ಆಡಳಿತ ಪಕ್ಷದ ಸದಸ್ಯರಲ್ಲೇ ಭಾರಿ ಸ್ಪರ್ಧೆ: ರಂಗೇರಿದ ಚಿಕ್ಕಬಳ್ಳಾಪುರ ಲೋಕಲ್ ಕಣ- ಅಧ್ಯಕ್ಷ ಸ್ಥಾನ ಮೀಸಲಾತಿ ವಿರುದ್ಧ ಕೂಗು
ಗುಡಿಬಂಡೆ ಆಗಸ್ಟ್ 7: ರಾಜ್ಯ ಸೇರಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಮೀಸಲು ಬಿಡುಗಡೆಯಾಗಿದೆ. ಸರಕಾರ ಸೋಮವಾರ ಮೀಸಲು ಪಟ್ಟಿ ಬಿಡುಗಡೆಗೊಳಿಸಿದ್ದು, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ ನಿಗದಿ ಮಾಡಿದ್ದು ಎಲ್ಲೆಡೆ ಆಕಾಂಕ್ಷಿಗಳು ರಾಜಕೀಯ ಹಾವು ಏಣಿ ಆಟಕ್ಕೆ ಮುಂದಾಗಿದ್ದಾರೆ.
ಗುಡಿಬಂಡೆ ಪಟ್ಟಣ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಅಧ್ಯಕ್ಷ ಗಾದಿಗಾಗಿ ಪೈಪೋಟಿಗೆ ಇಳಿದಿದ್ದರೆ, ಕಳೆದ 30 ವರ್ಷಗಳಿಂದ ಎಸ್.ಟಿ ಮಹಿಳೆಗೆ ಅಧ್ಯಕ್ಷರಾಗುವ ಅವಕಾಶ ಸಿಕ್ಕಿಲ್ಲದ ಕಾರಣ ಮೀಸಲಾತಿ ಮರು ಪರಿಶೀಲನೆಗಾಗಿ ನ್ಯಾಯಾಲಯದ ಮೊರೆ ಹೋಗಲು ಪಕ್ಷೇತರ ಅಭ್ಯರ್ಥಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

2021 ರಿಂದ 2024 ರ ಅವಧಿಯ ಅಧಿಕಾರ ಅವಧಿಯಲ್ಲಿ ನಡೆದ ರಾಜಕೀಯ ಹೈ ಡ್ರಾಮದಲ್ಲಿ ಅಂದು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಸರಕಾರದ ಅರೋಗ್ಯ ಸಚಿವ ಡಾ. ಕೆ. ಸುಧಾಕರ್ ರವರನ್ನು ಬೆಂಬಲಿಸಿದ್ದ ಕೆಲ ಸದಸ್ಯರು ಬಿಜೆಪಿ ಬೆಂಬಲದೊಂದಿಗೆ ಬಿ. ಸಿ.ಎಂ ( ಎ ) ಮಹಿಳೆಗೆ ನಿಗದಿಯಾಗಿದ್ದ ಮೀಸಲಾತಿ ಮೂಲಕ 7ನೇ ವಾರ್ಡ್ ಸದಸ್ಯೆ ಬಷೀರಾ ರಿಜ್ವಾನ್ ಅಧ್ಯಕ್ಷರಾಗಿ ಅಧಿಕಾರ ಗಿಟ್ಟಿಸಿಕೊಂಡಿದ್ದರು, ನಂತರ ನಡೆದ ಅವಿಶ್ವಾಸ ಮಂಡನೆ, ರಾಜೀನಾಮೆ ಪ್ರಹಸನ ಹಾಗೂ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿ ಕಾಂಗ್ರೆಸ್ ಬಿಂಬಲಿಸಿದ್ದರು, ನಂತರ 10ನೇ ವಾರ್ಡ್ ಸದಸ್ಯೆ ನಗೀನ್ ತಾಜ್ ರವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಾಗಿತ್ತು. ಈಗಲೂ ಮತ್ತೆ ಕಾಂಗ್ರೆಸ್ ಸದಸ್ಯರ ಬಲಾ ಬಲದಿಂದ ಆಡಳಿತಾರೂಢ ಪಕ್ಷದ ಸದಸ್ಯರೇ ಚುಕ್ಕಾಣಿ ಹಿಡಿಯಲು ಭಾರಿ ಪೈಪೋಟಿ ಎದುರಾಗಲಿದೆ.
