ಜೈಲಿಗೆ ಕಳಿಸಿದಕ್ಕೆ ಶಾಸಕನಾದೆ, ಗೆದ್ದು ಸುಧಾಕರ್ ರಾಜಕೀಯ ಜೀವನ ಮುಗಿಸಿದೆ- ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ, ಜೂನ್ 7: ನನ್ನನ್ನು ಜೈಲಿಗೆ ಕಳುಹಿಸಿದ್ದಕ್ಕೆ ಎಂಎಲ್ಎ ಆಗಿಬಿಟ್ಟೆ. ಐದು ವರ್ಷಗಳ ಪಟ್ಟ ಕಷ್ಟವನ್ನು ಸಹಿಸಿಕೊಂಡು, ಈಗ ಚುನಾವಣೆಯಲ್ಲಿ ಗೆದ್ದು ಸುಧಾಕರ್ ಅವರ ರಾಜಕೀಯ ಜೀವನವನ್ನು ಮುಗಿಸಿದ್ದೇನೆ. ಆದರೆ ದ್ವೇಷವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ದ್ವೇಷ ಬೇಡ. ಕೇಸ್ ಹಾಕಿಸಿ ಜೈಲಿಗೆ ಕಳುಹಿಸುವುದು ಸುಲಭ. ಆದರೆ ಸಾಕಷ್ಟು ಜನರು ಅದನ್ನೇ ಸೇಡಾಗಿ ತೆಗ್ದುಕೊಳ್ಳುತ್ತಾರೆ. ಇನ್ನಷ್ಟು ಅಪರಾಧಗಳಿಗೆ ಕಾರಣವಾಗುತ್ತಾರೆ. ಆದರೆ ನಾನು ನನ್ನನ್ನು ಜೈಲಿಗೆ ಹಾಕಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿ ಕಷ್ಟವನ್ನು ಸಹಿಸಿಕೊಂಡು ಈಗ ಶಾಸಕನಾಗಿದ್ದೇನೆ ಎಂದರು.

ಇದೇ ಕಲ್ಯಾಣ ಮಂಟಪದಲ್ಲಿ ಮೂರು ತಿಂಗಳ ಹಿಂದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಟ್ಟಿದ್ದೆ. ಆದರೆ ಅವತ್ತು ನಾನು ಶಾಸಕ ಆಗುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ ಎಂದರು.
ಚಿಂತಾಮಣಿ ಟೈಗರ್ ಎಂ.ಸಿ.ಸುಧಾಕರ್ ಅವರು ಮೊಟ್ಟಮೊದಲಿಗೆ ಕಾಂಗ್ರೆಸ್ ಶಾಸಕನಾಗ್ತಿಯಾ ಎಂದು ಕೇಳಿದ್ದಕ್ಕೆ ನನಗೆ ಶಾಕ್ ಆಯ್ತು. ಏಕೆಂದರೆ ಸುಧಾಕರ್ ವಿರುದ್ಧ ಗೆಲ್ಲೋಕೆ ಸಾಧ್ಯವೇ ಎಂದು ಒಂದು ಕ್ಷಣ ದಂಗಾಗಿದ್ದು ನಿಜ. ಆದರೆ ರಮೇಶ್ ಕುಮಾರ್, ಶಿವಶಂಕರೆಡ್ಡಿ, ಕೃಷ್ಣಬೈರೇಗೌಡ, ಸೀತಾರಾಮ್ ಸರ್ ಮಾರ್ಗದರ್ಶನ ಧೈರ್ಯದಿಂದ ಒಪ್ಪಿಕೊಂಡೆ. ನನಗೆ ಬಿಜೆಪಿ ಮುಖಂಡರು ನಾನಾ ರೂಪದಲ್ಲಿ ಬೈದರು ಲೆಕ್ಕ ಮಾಡಲಿಲ್ಲ. ಕ್ಷೇತ್ರದ ಮುಖಂಡರು ಕಾರ್ಯಕತರು ಕೈ ಹಿಡಿದು ಗೆಲ್ಲಿಸಿದರು ಎಂದು ಹೇಳಿದರು.
ಐದು ವರ್ಷಗಳ ಹಿಂದೆ ನ್ಯಾಯಕೊಡಿ ಎಂದು ಕೇಳಿದರೆ ನನ್ನ ಜೈಲಿಗೆ ಹಾಕಿದರು. ಸುಧಾಕರ್ ಗೆದ್ದು ಬಂದು ನನ್ನ ಮೇಲೆ 22 ಕೇಸು ಹಾಕಿಸಿದ್ದರು. ಕೋರ್ಟ್‌ನಲ್ಲಿ ಎಷ್ಟೋ ಬಾರಿ ಕಣ್ಣೀರು ಹಾಕಿದ್ದೇನೆ. ಇಷ್ಟೇ ಅಲ್ಲದೆ ಕೋರ್ಟ್‌ಗೆ ಓಡಾಡೋಕೆ ಕಾಸಿಲ್ಲದೆ ನನ್ ಬೈಕ್ ಅನ್ನು ವಾಪಸಂದ್ರದಲ್ಲಿ ಮಾರಾಟ ಮಾಡಿ ಕೋರ್ಟ್ ಫೀಸ್ ಕಟ್ಟಿದ್ದೇನೆ. ಈ ಚುನಾವಣೆಯಲ್ಲಿ ಏನಾದರೂ ಸೋತಿದ್ದರೆ 50 ಕೇಸ್ ಹಾಕಿಸುತ್ತಿದ್ದರು. ಕೋರ್ಟ್ ಪಕ್ಕದಲ್ಲೇ ನಾನು ಮನೆ ಮಾಡಿಕೊಂಡಿರಬೇಕಿತ್ತು ಎಂದು ಮಾಜಿ ಶಾಸಕ ಸುಧಾಕರ್ ಕೊಟ್ಟ ಕಷ್ಟವನ್ನು ಹೇಳಿಕೊಂಡರು.

