗಿಲುಗಳು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದ್ದು ಪಾಳು ಬೀಳುವ ಮುನ್ನ ಕಟ್ಟಡ ಸಾರ್ವಜನಿಕ ಬಳಕೆಗೆ ಅನುವು ಸಿಗಲಿ.

ಸಲಕರಣೆಗಳಿಲ್ಲ:

ಕಳೆದ ನಾಲ್ಕು ಐದು ವರ್ಷಗಳ ಹಿಂದೆ ಕ್ರೀಡಾ ಇಲಾಖೆಯ 25 ಲಕ್ಷ ರು.ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ ಗರಡಿ ಮನೆಗೆ ವ್ಯಾಯಾಮಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ನೀಡುವಂತೆ ಕೆಲವರು ಕೋರಿದ್ದರು. ಈ ಬಗ್ಗೆ ನಾವು ಇಲಾಖೆಯ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದವು, ಪರಿಕರಗಳನ್ನು ಕೊಡಲು ಸಾಧ್ಯವಿಲ್ಲ, ಕಟ್ಟಡ ಮಾತ್ರ ಕಟ್ಟಿಸಿ ಕೊಡಬಹುದೆಂದು ಇಲಾಖೆಯ ಕೇಂದ್ರ ಕಚೇರಿಯಿಂದ ಮರು ಉತ್ತರ ಸಹ ಬಂದಿದೆ ಎಂದು ತಿಳಿದು ಬಂದಿದೆ.

Chikkaballapur Orphaned Garadi Mane The interest in the work has not been inaugurated

ಶಾಸಕರು ಕಾಳಜಿ ವಹಿಸಲಿ:

ಸರಕಾರಿ ವೈದ್ಯಕೀಯ ಕಾಲೇಜು ಪೆರೇಸಂದ್ರ ಬಳಿಯ ಅರೂರು ಗ್ರಾಮದಲ್ಲಿ ನಿರ್ಮಾಣವಾಗಿ ಉದ್ಘಾಟನೆಯಾದ ನಂತರ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಮ ಪರೇಸಂದ್ರ ಅಂತಹ ಗ್ರಾಮದಲ್ಲಿ ಯುವ ಸಮೂಹಕ್ಕೆ ನೇರವಾಗುವ ನಿಟ್ಟಿನಲ್ಲಿ ಹಾಲಿ ಶಾಸಕರಾದ ಪ್ರದೀಪ್ ಈಶ್ವರ್ ರವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಗರಡಿ ಮನೆ ತೆರೆಯುವಂತಾಗಲಿ ಹಾಗೂ ಅವಶ್ಯಕತೆ ಇರುವ ಎಲ್ಲಾ ರೀತಿಯ ಸಲಕರಣೆಗಳನ್ನು ಸಹ ಒದಗಿಸುವಂತೆ ಕ್ರಮ ಜರುಗಿಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

ಅಧಿಕಾರಿಗಳಿಗೆ ಮಾಹಿತಿ ಇಲ್ಲ :-

ಈ ಕುರಿತು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಉಪ ನಿರ್ದೇಶಕರನ್ನು ಸಂಪರ್ಕಿಸಿದರೆ ಅಧಿಕಾರಿಗಳಿಗೆ ಈ ವಿಚಾರದ ಕುರಿತು ಮಾಹಿತಿ ಇಲ್ಲ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂಬ ನೆಪ ಹೇಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕನಿಷ್ಠ ಪಕ್ಷ ಚುನಾವಣಾ ನೀತಿ ಸಂಹಿತೆ ಪ್ರಕ್ರಿಯೆಗಳೆಲ್ಲ ಮುಗಿದ ನಂತರವಾದರೂ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸುತ್ತಾರೋ ಅಥವಾ ಈ ಹಿಂದಿನ ಅಧಿಕಾರಿಗಳಂತೆ ಮರೆತು ಹೋಗುತ್ತಾರೋ ಕಾದು ನೋಡಬೇಕಿದೆ.

ಈ ಬಗ್ಗೆ ಮಾತನಾಡಿದ ಭಗತ್ ಸಿಂಗ್ ಚಾರ್ ಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಸಂದೀಪ್ ರೆಡ್ಡಿ, 'ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಆರೋಗ್ಯವಂತ ಯುವ ಸಮೂಹ ಅತ್ಯವಶ್ಯಕ, ಹಾಗಾಗಿ ಈಗಾಗಲೇ ಪೂರ್ಣಗೊಂಡಿರುವ ಗರಡಿ ಮನೆ, ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿ, ದೇಹದಂಡನಿಗೆ ಅವಶ್ಯಕವಿರುವ ಎಲ್ಲಾ ಸಲಕರಣೆಗಳನ್ನು ಒದಗಿಸುವ ಮೂಲಕ ಯುವಕರು ದೈಹಿಕ ಕಸರತ್ತು ಮಾಡಲು ಅವಕಾಶ ಮಾಡಿಕೊಡಬೇಕು' ಎಂದರು.

'ವ್ಯಾಯಾಮ ಶಾಲೆಯ ಕಟ್ಟಡ ಸಾರ್ವಜನಿಕರಿಗೆ ಸದುಪಯೋಗವಾಗಲಿ, ಸ್ಥಳೀಯ ಶಾಸಕರಾದ ಪ್ರದೀಪ್ ಈಶ್ವರ್ ರವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯಾಯಾಮ ಶಾಲೆಯ ಕಟ್ಟಡ ಉದ್ಘಾಟನೆ ಹಾಗೂ ಅಗತ್ಯ ಸಲಕರಣೆಗಳನ್ನು ಒದಗಿಸಿ ಕೊಡುವ ಮೂಲಕ ಕ್ರೀಡೆ ಹಾಗೂ ಉತ್ತಮ ಅರೋಗ್ಯಕ್ಕಾಗಿ ದೇಹ ದಂಡನೆ ಮಾಡುವವರಿಗೆ ಪ್ರೋತ್ಸಾಹ ನೀಡಲಿ' ಎಂದು ಪೆರೇಸಂದ್ರದ ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಎನ್.ಮಂಜುನಾಥ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+