ನಿರಾಸೆ ಮೂಡಿಸಿದ ಮೀಸಲಾತಿ?
ಪಕ್ಷೇತರ ಸದಸ್ಯರೊಬ್ಬರು ಕಳೆದ 30 ವರ್ಷಗಳ ಮೀಸಲಾತಿ ಪಟ್ಟಿ ಹಿಡಿದು ಮುಂದಿನ ಮೀಸಲಾತಿ ಬಗ್ಗೆ ತಮ್ಮದೆಯಾದ ಲೆಕ್ಕಾಚಾರದಲ್ಲಿ ನಿರತರಾಗಿದ್ದರು. ಮೀಸಲಾತಿ ರೋಸ್ಟರ್ ಹಾಗೂ ಪಟ್ಟಣದ ಜನಸಂಖ್ಯಾ ಆದಾರದಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನ ಎಸ್.ಟಿ ಮಹಿಳಾ ಪರ ಬರಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದರು. ಅಂತಿಮವಾಗಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆಂದು ತಿಳಿದು ಬಂದಿದೆ.
ಯಾರು ಆಕಾಂಕ್ಷಿಗಳು?
ಗುಡಿಬಂಡೆ ಪಟ್ಟಣ ಪಂಚಾಯತಿಯಲ್ಲಿ 11 ಸದಸ್ಯರಿದ್ದು, ಕಾಂಗ್ರೆಸ್ -6, ಜೆಡಿಎಸ್-2, ಹಾಗೂ ಪಕ್ಷೇತರ-3 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಸದಸ್ಯರು ಸಹ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದು, ಪಕ್ಷೇತರ ಸದಸ್ಯರಾದ 2ನೇ ವಾರ್ಡಿನ ಜಿ. ರಾಜೇಶ್, 9ನೇ ವಾರ್ಡಿನ ಪಕ್ಷೇತರ ಸದಸ್ಯೆ ವೀಣಾ ನಿತಿನ್ ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಹೆಸರು ಕೇಳಿಬರುತ್ತಿದೆ.
1990 ರಿಂದ 2024 ರ ಮಾಹಿತಿ:
ಪಟ್ಟಣ ಪಂಚಾಯತಿ ಆಡಳಿತಾವಧಿ, ಮೀಸಲು:-
ವರ್ಷ 1990 ರಿಂದ 1995 ರವರೆಗೆ ನಿಗದಿಯಾಗಿದ್ದ ಬಿಸಿಎಂ (ಬಿ ) ಮೀಸಲಾತಿಯಲ್ಲಿ ಅಧ್ಯಕ್ಷರಾಗಿ ವಿ. ಅಶ್ವತ್ತಪ್ಪ, 1996-2001 ರ ಅವಧಿಯ ಮೊದಲ ಅವಧಿಯಲ್ಲಿ ಬಿ.ಸಿ.ಎಂ (ಬಿ) ನಾಗರಾಜು, ಎರಡನೇ ಅವಧಿಯಲ್ಲಿ ಸಾಮಾನ್ಯ ಮಹಿಳೆ ಗೆ ನಿಗಧಿಯಾಗಿದ್ದ ಮೀಸಲಾತಿಯಲ್ಲಿ ಇಷಾರತ್ ಅಪ್ಜ, 2002 ರಿಂದ 2007 ರ ಅವಧಿಯ ಮೊದಲ ಅವಧಿಯಲ್ಲಿ ಸಾಮಾನ್ಯ ಮೀಸಲಾತಿಯಡಿ ಎ. ನಾಗರಾಜು ಹಾಗೂ ಎರಡನೇ ಅವಧಿಯಲ್ಲಿ ಬಿ.ಸಿ.ಎಂ (ಬಿ) ಮೀಸಲಾತಿಯಲ್ಲಿ ಎ. ನಾಗರಾಜು ಪುನರ್ ಆಯ್ಕೆಯಾದ್ದರು.