ನನಗೆ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿವೆ. ನಮ್ಮ ಕ್ಷೇತ್ರ ಮಾತ್ರವಲ್ಲ. ಇಡೀ ರಾಜ್ಯದ ಎಲ್ಲ ಕಡೆಯಿಂದ ಕರೆಗಳು ಬರುತ್ತಿವೆ. ನೀವು ಕರೆ ಮಾಡಿದರೆ ನಾನು ಸಾಕಷ್ಟು ಬಾರಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಯಾರೂ ಬೇಸರ ಮಾಡಿಕೊಳ್ಳಬೇಡಿ. ಏಕೆಂದರೆ ಕೆಲಸದ ಒತ್ತಡದಲ್ಲಿ ಇರುತ್ತೇನೆ. ಇಲ್ಲೇ ಮನೆ ಮಾಡುತ್ತೇನೆ ಪ್ರತಿದಿನ ನನ್ನ ಮನೆಗೆ ಬನ್ನಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇನೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೂ ನಮಸ್ತೆ ಚಿಕ್ಕಬಳ್ಳಾಪುರ ಹೆಸರಲ್ಲಿ ನಿಮ್ಮ ಮನೆಗಳಿಗೆ ಬಂದು ನಿಮ್ಮ ಕಷ್ಟ ಕೇಳುತ್ತೇನೆ. ಆನಂತರ ಮನೆಯಲ್ಲೇ ಕೂತು ಮಧ್ಯಾಹ್ನದವರೆಗೂ ನಿಮ್ಮ ಕಷ್ಟಗಳಿಗೆ ದನಿಯಾಗುತ್ತೇನೆ ಎಂದು ಹೇಳಿದರು.
ಎಲ್ಲರ ಸಮಸ್ಯೆಗಳಿಗೂ ಸಕಾಲಕ್ಕೆ ಸ್ಪಂದಿಸಲು ಆಗುತ್ತಿಲ್ಲ. ಹೀಗಾಗಿ ಎಂಎಲ್ಎ ಪ್ರದೀಪ್ ಈಶ್ವರ್ ಹೆಸರಲ್ಲಿ ವೆಬ್ ಸೈಟ್ ಮಾಡಿಸುತ್ತಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಮೆಸೇಜ್ ಮಾಡಿದರೆ 48 ಗಂಟೆಯೊಳಗೆ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ. ಇಲ್ಲವಾದಲ್ಲಿ ಸಮಸ್ಯೆ ಪರಿಹಾರಕ್ಕೆ ಏಕೆ ಆಗುತ್ತಿಲ್ಲ ಎನ್ನುವುದರ ಬಗ್ಗೆ ಕಾರಣವನ್ನು ಹೇಳುವ ಕೆಲಸ ಮಾಡುತ್ತೇನೆ. ನೀವ್ಯಾರು ತಲೆ ತಗ್ಗಿಸೋ ಕೆಲಸ ಮಾಡಲ್ಲ ನನ್ನ ನಂಬಿ ಎಂದು ಆಶ್ವಾಸನೆ ನೀಡಿದರು.
ಐದು ವರ್ಷಗಳ ಹಿಂದೆ ಅವರ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಎಂಬ ಕಾರಣಕ್ಕೆ ಅವರ ಪರವಾಗಿ ಕೆಲಸ ಮಾಡಿದ್ದೆ. ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ಪಟ್ಟೆ. ಎಲೆಕ್ಷನ್ ಮುಗಿಯಿತು ಅವರು ಬಿಎಂಟಿಸಿ ಉಪಾಧ್ಯಕ್ಷರಾದರು. ಆದರೆ ಈ ಗಲಾಟೆಯಲ್ಲಿ ಮೃತಪಟ್ಟ ನವೀನ್ ಅವರ ಕುಟುಂಬ ಬೀದಿಗೆ ಬಿತ್ತು. ಅವರ ಕುಟುಂಬಕ್ಕೆ ಯಾರೂ ನೆರವಿಗೆ ಹೋಗಲಿಲ್ಲ ಎಂದು ಕೆ.ವಿ.ನವೀನ್ ಕಿರಣ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ವೀರಪ್ಪಮೊಯ್ಲಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎಂ.ಶಿವಾನಂದ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ನಂದಿ ಆಂಜಿನಪ್ಪ, ಪ್ರಕಾಶ್, ಸುರೇಶ್, ರಫೀಕ್, ಶ್ರೀನಿವಾಸ್, ಹಿರೇನಾಗವಲ್ಲಿ ಮೋಹನ್ ರೆಡ್ಡಿ, ಮಂಡಿಕಲ್ ಎಂ.ಪಿ.ಕುಪೇಂದ್ರ, ಆರ್.ಚೊಕ್ಕನಹಳ್ಳಿ ಗಂಗಾಧರ್, ಮಮತಾಮೂರ್ತಿ ಸೇರಿದಂತೆ ನೂರಾರು ಮುಖಂಡರು ಭಾಗಿಯಾಗಿದ್ದರು.












Click it and Unblock the Notifications