Chikkaballapur Lok Sabha Election Results 2024: ವಿಧಾನಸಭಾ ಚುನಾವಣೆ ಸೋಲನ್ನು ಹಿಮ್ಮೆಟ್ಟುತ್ತಾರಾ ಸುಧಾಕರ್!?
ಚಿಕ್ಕಬಳ್ಳಾಪುರ, ಜೂನ್. 02: ಈ ಬಾರಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿದ್ದ ಲೋಕಸಭಾ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಒಂದು. ಮಾಜಿ ಸಚಿವರ ಎದುರು ಮೊದಲ ಬಾರಿಗೆ ಯುವ ನಾಯಕರೊಬ್ಬರನ್ನು ಕಾಂಗ್ರೆಸ್ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ನಡೆಸಿದೆ. ಇಬ್ಬರು ನಾಯಕರಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ, ಸಚಿವ ಕೆ ಸುಧಾಕರ್ ಅವರನ್ನು ಸೋಲಿಸಿ ಯಾರು ನಿರೀಕ್ಷಿಸದ ಫಲಿತಾಂಶ ನೀಡಿದ್ದ ಕ್ಷೇತ್ರ ಚಿಕ್ಕಬಳ್ಳಾಪುರ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರವನ್ನು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತು ಒಕ್ಕಲಿಗರ ಮತಗಳಿಂದ ಬಿಜೆಪಿ ಮೊದಲ ಬಾರಿಗೆ ಕಸಿದುಕೊಂಡಿತ್ತು. ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಮಾಜಿ ಸಚಿವ ಸುಧಾಕರ್ ಕೂಡ ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ಭಾರಿ ಪ್ರಯತ್ನ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಗೆಲುವು ಯಾರಿಗೆ?
ಮಾಜಿ ಸಚಿವ ಸುಧಾಕರ್ ಅವರಿಗೆ ಹೋಲಿಸಿಕೊಂಡರೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಚುನಾವಣಾ ರಾಜಕೀಯಕ್ಕೆ ಹೊಸ ಮುಖ. ಆದರೆ, ಶ್ರೀಮಂತ ಮತ್ತು ಪ್ರಭಾವಿ ರಾಜಕೀಯ ಕುಟುಂಬ, ಎಂ ಎಸ್ ರಾಮಯ್ಯ ಮನೆತನದಿಂದ ಬಂದವರು. ಹೀಗಾಗಿ ಚಿಕ್ಕಬಳ್ಳಾಪುರದ ಜನತೆಗೆ ಪರಿಚಿತ ಮುಖ. ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಇವರ ಪ್ರಭಾವವಿದೆ. ಅದು ಮತಗಳಾಗಿ ಪರಿವರ್ತನೆಯಾಗಿದೆಯೆ ಎಂಬುದು ಜೂನ್ ನಾಲ್ಕರಂದು ತಿಳಿಯಲಿದೆ.
ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಕಾಂಗ್ರೆಸ್ ಬಿಟ್ಟು ಬಿಜೆಪಿಯ ಆಪರೇಷನ್ ಕಮಲಕ್ಕೆ ಸಿಲುಕಿದವರು. ಹೀಗಾಗಿ ಕಾಂಗ್ರೆಸ್ ನಾಯಕರಲ್ಲಿಯೂ ಅವರ ಆಪ್ತರಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಒಳ ಏಳು ಬಿಟ್ಟಿರುವ ಸಾಧ್ಯತೆ ಹೆಚ್ಚಾಗಿದೆ. ಸಚಿವರಾಗಿ ಮತ್ತು ಶಾಸಕರಾಗಿ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಹೆಸರು ಕೂಡ ಇದೆ ಹೀಗಾಗಿ ಸುಧಾಕರ್ ತಾವೇ ಗೆಲ್ಲುವುದು ಎಂಬ ವಿಶ್ವಾಸದಲ್ಲಿದ್ದಾರೆ.

ಇನ್ನು, 1962ರಿಂದ ಚಿಕ್ಕಬಳ್ಳಾಪುರ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, 1996ರಲ್ಲಿ ಜನತಾದಳ ಹಾಗೂ 2019ರಲ್ಲಿ ಬಿಜೆಪಿಯಿಂದ ಎರಡು ಬಾರಿ ಮಾತ್ರ ಕಾಂಗ್ರೆಸ್ ಕ್ಷೇತ್ರ ಕಳೆದುಕೊಂಡಿದೆ. ಈವರೆಗಿನ 13 ಚುನಾವಣೆಗಳಲ್ಲಿ, ಒಬಿಸಿ ಅಭ್ಯರ್ಥಿಗಳು 1996 ರಿಂದ ಸತತವಾಗಿ ಆರು ಚುನಾವಣೆಗಳನ್ನು ಗೆದ್ದಿದ್ದಾರೆ.












Click it and Unblock the Notifications