2008 ರಿಂದ 2013 ರ ಅವಧಿಯಲ್ಲಿ ಪ. ಜಾತಿ ಮಹಿಳೆಗೆ ನಿಗಡಿಯಾಗಿದ್ದ ಮೀಸಲಾತಿಯಡಿ ಚನ್ನಮ್ಮ, ಎರಡನೇ ಅವಧಿಯಲ್ಲಿ ಬಿಸಿಎಂ (ಎ) ಮಹಿಳೆಗೆ ನಿಗದಿಯಾಗಿದ್ದ ಮೀಸಲಾತಿಯಡಿ ಜಬೀನ್ ತಾಜ್ ಅಧ್ಯಕ್ಷರಾಗಿದ್ದರು. 2014 ರಿಂದ 2018 ರ ಅವಧಿಯಲ್ಲಿ ಬಿಸಿಎಂ (ಎ) ನಿಗದಿಯಾಗಿದ್ದು ರಿಯಾಜ್ ಪಾಷಾ ಮತ್ತು ಅಪ್ಸರ್ ಪಾಷಾ ಅಧಿಕಾರ ವಹಿಸಿಕೊಂಡಿದ್ದರು, ಎರಡನೇ ಅವಧಿಯಲ್ಲಿ ಸಾಮಾನ್ಯ ವರ್ಗಕ್ಕೆ ಸಿಕ್ಕ ಅವಕಾಶದಲ್ಲಿ ಚಂದ್ರಶೇಖರ್ ನಾಯ್ಡು ಹಾಗೂ ದ್ವಾರಕನಾಥ ನಾಯ್ಡು ಅಧಿಕಾರ ಹಂಚಿಕೊಂಡು ಅಧ್ಯಕ್ಷರಾಗಿದ್ದರು.
ಬಿಜೆಪಿ ಬೆಂಬಲಿತ ಸದಸ್ಯರಿಲ್ಲದೆ ಅಧಿಕಾರ ಪಡೆದಿದ್ದ ಬಿಜೆಪಿ :-
ಅನ್ಯ ಪಕ್ಷಗಳ ಬೆಂಬಲಿತ ಚುನಾಯಿತ ಸದಸ್ಯರು ಏಕಾಏಕಿ ಬಿಜೆಪಿ ಬೆಂಬಲಿಸಿದ್ದಕ್ಕಾಗಿ ಮೊದಲ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಡುವೆ ಮಾರಾ ಮಾರಿಗೆ ಕಾರಣವಾಗಿತ್ತು. ಅಂದಿನ ಬಿಜೆಪಿ ಸರಕಾರದ ಸಚಿವ ಡಾ.ಕೆ. ಸುಧಾಕರ್, ಅಂದಿನ ಬಿಜೆಪಿ ಸಂಸದ ಬಿ.ಎನ್. ಬಚ್ಛೇಗೌಡ ಹಾಗೂ ಎಸ್. ಎನ್. ಸುಬ್ಬಾರೆಡ್ಡಿ ನಡುವೆ ದೊಡ್ಡ ರಂಪಾಟಕ್ಕೆ ಕಾರಣವಾಗಿ ಅಂತಿಮವಾಗಿ ಬಿಜೆಪಿ ಪಕ್ಷಕ್ಕೆ ಅಧಿಕಾರ ಲಭಿಸಿತ್ತು. ಇದೀಗ ಕೊನೆಯ ಅವಧಿ ಯಾಗಿರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಲು ಹಲವರ ಕಸರತ್ತು ಜೋರಾಗಿಯೇ ನಡೆದಿದೆ. ಯಾರಿಗೆ ಲಕ್ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
9ನೇ ವಾರ್ಡಿನ ಪಕ್ಷೇತರ ಸದಸ್ಯೆ ವೀಣಾ ನಿತಿನ್ ಮಾತನಾಡಿ, 'ಕಳೆದ 1990 ರಿಂದ ಇಲ್ಲಿಯ ತನಕ ಗುಡಿಬಂಡೆ ಪ.ಪಂ ಅಧ್ಯಕ್ಷ ಸ್ಥಾನವು ಎಸ್.ಟಿ ಮಹಿಳೆಗೆ ಮೀಸಲಾತಿ ಸಿಕ್ಕಿಲ್ಲ, ಈ ಬಾರಿ ಎಸ್.ಟಿ ಮಹಿಳೆಗೆ ಮೀಸಲಾತಿ ಸಿಗದ ಹಿನ್ನಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ. ಈ ಬಾರಿ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.
ಪ.ಪಂ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗಧಿಯಾಗಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಜೊತೆ ಉತ್ತಮ ಒಡನಾಟವಿದ್ದು, ತನ್ನನ್ನು ಬೆಂಬಲಿಸುವ ವಿಶ್ವಾಸವಿದ್ದು, ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಗೆಲ್ಲುವ ವಿಶ್ವಾಸವಿದೆ.












Click it and Unblock the Notifications