ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ: ಪ್ರಧಾನಿ ಭೇಟಿಯಾದ ಸುಧಾಕರ್
ಬಯಲುಸೀಮೆ ಪ್ರದೇಶವಾದ ಚಿಕ್ಕಬಳ್ಳಾಪುರ ಜಿಲ್ಲೆಯು ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ನೀರಿಗಾಗಿ ಶಾಶ್ವತ ಪರಿಹಾರಕ್ಕಾಗಿ ಹಲವು ವರ್ಷಗಳಿಂದಲೂ ಈ ಭಾಗದ ಜನ ಬೇಡಿಕೆ ಇಟ್ಟಿದ್ದಾರೆ. ಆದರೂ ಈ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದರಾದ ಡಾ.ಕೆ.ಸುಧಾಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರವೂ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಸುಧಾಕರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದೆ. ಕರ್ನಾಟಕದ ಪ್ರಗತಿಗಾಗಿ ಅವರ ದೃಷ್ಟಿಕೋನವನ್ನು ಕೇಳುವುದು ಯಾವಾಗಲೂ ಸ್ಪೂರ್ತಿದಾಯಕ ಎಂದಿದ್ದಾರೆ. ಇಂದಿನ ಸಭೆಯಲ್ಲಿ ನಾವು ನಿರ್ದಿಷ್ಟವಾಗಿ ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರ ಮತ್ತು ಸಾಮಾನ್ಯವಾಗಿ ಬಯಲುಸೀಮೆ ಜಿಲ್ಲೆಗಳಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಾರೆ.

ಈ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ಪರಿಹಾರದ ಅಗತ್ಯವನ್ನು ಒತ್ತಿ ಹೇಳಿದ್ದೇನೆ. ಕ್ಷೇತ್ರದ ಜನರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಸಹ ಕೋರಿದ್ದೇವೆ. ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣಕ್ಕೆ ಕೈಗೊಂಡ ವಿವಿಧ ಉಪಕ್ರಮಗಳನ್ನು ಪ್ರಧಾನಿ ಮೋದಿ ಅವರು ನನಗೆ ವಿವರಿಸಿದರು. ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿ ಅಂತರ್ಜಲ ಮಟ್ಟವನ್ನು ಮಾತ್ರ ಅವಲಂಬಿಸಿರುವ ಮಳೆಯಾಶ್ರಿತ ಬಯಲುಸೀಮೆ ಜಿಲ್ಲೆಗಳಲ್ಲಿ ಇದೇ ರೀತಿಯ ಮಾದರಿಯನ್ನು ಜಾರಿಗೆ ತರಲು ಸಹ ಸೂಚಿಸಿರುವುದಾಗಿ ತಿಳಿಸಿದ್ದಾರೆ.
200 ಕೋಟಿ ಅನುದಾನಕ್ಕೆ ಬೇಡಿಕೆ
ಕೇಂದ್ರ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರನ್ನು ಕೂಡ ಸಂಸದ ಸುಧಾಕರ್ ಅವರು ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗಳ ಕುರಿತಂತೆ ವಿಸ್ತೃತವಾಗಿ ಚರ್ಚಿಸಿ ಮನವಿ ಪತ್ರ ಕೂಡ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೆರೆ-ಕುಂಟೆಗಳಿಗೆ ನೀರು ತುಂಬಿಸಿ, ಆ ಮೂಲಕ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಟಲ್ ಭೂಜಲ ಯೋಜನೆಯಡಿ 200 ಕೋಟಿ ರೂಪಾಯಿ ಅನುದಾನ ನೀಡಲು ಮನವಿ ಕೂಡ ಮಾಡಿದ್ದಾರೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದ ಕೂಡಲೇ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಸುಧಾಕರ್ ಸಹಿಸುದ್ದಿ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರ ಹಿಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಎತ್ತಿನಹೊಳೆ ಯೋಜನೆಯಲ್ಲಿರುವ ಜಿಲ್ಲೆಯ ಜನರಿಗೆ ಬೇಸಿಗೆ ಸಮೀಪಿಸಿದ ಕೂಡಲೇ ಕುಡಿಯುವ ನೀರಿಗಾಗಿ ಸಮಸ್ಯೆ ಹೇಳತೀರದು. ಈ ನಿಟ್ಟಿನಲ್ಲಿ ಮುಂದೆ ಕೇಂದ್ರ ಸರ್ಕಾರದಿಂದ ಏನೆಲ್ಲ ಅನುಕೂಲ ಸಿಗಲಿದೆ ಎಂಬುದನ್ನು ಕ್ಷೇತ್ರದ ಜನ ಕಾಯುತ್ತಿದ್ದಾರೆ.












Click it and Unblock the Notifications